More

    ಸುರಂಗದಲ್ಲಿ ಸಿಲುಕಿರುವ 41 ಕಾರ್ಮಿಕರ ರಕ್ಷಣೆಗೆ ಇನ್ನೂ ಕೆಲವೇ ಮೀಟರ್​ಗಳು ಬಾಕಿ: ಸ್ಥಳದಲ್ಲಿವೆ 20 ಆಂಬ್ಯುಲೆನ್ಸ್​

    ಡೆಹ್ರಾಡೂನ್​: ಕುಸಿದ ಸುರಂಗದಲ್ಲಿ ಸಿಲುಕಿ ಕಳೆದ ಹನ್ನೊಂದು ದಿನಗಳಿಂದ ಜೀವ ಕೈಯಲ್ಲಿ ಹಿಡಿದುಕೊಂಡು ನೋವು, ಸಂಕಟಗಳಿಂದ ಪರಿತಪಿಸುತ್ತಿರುವ 41 ಮಂದಿ ಕಾರ್ಮಿಕರಿಗೆ ಹೊಸ ಜೀವನದ ಆಸೆ ಚಿಗರೊಡೆದಿದೆ. ಅವರನ್ನು ಮರಳಿ ಕರೆತರಲು ನಿರಂತರವಾಗಿ ನಡೆಯುತ್ತಿರುವ ರಕ್ಷಣಾ ಕಾರ್ಯಾಚರಣೆ ಅಂತಿಮ ಹಂತಕ್ಕೆ ಬಂದಿದ್ದು, ನಿತ್ರಾಣ ಸ್ಥಿತಿಯಲ್ಲಿರುವ ಕಾರ್ಮಿಕರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸುವ 20 ಆಂಬ್ಯುಲೆನ್ಸ್​ಗಳು ಸ್ಥಳದಲ್ಲಿ ಬೀಡು ಬಿಟ್ಟಿವೆ.

    ಕೇಂದ್ರದ ಮಹತ್ವಾಕಾಂಕ್ಷೆಯ ಚಾರ್ ಧಾಮ್ ಯೋಜನೆಯ ಭಾಗವಾದ ಸುರಂಗವು ಉತ್ತರಾಖಂಡದ ಸಿಲ್ಕ್ಯಾರಾ ಮತ್ತು ದಂಡಲ್ಗಾಂವ್ ನಡುವೆ ಉತ್ತರಕಾಶಿ ಮತ್ತು ಯಮುನೋತ್ರಿಯನ್ನು ಸಂಪರ್ಕಿಸಲು ಉದ್ದೇಶಿಸಿರುವ ರಸ್ತೆಯಲ್ಲಿದೆ. ಇದರ ಕಾಮಗಾರಿ ಭರದಿಂದ ಸಾಗಿತ್ತು. ಆದರೆ, ಮಣ್ಣು ಕುಸಿತದಿಂದಾಗಿ ನ.12 ರಂದು 41 ಕಾರ್ಮಿಕರು ಸುರಂಗದಲ್ಲಿ ಸಿಲುಕಿಕೊಂಡಿದ್ದಾರೆ.

    ಕಾರ್ಮಿಕರು ಜೀವಂತವಾಗಿದ್ದು, ಅವಶೇಷಗಳಿಂದ ಮುಚ್ಚಿ ಹೋಗಿರುವ ಸುರಂಗವನ್ನು ತೆರವುಗೊಳಿಸಿ, ಕಾರ್ಮಿಕರನ್ನು ಕಾಪಾಡಲು ಇನ್ನೂ 12 ಮೀಟರ್​ಗಳಷ್ಟೇ ಬಾಕಿ ಇದೆ. ರಕ್ಷಣಾ ಕಾರ್ಯ ಮುಗಿಯುತ್ತಿದಂತೆ ಕಾರ್ಮಿಕರನ್ನು ಹೊರಗೆ ಕರೆತರು ಬೆಡ್​ಗಳನ್ನು ರೆಡಿ ಮಾಡಿಕೊಂಡಿದ್ದು, ಇನ್ನು ಕೆಲವೇ ಕ್ಷಣಗಳಲ್ಲಿ ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರ್​ ಧಾಮಿ ಘಟನಾ ಸ್ಥಳವನ್ನು ತಲುಪಲಿದ್ದಾರೆ.

