150 ಬಾರಿ ರಕ್ತದಾನ!

tyu
Published on

|ಡಿ.ಎಂ.ಮಹೇಶ್, ದಾವಣಗೆರೆ

ವಯಸ್ಸು ಐವತ್ತೆರಡು. ಆದರೂ ರಕ್ತದಾನದ ತುಡಿತ ಕಡಿಮೆಯಾಗಿಲ್ಲ. ತುರ್ತು ಸಂದರ್ಭದ ಕರೆ ಬಂದಾಗ ತಡರಾತ್ರಿಯಲ್ಲೂ ಧಾವಿಸಿ ರಕ್ತ ನೀಡಿದ್ದಾರೆ. ಲೆಕ್ಕದಿಂದ ವಿರಕ್ತರಾಗಿ, ಒಮ್ಮೆಗೆ ನಾಲ್ಕು ಜೀವ ಉಳಿಸಬಹುದೆಂಬ ಆತ್ಮತೃಪ್ತಿಯಿಂದಲೆ ಈ ಕಾರ್ಯದಲ್ಲಿ ಅನುರಕ್ತರಾಗಿದ್ದಾರೆ.

ಅತಿ ವಿರಳ (ಒ ನೆಗೆಟಿವ್) ರಕ್ತ ಗುಂಪಿನವರ ಪೈಕಿ ರಾಜ್ಯದಲ್ಲೇ ಅತಿ ಹೆಚ್ಚು ಬಾರಿ ರಕ್ತದಾನ ಮಾಡಿದ ಹೆಗ್ಗಳಿಕೆ ಇವರದು. ಜೂ.6ರಂದು ನಗರದ ಎಸ್.ಎಸ್. ಆಸ್ಪತ್ರೆಯಲ್ಲಿ, ರೋಗಿಯೊಬ್ಬರ ತುರ್ತು ಚಿಕಿತ್ಸೆಗೆ 150ನೇ ಬಾರಿಗೆ ಬ್ಲಡ್ ನೀಡಿದ ಹಿತಾನುಭವ ಇವರದು.

ದಾವಣಗೆರೆಯ ಈ ಮಹಾದಾನಿ ಹೆಸರು ಆದಿಕೇಶವ ಪ್ರಕಾಶ್ ಶಾಸ್ತ್ರಿ. ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಜತೆಗೆ ಎಂಬಿಎ ಪದವಿ ಮುಗಿಸಿದ ಇವರು ಬೆಂಗಳೂರು ಮೂಲದ ಸಾಫ್ಟ್​ವೇರ್ ಕಂಪನಿ ಉದ್ಯೋಗಿ. ಒ ಪಾಸಿಟಿವ್ ಗುಂಪಿನವರಲ್ಲಿ ಬೆಂಗಳೂರಿನ ಬ್ಲಡ್ ಕುಮಾರ್ ಹೆಚ್ಚು ರಕ್ತದಾನ ಮಾಡಿದ್ದರೆ, ಒ ನೆಗೆಟಿವ್ ವಿಭಾಗದ ದಾನದಲ್ಲಿ ಆದಿ ಅವರದೇ ಮುಂಚೂಣಿ ಹೆಸರು.

