150 ಮಂದಿ ತಾಯ್ನಾಡಿಗೆ: ಪ್ರಧಾನಿ ಅಧ್ಯಕ್ಷತೆಯಲ್ಲಿ ಭದ್ರತಾ ಸಂಪುಟ ಉಪಸಮಿತಿ ಸಭೆ

Nation 1
Published on

ನವದೆಹಲಿ: ಅಫ್ಘಾನಿಸ್ಥಾನದಲ್ಲಿದ್ದ ಭಾರತದ ರಾಜತಾಂತ್ರಿಕರು ಮತ್ತು ಅಧಿಕಾರಿಗಳನ್ನು ಭಾರತ ಸೇನಾ ವಿಮಾನದ ಮೂಲಕ ಭಾರತಕ್ಕೆ ಕರೆಯಿಸಿಕೊಂಡಿದೆ. ಭಾರತೀಯ ವಾಯುಪಡೆಯ ಸಿ-17 ವಿಮಾನ ಕಾಬುಲ್​ನಿಂದ ಹೊರಟು ಗುಜರಾತ್​ನ ಜುನಾಡದ ಮೂಲಕ ದೆಹಲಿಗೆ ಮರಳಿದೆ. ಕಾಬುಲ್​ನಲ್ಲಿದ್ದ ಭಾರತದ ರಾಯಭಾರಿ ರುದ್ರೇಂದ್ರ ಟಂಡನ್ ಸೇರಿ 150ಕ್ಕೂ ಹೆಚ್ಚು ಜನ ತಂಡದಲ್ಲಿದ್ದರು ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ. ಈ ಮಧ್ಯೆ, ಅಫ್ಘನ್​ನಲ್ಲಿರುವ ಉತ್ತರ ಪ್ರದೇಶದ ಕುಟುಂಬವೊಂದು ನೆರವಿಗೆ ಮನವಿ ಮಾಡಿದೆ. ಸಂಘರ್ಷ ಪೀಡಿತ ಅಫ್ಘನ್​ನಿಂದ ರಾಯಭಾರ ಕಚೇರಿಯ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಸ್ವದೇಶಕ್ಕೆ ಕರೆಯಿಸಿಕೊಳ್ಳುವುದು ಅತ್ಯಂತ ಜಟಿಲ ಕಾರ್ಯವಾಗಿತ್ತು. ಐಟಿಬಿಟಿಯ 99 ಕಮಾಂಡೋಗಳು, 3 ಶ್ವಾನಗಳನ್ನು ವಾಪಾಸ್ ಕರೆತರುವ ಮೂಲಕ ಈಗ ಇದು ಸಂಪೂರ್ಣವಾಗಿದೆ. ಇದಕ್ಕೆ ಸಹಕರಿಸಿದ ಎಲ್ಲರಿಗೂ ಧನ್ಯವಾದ ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ್ ಟ್ವೀಟ್ ಮಾಡಿದ್ದಾರೆ.

ಇ-ಎಮರ್ಜೆನ್ಸಿ ಎಕ್ಸ್-ಮಿಸ್ಕ್ ವೀಸಾ: ಅಫ್ಘನ್ನರಿಗೆ ಭಾರತದಲ್ಲಿ ತುರ್ತು ಆಶ್ರಯ ಒದಗಿಸುವ ಸಲುವಾಗಿ ಕೇಂದ್ರ ಸರ್ಕಾರ, ‘ಇ-ಎಮರ್ಜೆನ್ಸಿ ಎಕ್ಸ್-ಮಿಸ್ಕ್ ವೀಸಾ’ವನ್ನು ಪರಿಚಯಿಸಿದೆ. ಅಫ್ಘನ್ನರು ಭಾರತಕ್ಕೆ ಬರಲು ಬಯಸುವುದಾದರೆ ಇದಕ್ಕೆ ಅರ್ಜಿ ಸಲ್ಲಿಸಬೇಕು. ಈ ಅರ್ಜಿಗಳನ್ನು ಕ್ಷಿಪ್ರವಾಗಿ ವಿಲೇವಾರಿ ಮಾಡಿ ವಿಸಾ ಒದಗಿಸುವುದಾಗಿ ಸರ್ಕಾರ ಭರವಸೆ ನೀಡಿದೆ.