    ಸದ್ಯ ರಕ್ಷಣಾ ಕಾರ್ಯಾಚರಣೆ ಮಹತ್ವದ ಹಂತಕ್ಕೆ ತಲುಪಿದೆ. ಸುರಂಗದಲ್ಲಿ ಸಿಲುಕಿರುವ 41 ಕಾರ್ಮಿಕರಲ್ಲಿ ಜಾರ್ಖಂಡ್ ರಾಜ್ಯಕ್ಕೆ ಸೇರಿದ 15 ಕಾರ್ಮಿಕರು ವೈದ್ಯಕೀಯವಾಗಿ ಫಿಟ್ ಆಗಿದ್ದಾರೆ ಎಂದು ಸರ್ಕಾರ ಘೋಷಿಸಿದ್ದು, ಅವರನ್ನು ವಿಮಾನದಲ್ಲಿ ತವರಿಗೆ ಕರೆತರಲು ಸಕಲ ತಯಾರಿ ಮಾಡಿಕೊಂಡಿದೆ. ಕಾರ್ಮಿಕರನ್ನು ಉತ್ತರಾಖಂಡ ರಾಜಧಾನಿ ಡೆಹ್ರಾಡೂನ್​ನಿಂದ ರಾಂಚಿಗೆ ಏರ್​ಲಿಫ್ಟ್​ ಮಾಡುವುದಾಗಿ ಸರ್ಕಾರ ಮಾಹಿತಿ ನೀಡಿದೆ.

    ಪ್ರಧಾನಿ ಕಾರ್ಯಾಲಯದ ಮಾಜಿ ಸಲಹೆಗಾರ ಭಾಸ್ಕರ್​ ಖುಲ್ಬೆ ಅವರು ರಕ್ಷಣಾ ಕಾರ್ಯಾಚರಣೆಯ ಮಾಹಿತಿಯನ್ನು ನೀಡಿದ್ದು, ನಾವು ಇನ್ನೂ 6 ಮೀಟರ್‌ಗಳಷ್ಟು ಮುಂದೆ ಸಾಗಲು ಸಾಧ್ಯವಾಯಿತು ಎಂದು ಘೋಷಿಸಲು ನಮಗೆ ಸಂತೋಷವಾಗುತ್ತಿದೆ ಮತ್ತು ಮುಂದಿನ 2 ಗಂಟೆಗಳಲ್ಲಿ ನಾವು ಮುಂದಿನ ಹಂತಕ್ಕೆ ತಯಾರಿ ನಡೆಸುತ್ತಿದ್ದೇವೆ ಎಂದರು.

    ಎಲ್ಲವೂ ಪ್ಲ್ಯಾನ್​ನಂತೆಯೇ ಸಾಗುತ್ತಿದೆ ಎಂದು ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ. ಇಂದು ಮಧ್ಯರಾತ್ರಿ ಅಥವಾ ನಾಳೆ ರಕ್ಷಣಾ ಕಾರ್ಯ ಮುಗಿಯುವ ನಿರೀಕ್ಷೆ ಇದ್ದು, ಕೇಂದ್ರ ಸಾರಿಗೆ ಸಚಿವ ನಿತಿನ್​ ಗಡ್ಕರಿ ಅವರು ರಕ್ಷಣಾ ಕಾರ್ಯಾಚರಣೆಯ ಪ್ರತಿಯೊಂದು ಅಂಶಗಳನ್ನು ಬಹಳ ಸೂಕ್ಷ್ಮವಾಗಿ ಗಮನಿಸುತ್ತಿರುವುದಾಗಿ ಉನ್ನತ ಮೂಲಗಳು ತಿಳಿಸಿವೆ.