ದ್ವಿತೀಯ ಪಿಯು ಓದುವ ಹಂತದಿಂದಲೇ ಆಗೊಮ್ಮೆ ಈಗೊಮ್ಮೆ ಮಾಡುತ್ತಿದ್ದ ರಕ್ತದಾನ ಕಾರಣಾಂತರದಿಂದ ಹವ್ಯಾಸವಾಯಿತು. ‘ಫೋನ್ ಮಾಡಿದವರಿಗೆ ಮೊದಲು ರಕ್ತ ಕೊಟ್ಟು ರಾತ್ರಿಯೂಟಕ್ಕೆ ಬಾ’ ಎಂಬ ತಾಯಿ ಪದ್ಮಾವತಮ್ಮನ ಆಜ್ಞೆಯಂತೆ ಅಭಿಯಾನ ಮುಂದುವರಿಸಿದರು. ವರದಕ್ಷಿಣೆ ರೂಪದಲ್ಲಿ ವಧು ಕೆ.ಎ.ಉಷಾ ಅವರಿಂದಲೂ ರಕ್ತದಾನ ಮಾಡಿಸಿದ್ದು ಹಳೆಯ ಮಾತು. ಉದ್ಯಮಿಗಳಾದ ಪನ್ನಾಲಾಲ್, ರವಿ ಅಂಬರ್​ಕರ್, ಕಾಫಿಪುಡಿ ರಾಮಣ್ಣ ಅವರ ಪ್ರೇರಣೆಯೊಂದಿಗೆ ವೈದ್ಯ ಡಾ. ಸುರೇಶ್ ಹನಗವಾಡಿ ಮಾರ್ಗದರ್ಶನದಲ್ಲಿ ‘ಲೈಫ್​ಲೈನ್’ ಸ್ವಯಂಪ್ರೇರಿತ ರಕ್ತದಾನಿಗಳ ಸಮೂಹಕ್ಕೂ ಜನಕರಾದರು ಆದಿಕೇಶವ.

ಈ ಸಂಸ್ಥೆ ಮೂಲಕ ಇದುವರೆಗೆ ದಾನಿಗಳಿಂದ ಒಂದೂವರೆ ಲಕ್ಷ ಯುನಿಟ್ ರಕ್ತ ಪೂರಣೆಯಾಗಿದೆ ಎಂಬುದು ಅವರ ಮಾತು. ಅವರ ಪತ್ನಿ ಅಲ್ಲದೆ ಅಣ್ಣಂದಿರಾದ ಮಂಜುನಾಥ ಪ್ರಕಾಶ್, ಸತ್ಯನಾರಾಯಣ ಪ್ರಕಾಶ್ ಕೂಡ ರಕ್ತದಾನ ಮಾಡುತ್ತಿದ್ದಾರೆ. ‘2 ಬಾರಿ ರಕ್ತದ ಕಾಂಪೋನೆಂಟ್ ಒಳಗೊಂಡು 150 ಬಾರಿ ರಕ್ತದಾನ ಮಾಡಿದ್ದೇನೆ.

ಆರ್​ಎಚ್ ಇನ್ ಕಂಪಾಟಿಬಿಲಿಟಿ ಸಮಸ್ಯೆಯಿಂದ ಬಳಲುತ್ತಿದ್ದ 80 ನವಜಾತ ಶಿಶುಗಳನ್ನು ಉಳಿಸಿದ ಹೆಮ್ಮೆ ನನಗಿದೆ. 64ನೇ ವಯಸ್ಸಿನವರೆಗೆ ಅವಕಾಶ ಇರುವುದರಿಂದ 200 ಗಡಿ ದಾಟುವ ತವಕ ಇದೆ’ ಎನ್ನುತ್ತಾರೆ ಆದಿಕೇಶವ. ಜಾತಿಭೇದವಿಲ್ಲದೆ ಎಲ್ಲರಿಗೂ ರಕ್ತ ನೀಡುವ ಕಾರಣಕ್ಕೆ ರಕ್ತದಾನಿಗಳು ವಿಶ್ವಮಾನವರಾಗುತ್ತಾರೆ. ರಕ್ತದಾನದಿಂದ ಹೃದಯಾಘಾತ ಆಗದು. ವೈಯಕ್ತಿಕ ಹಾಗೂ ಸಮಾಜದ ಆರೋಗ್ಯ ಸುಧಾರಿಸುತ್ತದೆ. ಹೀಗಾಗಿ ಯುವಕರಲ್ಲಿ ಹಿಂಜರಿಕೆ ಬೇಡ ಎಂಬುದು ಅವರ ಸಂದೇಶ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net