ಐಸಿಸ್ ಸೇರಿದ ಪುತ್ರಿಯನ್ನು ಕರೆತನ್ನಿ: ಜಾಗತಿಕ ಭಯೋತ್ಪಾದಕ ಸಂಘಟನೆ ಐಸಿಸ್​ಗೆ ಸೇರ್ಪಡೆಗೊಳ್ಳಲು ತೆರಳಿ, ಅಫ್ಘಾನಿಸ್ತಾನದಲ್ಲಿ ಬಂಧಿತಳಾಗಿದ್ದಾಳೆ ಎಂದು ನಂಬಲಾಗಿರುವ ಕೇರಳದ ನಿಮಿಷಾ ಅಲಿಯಾಸ್ ಫಾತಿಮಾಳನ್ನು ತಾಯ್ನಾಡಿಗೆ ಕರೆತರುವಂತೆ ತಾಯಿ ಬಿಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ. 5 ಸಾವಿರದಷ್ಟು ಅಲ್​ಖೈದಾ, ಐಸಿಸ್ ಸದಸ್ಯರನ್ನು ತಾಲಿಬಾನ್ ಬಿಡುಗಡೆಗೊಳಿಸಿದ್ದು, ಇದರಲ್ಲಿ ಕೇರಳದಿಂದ ತೆರಳಿದ ಮಹಿಳೆಯರ ಸಹಿತ ಹಲವರು ಇರಬಹುದು ಎಂದು ಶಂಕಿಸಲಾಗಿದೆ. ಅವರನ್ನು ಕರೆ ತರಲು ಭಾರತ ಸರ್ಕಾರ ಮುಂದಾಗದ ಹಿನ್ನೆಲೆಯಲ್ಲಿ ಕಾನೂನು ಹೋರಾಟಕ್ಕೂ ಬಿಂದು ಮುಂದಾಗಿದ್ದಾರೆ. ತಾಲಿಬಾನ್​ನಲ್ಲಿ ಕೇರಳದ 41 ಮಂದಿ ಇದ್ದಾರೆ ಎಂದು ಹೇಳಲಾಗಿದೆ.

ತಾಲಿಬಾನ್ ಕಂಟೆಂಟ್​ಗೆ ನಿಷೇಧ

ಸಾಮಾಜಿಕ ತಾಣ ಫೇಸ್​ಬುಕ್​ನಲ್ಲಿ ತಾಲಿಬಾನ್ ಪರವಾಗಿರುವ ಕಂಟೆಂಟ್​ಗಳ ಮೆಲೆ ನಿಷೇಧ ಹೇರಲಾಗಿದೆ. ತಾಲಿಬಾನ್ ಅನ್ನು ಬೆಂಬಲಿಸುವಂತಹ ಯಾವುದೇ ರೀತಿ ಕಂಟೆಂಟ್ ಪೋಸ್ಟ್ ಮಾಡದಂತೆ ನಿಷೇಧವನ್ನು ಹೇರುವ ಪ್ರಸ್ತಾವನೆಯನ್ನು ಫೇಸ್​ಬುಕ್​ನ ಆಡಳಿತ ಮಂಡಳಿ ಅಂಗೀಕರಿಸಿದೆ. ಇದರಂತೆ, ಅಫ್ಘನ್ ಪರಿಣತರ ತಂಡವನನು ನಿಯೋಜಿಸಿದ್ದು, ತಾಲಿಬಾನ್ ಪರವಾಗಿ ಇರುವ ಪೋಸ್ಟ್​ಗಳನ್ನು ಪರಿಶೀಲಿಸುವ ಕೆಲಸ ಶುರುವಾಗಿದೆ ಎಂದು ಕಂಪನಿ ಮೂಲಗಳು ತಿಳಿಸಿವೆ. ಅಫ್ಘನ್​ಗೆ ಸಂಬಂಧಿಸಿದ ಪೋಸ್ಟ್​ಗಳ ಕಂಟೆಂಟ್​ಗಳನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ. ಪ್ರಚೋದನಾಕಾರಿ, ಹಿಂಸೆಯ ವೈಭವೀಕರಣ ಕಂಡು ಬಂದರೆ ಅಂಥ ಖಾತೆಗಳ ವಿರುದ್ಧ ಖಂಡಿತವಾಗಿ ಕ್ರಮ ಜರುಗಿಸಲಾಗುವುದು ಎಂದು ಟ್ವಿಟರ್ ಹೇಳಿದೆ.

ಶಶಿ ತರೂರ್ ಟ್ವೀಟ್ ವಿವಾದ: ತಾಲಿಬಾನ್​ಗಳ ಕುರಿತು ವಿಡಿಯೋವನ್ನು ಟ್ವೀಟ್ ಮಾಡಿ ಕಾಂಗ್ರೆಸ್ ಸಂಸದ ಶಶಿ ತರೂರ್ ವಿವಾದಕ್ಕೀಡಾಗಿದ್ದಾರೆ. ‘ಕಾಬುಲ್ ನಗರದ ಅಂಚಿಗೆ ಬಂದ ತಾಲಿಬಾನ್​ಗಳು ಆನಂದದಿಂದ ಕಣ್ಣೀರು ಹಾಕಿ ವಿಜಯದ ಸಂತೋಷ ವ್ಯಕ್ತಪಡಿಸಿದ್ದಾರೆ’ ಎಂಬುದನ್ನು ವಿವರಿಸುವ ವಿಡಿಯೋ ಇದಾಗಿತ್ತು. ಇಬ್ಬರು ಮಲಯಾಳಿ ತಾಲಿಬಾನ್​ಗಳ ಧ್ವನಿ ಅದರಲ್ಲಿತ್ತು.

ಸುರಕ್ಷಿತವಾಗಿ ವಾಪಸ್: ಕಾಬುಲ್​ನ ಅಮೆರಿಕದ ರಾಯಭಾರಿ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ 9 ಭಾರತೀಯರು ಸೇರಿ 118 ನೇಪಾಳಿಗಳು ಕಾಠ್ಮಂಡುವಿಗೆ ಸುರಕ್ಷಿತವಾಗಿ ಬಂದಿದ್ದಾರೆ ಎಂದು ನೇಪಾಳ ಸರ್ಕಾರ ತಿಳಿಸಿದೆ.

ಉಗ್ರರನ್ನು ಹೊಗಳಿದ ಎಸ್​ಪಿ ಸಂಸದ: ಅಫ್ಘಾನಿಸ್ಥಾನವನ್ನು ವಶಪಡಿಸಿಕೊಂಡ ತಾಲಿಬಾನಿಗಳನ್ನು ಸಮಾಜವಾದಿ ಪಾರ್ಟಿ (ಎಸ್​ಪಿ)ಯ ಸಂಸದ ಶಫೀಖುರ್ ರಹ್ಮಾನ್ ಪ್ರಶಂಸಿಸಿದ್ದಾರೆ. ಬ್ರಿಟಿಷರ ಆಳ್ವಿಕೆಯಲ್ಲಿ ಭಾರತೀಯರು ಹೋರಾಡಿದರು. ಇದೇ ರೀತಿ, ತಾಲಿಬಾನಿಗಳ ಹೋರಾಟ ಸ್ವಾತಂತ್ರ್ಯ ಹೋರಾಟವಾಗಿದ್ದು, ಗೆಲುವನ್ನು ದಕ್ಕಿಸಿಕೊಂಡಿದೆ ಎಂದು ರಹ್ಮಾನ್ ವಿವರಿಸಿದ್ದಾರೆ.

ತಾಲಿಬಾನಿಗಳ ಕೈಲಿ ಸತ್ತರೆ ‘ಸೇವೆ’ ಅಂದುಕೊಳ್ಳುವೆ!

ಅಫ್ಘನ್​ನ ಕಾಬುಲ್​ನಲ್ಲಿರುವ ರತನ್ ನಾಥ್ ದೇವಸ್ಥಾನದ ಕೊನೆಯ ಅರ್ಚಕ ಪಂಡಿತ್ ರಾಜೇಶ್ ಕುಮಾರ್, ಆಶ್ರಯ ಮತ್ತು ಪ್ರಯಾಣದ ವ್ಯವಸ್ಥೆ ಮಾಡಿಕೊಡುವುದಾಗಿ ಅನೇಕರು ಹೇಳಿದರು. ಆದರೆ ತಲೆತಲಾಂತರಗಳಿಂದ ನನ್ನ ಪೂರ್ವಜರು ಪೂಜೆ ಸಲ್ಲಿಸಿದ ದೇವಸ್ಥಾನ ಇದು. ಯಾವುದೇ ಸಂದರ್ಭದಲ್ಲೂ ಈ ದೇವಸ್ಥಾನ ಬಿಟ್ಟು ಬರಲಾರೆ. ತಾಲಿಬಾನಿಗಳು ನನ್ನನ್ನು ಹತ್ಯೆ ಮಾಡಿದರೆ ಅದನ್ನು ಕೂಡ ‘ಸೇವೆ’ ಎಂದು ಪರಿಗಣಿಸುವೆ ಎಂದು ಹೇಳಿಕೊಂಡಿದ್ದಾರೆ.

ಭಾರತೀಯರ ಸುರಕ್ಷತೆ ಮುಖ್ಯ

ಅಫ್ಘಾನಿಸ್ತಾನವನ್ನು ತಾಲಿಬಾನ್ ವಶಪಡಿಸಿಕೊಂಡ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಭದ್ರತೆಗೆ ಸಂಬಂಧಿಸಿದ ಸಂಪುಟ ಉಪಸಮಿತಿಯ ತುರ್ತು ಸಭೆ ಮಂಗಳವಾರ ನಡೆಯಿತು. ರಾಷ್ಟ್ರೀಯ ಭದ್ರತಾ ವಿಷಯಕ್ಕೆ ಹೇಗೆ ವ್ಯವಹರಿಸಬೇಕು, ಯಾವ ನೀತಿ ಅಳವಡಿಸಬೇಕು ಎಂಬಿತ್ಯಾದಿ ವಿಚಾರಗಳ ಬಗ್ಗೆ ಚರ್ಚೆ ನಡೆಯಿತು. ಭಾರತೀಯರ ಸುರಕ್ಷತೆ ಮುಖ್ಯ ಎಂದು ಪ್ರಧಾನಿ ಹೇಳಿದರು. ಸಚಿವರಾದ ಅಮಿತ್ ಷಾ, ರಾಜನಾಥ್ ಸಿಂಗ್, ನಿರ್ಮಲಾ ಸೀತಾರಾಮನ್ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶೃಂಗ್ಲಾ, ಅಫ್ಘನ್​ನಲ್ಲಿ ಭಾರತದ ರಾಯಭಾರಿ ರುದ್ರೇಂದ್ರ ಟಂಡನ್ ಸೇರಿ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು. ಭಾರತ ಮಹತ್ವದ ರಾಷ್ಟ್ರ ಅಫ್ಘನ್​ನ ಬಿಕ್ಕಟ್ಟು ಪರಿಹಾರಕ್ಕೆ ಭಾರತ ಅತ್ಯಂತ ಮಹತ್ವದ ರಾಷ್ಟ್ರ ಎಂದು ವಿದೇಶಾಂಗ ಸಚಿವ ಡೊಮಿನಿಕ್ ರಾಬ್ ಅಭಿಪ್ರಾಯಪಟ್ಟಿದ್ದಾರೆ.