    ಒಂದೆಡೆ ರಕ್ಷಣಾ ಕಾರ್ಯ ಮುಂದುವರಿದಿದ್ದರೆ, ಇನ್ನೊಂದೆಡೆ ಬೇಯಿಸಿದ ಆಹಾರ ಮತ್ತು ಔಷಧಿಗಳನ್ನು 6 ಮತ್ತು 4 ಇಂಚಿನ ಪೈಪ್​ಲೈನ್​ ಮೂಲಕ ಸರಬರಾಜು ಮಾಡಲಾಗುತ್ತಿದೆ. ಸಿಲುಕಿರುವ ಕಾರ್ಮಿಕರ ನಡುವೆ ವಿಡಿಯೋ ಸಂವಹನ ಸಹ ನಡೆಸಲಾಗಿದ್ದು, ಇದು ಕಾರ್ಮಿಕರಿಗೆ ಮತ್ತೊಂದು ಹಂತದ ಭರವಸೆಯನ್ನು ನೀಡಿದೆ. ರಕ್ಷಣಾ ತಂಡಗಳು 24 ಮೀಟರ್ ಆಳವನ್ನು ತಲುಪಲು 900 ಎಂಎಂ ಪೈಪ್‌ಗಳನ್ನು ಬಳಸಿಕೊಂಡವು ಮತ್ತು ಅದಕ್ಕೂ ಮೀರಿ ಮತ್ತೆ 36 ಮೀಟರ್‌ಗೆ ಮುನ್ನಡೆಯಲು 800 ಎಂಎಂ ಪೈಪ್‌ಗಳನ್ನು ಬಳಸಿಕೊಂಡರು. ಪುರುಷರು ತೆವಳಲು ಸಾಕಷ್ಟು ಅಗಲವಾಗಿರುವ ಪೈಪ್ ಅನ್ನು ಕಾರ್ಮಿಕರು ಇರುವ ಜಾಗಕ್ಕೆ ತಳ್ಳಲು ಅಂದಾಜು 60 ಮೀಟರ್ ತೆರವುಗೊಳಿಸಬೇಕು ಎಂದು ಅಧಿಕಾರಿಗಳು ಈ ಹಿಂದೆಯೇ ಹೇಳಿದ್ದರು. ಸದ್ಯಕ್ಕೆ ಇನ್ನು ಕೆಲವೇ ಮೀಟರ್​ಗಳು ಬಾಕಿ ಇದೆ ಎಂದು ಹೇಳಲಾಗಿದೆ.

    ಸಿಲುಕಿರುವ ಕಾರ್ಮಿಕರಿಗೆ ಕಳೆದ ರಾತ್ರಿ ವೆಜ್ ಪಲಾವ್, ಮಟರ್-ಪನೀರ್ ಮತ್ತು ಬೆಣ್ಣೆಯೊಂದಿಗೆ ಚಪಾತಿಗಳನ್ನು ಒಳಗೊಂಡಿರುವ ಬಿಸಿ ಊಟವನ್ನು ನೀಡಲಾಗಿದೆ. ಸುಲಭವಾಗಿ ಜೀರ್ಣಕ್ರಿಯೆ ಖಚಿತಪಡಿಸಿಕೊಳ್ಳಲು ವೈದ್ಯಕೀಯ ಮೇಲ್ವಿಚಾರಣೆಯಲ್ಲಿ ಈ ಊಟವನ್ನು ತಯಾರಿಸಲಾಗುತ್ತದೆ. 6-ಇಂಚಿನ ಅಗಲದ ಪೈಪ್‌ಲೈನ್ ಮೂಲಕ ಆಹಾರವನ್ನು ವಿತರಿಸಲಾಗಿದೆ. ಈ ಪೈಪ್​ಲೈನ್​ ಮೂಲಕವೇ ಹಣ್ಣುಗಳನ್ನು ಕಳುಹಿಸಲು ಮತ್ತು ಕಾರ್ಮಿಕರೊಂದಿಗೆ ಸಂವಹನ ನಡೆಸಲಾಗುತ್ತಿದೆ.