ಅಫ್ಘಾನಿಸ್ತಾನದಲ್ಲಿ ಸಿಲುಕಿರುವ ಪ್ರತಿಯೊಬ್ಬ ಭಾರತೀಯನ ರಕ್ಷಣೆಗೆ ಕೇಂದ್ರ ಸರ್ಕಾರ ಬದ್ಧವಾಗಿದೆ. ಅವರೆಲ್ಲರ ಜತೆ ಸಂಪರ್ಕ ಸಾಧಿಸಲಾಗಿದೆ. ಅಲ್ಲಿನ ಜನರ ರಕ್ಷಣೆಗೆ ವಿಶ್ವಸಂಸ್ಥೆ ಹಾಗೂ ಅಮೆರಿಕ ಮುಂದಾಗಬೇಕು. ಅಫ್ಘನ್ ಬೆಳವಣಿಗೆಯನ್ನು ವಿಶ್ವಸಮುದಾಯ ಗಂಭೀರವಾಗಿ ಪರಿಗಣಿಸಬೇಕು.| ಪ್ರಲ್ಹಾದ್ ಜೋಶಿ ಕೇಂದ್ರ ಸಚಿವ

ಮೈಸೂರಲ್ಲಿ ಅಫ್ಘನ್ ವಿದ್ಯಾರ್ಥಿಗಳ ಆತಂಕ

ಮೈಸೂರು: ಅಫ್ಘಾನಿಸ್ತಾನದಲ್ಲಿ ನಡೆದಿರುವ ಕ್ಷಿಪ್ರ ರಾಜಕೀಯ ಬೆಳವಣಿಯಿಂದ ತಾಲಿಬಾನಿಗಳು ದೇಶ ವಶಪಡಿಸಿಕೊಂಡಿರುವುದು ಮೈಸೂರಿನಲ್ಲಿ ವಿದ್ಯಾಭ್ಯಾಸ ನಡೆಸುತ್ತಿರುವ ಅಫ್ಘನ್ ವಿದ್ಯಾರ್ಥಿಗಳಲ್ಲಿ ಆತಂಕವನ್ನುಂಟá- ಮಾಡಿದೆ. ಅಲ್ಲಿರುವ ಪಾಲಕರನ್ನು ಸಂರ್ಪಸಲು ದೂರವಾಣಿ ಸಂಪರ್ಕ ದೊರೆಯುತ್ತಿಲ್ಲ. ಇದರಿಂದ ಅವರ ಸ್ಥಿತಿ ಹೇಗಿದೆ ಎಂದು ತಿಳಿದುಕೊಳ್ಳಲು ಸಾಧ್ಯವಾಗುತ್ತಿಲ್ಲ ಎನ್ನುವ ಆತಂಕ ಮೈಸೂರು ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿರುವ ಅಫ್ಘನ್ ವಿದ್ಯಾರ್ಥಿಗಳನ್ನು ಕಾಡುತ್ತಿದೆ. ಸದ್ಯ 92 ಅಫ್ಘಾನಿಸ್ತಾನದ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಅವರಲ್ಲಿ ಮಾನಸಗಂಗೋತ್ರಿ ಕ್ಯಾಂಪಸ್​ನಲ್ಲಿ 40 ವಿದ್ಯಾರ್ಥಿಗಳು ವಿವಿಧ ವಿಭಾಗದಲ್ಲಿ ಕಲಿಯುತ್ತಿದ್ದಾರೆ. ಈ ವಿದ್ಯಾರ್ಥಿಗಳು ಮಂಗಳವಾರ ಕುಲಪತಿ ಪ್ರೊ.ಜಿ.ಹೇಮಂತಕುಮಾರ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಅಫ್ಘಾನಿಸ್ತಾನದ ಪರಿಸ್ಥಿತಿ ತುಂಬಾ ದುಃಖಕರವಾಗಿದೆ. ಭಾರತದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ ಗಳಿಗೆ ವೀಸಾ ಅವಧಿ ಮುಂದುವರಿಸಬೇಕೆಂದು ಮನವಿ ಸಲ್ಲಿಸಿದರು.

ಕಣ್ಣಿರಿಟ್ಟ ಅಫ್ಘನ್ ವಿದ್ಯಾರ್ಥಿಗಳು: ಪಂಜಾಬ್​ನ ಲುಧಿಯಾನದ ಕೃಷಿ ವಿವಿ ಸೇರಿ ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಅಫ್ಘನ್ ವಿದ್ಯಾರ್ಥಿಗಳು ತಮ್ಮ ಕುಟುಂಬದ ಪರಿಸ್ಥಿತಿ ನೆನೆದು ಕಣ್ಣೀರಾಗಿದ್ದಾರೆ. ಮರಳಿ ಸ್ವದೇಶಕ್ಕೆ ತೆರಳಿ ಕುಟುಂಬದವರೊಂದಿಗೆ ಸೇರುವ ತವಕ ತೋರುತ್ತಿದ್ದಾರೆ.

ರಾಜ್ಯದಲ್ಲಿರುವ ಅಪ್ಘನ್ ವಿದ್ಯಾರ್ಥಿಗಳ ಮಾಹಿತಿ ಪಡೆದು ಸಿಎಂ ಜತೆ ರ್ಚಚಿಸುವೆ.| ಆರಗ ಜ್ಞಾನೇಂದ್ರ ಗೃಹ ಸಚಿವಮೈಸೂರು ವಿವಿಯಲ್ಲಿ ನನ್ನ ವ್ಯಾಸಂಗ ಕಡೆಯ ವರ್ಷವಾಗಿದ್ದು, ಪರೀಕ್ಷೆ ಮುಗಿಸಿ ವಾಪಸ್ ಅಫ್ಘಾನಿಸ್ತಾನಕ್ಕೆ ಹೋಗಬೇಕಿತ್ತು. ಆದರೆ ಅಲ್ಲಿ ಪರಿಸ್ಥಿತಿ ಈಗ ಸರಿಯಿಲ್ಲ. ತುಂಬಾ ಆತಂಕದ ವಾತಾವರಣ ಇದೆ. ನಮ್ಮ ಪಾಲಕರಿಗೆ ದೈಹಿಕವಾಗಿ ಯಾವುದೇ ನೋವಾಗಿಲ್ಲವಾದರೂ ಮಾನಸಿಕವಾಗಿ ತೊಂದರೆಯಾಗಿದೆ| ರೈಜಾ ಅಂತಿಮ ಬಿಎಸ್ಸಿ ಕಲಿಯುತ್ತಿರುವ ಅಫ್ಘನ್ ವಿದ್ಯಾರ್ಥಿಕುಲಪತಿಯಿಂದ ಅಭಯ: ಅಫ್ಘನ್ ವಿದ್ಯಾರ್ಥಿಗಳು ಆತಂಕಪಡಬೇಕಿಲ್ಲ. 92 ಅಫ್ಘಾನಿಸ್ತಾನದ ವಿದ್ಯಾರ್ಥಿಗಳಿದ್ದು, 32 ವಿದ್ಯಾರ್ಥಿ ಗಳ ಪರೀಕ್ಷೆ ಸೆಪ್ಟೆಂಬರ್ ಅಥವಾ ಅಕ್ಟೋಬರ್​ನಲ್ಲಿ ಮುಗಿಯಲಿದೆ. ಅವರಿಗೆ ವೀಸಾ ಅವಧಿ ವಿಸ್ತರಣೆಗೆ ಸರ್ಕಾರದೊಂದಿಗೆ ಮಾತುಕತೆ ನಡೆಸಲಾಗುವುದು. ಅಲ್ಲದೇ ತಾತ್ಕಾಲಿಕವಾಗಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಿಕೊಡಲಾಗುವುದು. ಆತಂಕ ಬಿಟ್ಟು ನಿರ್ಭೀತಿಯಿಂದ ಪರೀಕ್ಷೆ ಬರೆಯುವಂತೆ ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್​ಕುಮಾರ್ ಆತ್ಮಸ್ಥೈರ್ಯ ತುಂಬಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net