    ಕೆಲವೇ ದಿನದ ಹಿಂದೆ ಮೊದಲ ಬಾರಿಗೆ ಪೈಪ್‌ಲೈನ್​ಗೆ ಎಂಡೋಸ್ಕೋಪಿಕ್ ಫ್ಲೆಕ್ಸಿ ಕ್ಯಾಮೆರಾವನ್ನು ಅಳವಡಿಸಿ, ಕಾರ್ಮಿಕರ ಚಿತ್ರಗಳನ್ನು ಸೆರೆಹಿಡಿಯಲಾಯಿತು. ಎಲ್ಲರೂ ಸುಸ್ಥಿತಿಯಲ್ಲಿರುವುದು ಗೊತ್ತಾದ ಬಳಿಕ ರಕ್ಷಣಾ ತಂಡಗಳಿಗೆ ಮತ್ತು ಕುಟುಂಬಗಳು ನಿಟ್ಟುಸಿರು ಬಿಟ್ಟರು. ರಕ್ಷಣಾ ಕಾರ್ಯಾಚರಣೆಯನ್ನು ಚುರುಕುಗೊಳಿಸಲಾಗಿದ್ದು, ಅಗತ್ಯವಾದ ಎಲ್ಲಾ ರೀತಿಯ ಡ್ರಿಲ್ಲಿಂಗ್ ಕಾರ್ಯಾಚರಣೆಗಳನ್ನು ಬೆಂಬಲಿಸಲು ದೇಶದ ವಿವಿಧ ಭಾಗಗಳಿಂದ ಅತ್ಯಾಧುನಿಕ ಡ್ರಿಲ್ಲಿಂಗ್ ಯಂತ್ರೋಪಕರಣಗಳನ್ನು ಸ್ಥಳಕ್ಕೆ ತರಿಸಲಾಗಿದೆ.

    ಎಲ್ಲ ಕಾರ್ಮಿಕರ ಸುರಕ್ಷಿತ ಸ್ಥಳಾಂತರವೇ ನಮ್ಮ ಮೊದಲ ಆದ್ಯತೆ ಎಂದಿರುವ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ, ರಕ್ಷಣಾ ಕಾರ್ಯಾಚರಣೆಯ ಪ್ರಗತಿಯ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ನಿಯಮಿತವಾಗಿ ಅಪ್​ಡೇಟ್​ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ. ಕಾರ್ಮಿಕರು ಸಿಲುಕಿರುವ ಸುರಂಗದೊಳಗೆ ಸಾಕಷ್ಟು ನೀರು, ಆಮ್ಲಜನಕ, ವಿದ್ಯುತ್ ಮತ್ತು ಬೆಳಕು ಇದೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎನ್‌ಡಿಎಂಎ) ಖಚಿತಪಡಿಸಿದೆ. (ಏಜೆನ್ಸೀಸ್​)

    ಉತ್ತರಕಾಶಿ ಸುರಂಗದಲ್ಲಿನ ಕಾರ್ಮಿಕರ ಹೊರತರಲು ಬಂದವು 2 ರೋಬೋಟ್ – ದಕ್ಷ್ ಸಹೋದರರ ಕಾರ್ಯವೈಖರಿ ಹೇಗಿರಲಿದೆ?

    ಉತ್ತರಕಾಶಿ ಸುರಂಗ ಕುಸಿತ: 6 ಇಂಚಿನ ಪೈಪ್ ಮೂಲಕ ಪ್ರವೇಶ, 36 ಟನ್ ಉಪಕರಣಗಳ ಏರ್‌ಲಿಫ್ಟ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts