ನೂಪುರ್ ಹೇಳಿಕೆ, 15 ರಾಷ್ಟ್ರಗಳ ಖಂಡನೆ: ಉಗ್ರರಿಂದ ಜೀವ ಬೆದರಿಕೆ, ಉಚ್ಚಾಟಿತ ನಾಯಕಿಗೆ ಭದ್ರತೆ..

Nupur
Published on
ನೂಪುರ್ ಶರ್ಮಾರ ವಿವಾದಾತ್ಮಕ ಹೇಳಿಕೆ, ನವೀನ್ ಜಿಂದಾಲ್ ಅವರ ಟ್ವೀಟ್​ಗೆ 15 ರಾಷ್ಟ್ರಗಳಿಂದ ಖಂಡನೆ ವ್ಯಕ್ತವಾಗಿದೆ. ನೂಪುರ್​ಗೆ ಉಗ್ರರು ಜೀವ ಬೆದರಿಕೆ ಒಡ್ಡಿದ ಕಾರಣ, ಸರ್ಕಾರ ಭದ್ರತೆ ಒದಗಿಸಿದೆ. ವ್ಯಕ್ತಿಗತ ಹೇಳಿಕೆಗಳು ಎಂದು ಭಾರತ ಸರ್ಕಾರ ಸ್ಪಷ್ಟೀಕರಣ ನೀಡಿದರೂ, 15 ಮುಸ್ಲಿಂ ರಾಷ್ಟ್ರಗಳು ಪ್ರತಿಕ್ರಿಯಿಸಿವೆ. ಆದಾಗ್ಯೂ, ಭಾರತ ಈ ರಾಷ್ಟ್ರಗಳನ್ನು ಕಡೆಗಣಿಸುವಂತಿಲ್ಲ.

ನೂಪುರ್ ಭದ್ರತೆ ಹೆಚ್ಚಳ

ಉಗ್ರ ಸಂಘಟನೆಗಳು ಮತ್ತು ವ್ಯಕ್ತಿಗಳಿಂದ ಕೊಲೆ ಬೆದರಿಕೆಗಳು ಬರುತ್ತಿವೆ ಎಂದು ನೂಪುರ್ ಶರ್ಮಾ ಮೇ 28ರಂದು ದೆಹಲಿ ಪೊಲೀಸರಿಗೆ ದೂರು ನೀಡಿದ್ದರು. ಈ ದೂರುಗಳನ್ನು ಆಧರಿಸಿ ಅವರಿಗೆ ಮತ್ತು ಕುಟುಂಬ ಸದಸ್ಯರಿಗೆ ಮುಂಜಾಗ್ರತಾ ಭದ್ರತೆಯನ್ನು ಒದಗಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಕ್ತಾರರಿಗೆ ಹೊಸ ಚೌಕಟ್ಟು: ಟಿವಿ ವೇದಿಕೆಗಳ ಚರ್ಚೆಗಳಲ್ಲಿ ಭಾಗವಹಿಸುವ ಪಕ್ಷದ ವಕ್ತಾರರು ಮತ್ತು ನಾಯಕರಿಗೆ ಹೊಸ ಮಾರ್ಗಸೂಚಿಯನ್ನು ಬಿಜೆಪಿ ಬಿಡುಗಡೆ ಮಾಡಿದೆ. ನೂಪುರ್ ಶರ್ಮಾ ವಿವಾದ ಹಿನ್ನೆಲೆಯಲ್ಲಿ ಈ ಕ್ರಮ ತೆಗೆದುಕೊಂಡಿದೆ. ಟಿವಿ ಚರ್ಚೆಗಳಲ್ಲಿ ಭಾಗವಹಿಸುವ ವಕ್ತಾರರು, ನಾಯಕರನ್ನು ಪಕ್ಷದ ಮಾಧ್ಯಮ ವಿಭಾಗ ಆಯ್ಕೆ ಮಾಡುತ್ತದೆ. ಚರ್ಚೆಯ ವೇಳೆ ಧಾರ್ವಿುಕ ವಿಚಾರವಾಗಿ ಟೀಕೆ ಮಾಡದಂತೆ ತಾಕೀತು ಮಾಡಿದೆ.

ಪೊಲೀಸರಿಂದ ಸಮನ್ಸ್: ನೂಪುರ್ ಶರ್ವಗೆ ಮುಂಬೈ ಪೊಲೀಸರು ಮಂಗಳವಾರ ಸಮನ್ಸ್ ಜಾರಿಗೊಳಿಸಿದ್ದಾರೆ. ಜೂ.22ರಂದು ವಿವಾದಾತ್ಮಕ ಹೇಳಿಕೆ ವಿಚಾರವಾಗಿ ವಿವರಣೆ ನೀಡುವುದಕ್ಕೆ ಮುಂಬೈಗೆ ಬರುವಂತೆ ಸೂಚಿಸಲಾಗಿದೆ.

ಅಲ್ ಕೈದಾ ದಾಳಿ ಬೆದರಿಕೆ: ವಿವಾದಾತ್ಮಕ ಹೇಳಿಕೆ ಹಿನ್ನೆಲೆಯಲ್ಲಿ ಅಲ್ ಕೈದಾ ಉಗ್ರ ಸಂಘಟನೆ, ದೆಹಲಿ, ಮುಂಬೈ, ಉತ್ತರ ಪ್ರದೇಶ, ಗುಜರಾತ್ ಸೇರಿ ದೇಶಾದ್ಯಂತ ವಿವಿಧ ಭಾಗಗಳಲ್ಲಿ ಉಗ್ರ ದಾಳಿ ನಡೆಸುವುದಾಗಿ ಬೆದರಿಕೆ ಹಾಕಿದೆ. ಪ್ರವಾದಿಯವರ ಗೌರವಕ್ಕಾಗಿ ಹೋರಾಟ ಎಂದು ಬೆದರಿಕೆ ಪತ್ರದಲ್ಲಿ ಹೇಳಿರುವ ಅದು, ಆತ್ಮಾಹುತಿ ದಾಳಿಗೆ ಸಜ್ಜಾಗುತ್ತಿರುವುದಾಗಿ ಘೋಷಿಸಿದೆ. ಪತ್ರದಲ್ಲಿ ಜೂನ್ 6 ದಿನಾಂಕ ನಮೂದಾಗಿದೆ.

ಖಂಡನಾ ಹೇಳಿಕೆ ಕೊಟ್ಟ 15 ರಾಷ್ಟ್ರಗಳು

  1. ಇರಾನ್
  2. ಇರಾಕ್
  3. ಕುವೈತ್
  4. ಕತಾರ್
  5. ಸೌದಿ ಅರೇಬಿಯಾ
  6. ಒಮಾನ್
  7. ಯುಎಇ
  8. ಜೋರ್ಡಾನ್
  9. ಅಫ್ಘಾನಿಸ್ತಾನ್
  10. ಪಾಕಿಸ್ತಾನ
  11. ಬಹರೇನ್
  12. ಮಾಲ್ಡೀವ್ಸ್
  13. ಲಿಬಿಯಾ
  14. ತುರ್ಕಿಯೆ
  15. ಇಂಡೋನೇಷ್ಯಾ

ಪಕ್ಷದೊಳಗೆ ನಾನು ಪ್ರಾಕ್ಟಿಕಲ್ ಆಗಿ ಬೆಳೆದು ಬಂದಿದ್ದೇನೆ. ಪಕ್ಷದ ನಿರ್ಧಾರವನ್ನು ಸ್ವೀಕರಿಸುತ್ತೇನೆ ಮತ್ತು ಅದನ್ನು ಗೌರವಿಸುತ್ತೇನೆ. | ನೂಪುರ್ ಶರ್ಮಾ

ಮುಜಾಹಿದ್ದೀನ್ ಬೆದರಿಕೆ: ನೂಪುರ್ ಶರ್ಮಾ ಮತ್ತು ಕುಟುಂಬ ಸದಸ್ಯರಿಗೆ ಮುಜಾಹಿದ್ದೀನ್ ಘಜ್ವತುಲ್ ಹಿಂದ್ ಉಗ್ರ ಸಂಘಟನೆ ಜೀವಬೆದರಿಕೆ ಒಡ್ಡಿದೆ. ಟೆಲಿಗ್ರಾಂನಲ್ಲಿ ಬೆದರಿಕೆ ಸಂದೇಶ ರವಾನಿಸಿರುವ ಉಗ್ರ ಸಂಘಟನೆ, ನೂಪುರ್ ಶರ್ಮಾ ಇಡೀ ಜಗತ್ತಿನ ಕ್ಷಮೆ ಕೇಳಬೇಕು. ಇಲ್ಲದೇ ಹೋದರೆ ನಾವೇನು ಮಾಡಬೇಕೋ ಅದನ್ನು ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದೆ. ಬಿಜೆಪಿ ‘ಚಾಣಕ್ಯ ನೀತಿ’ ಅನುಸರಿಸುತ್ತಿದ್ದು, ದ್ವಂದ್ವ ನೀತಿಯನ್ನು ಪ್ರತಿಪಾದಿಸುತ್ತಿದೆ. ಆರ್​ಎಸ್​ಎಸ್, ರಾಮಸೇನಾ, ಬಜರಂಗ ದಳ, ಶಿವ ಸೇನಾ ಎಲ್ಲವೂ ಮುಸ್ಲಿಂ ವಿರೋಧಿ ನಿಲುವು ಹೊಂದಿವೆ ಎಂದು ಅದು ಟೀಕಿಸಿದೆ.

ಇಂಡೋನೇಷ್ಯಾ ಖಂಡನೆ: ನೂಪುರ್ ಶರ್ಮಾ ಮತ್ತು ನವೀನ್ ಜಿಂದಾಲ್ ವಿವಾದಾತ್ಮಕ ಹೇಳಿಕೆ ಸಂಬಂಧ ಇಂಡೋನೇಷ್ಯಾ ಸರ್ಕಾರ ಕೂಡ ಪ್ರತಿಕ್ರಿಯಿಸಿದೆ. ಜಕಾರ್ತದಲ್ಲಿರುವ ಭಾರತದ ರಾಯಭಾರಿಗೆ ಸಮನ್ಸ್ ಕಳುಹಿಸಿದ ಸರ್ಕಾರ, ಈ ಹೇಳಿಕೆಗಳು ಹೊಣೆಗೇಡಿತನದ್ದು ಮತ್ತು ಸಂವೇದನಾರಹಿತವಾದುದು ಎಂದು ಖಂಡಿಸಿದೆ.

ಟ್ವಿಟರ್​ಗೆ ನೋಟಿಸ್: ಟ್ವಿಟರ್​ನಲ್ಲಿ ಕೆಲವರು ದ್ವೇಷ ಹರಡುವ ಕೆಲಸದಲ್ಲಿ ನಿರತರಾಗಿದ್ದಾರೆ ಎಂಬ ದೂರಿನ ಹಿನ್ನೆಲೆಯಲ್ಲಿ, ದೆಹಲಿ ಪೊಲೀಸರು ಟ್ವಿಟರ್​ಗೆ ನೋಟಿಸ್ ಜಾರಿಗೊಳಿಸಿದ್ದಾರೆ. ಅವರಿಂದ ಉತ್ತರಕ್ಕಾಗಿ ನಿರೀಕ್ಷಿಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಭಾರತ - ಗಲ್ಪ್ ಸಂಬಂಧ

ಭಾರತ ಮತ್ತು ಈ ರಾಷ್ಟ್ರಗಳ ನಡುವೆ ಸುದೀರ್ಘ ವಾಣಿಜ್ಯ, ವ್ಯಾಪಾರ ಮತ್ತು ಸಾಂಸ್ಕೃತಿಕ ಸಂಬಂಧದ ಇತಿಹಾಸವಿದೆ. ಲಕ್ಷಾಂತರ ಭಾರತೀಯರು ಗಲ್ಪ್ ರಾಷ್ಟ್ರಗಳಲ್ಲಿ ಉದ್ಯೋಗದಲ್ಲಿದ್ದಾರೆ. ಭಾರತ ಕೂಡ ತೈಲ ಬೇಡಿಕೆ ಈಡೇರಿಸಿಕೊಳ್ಳಲು ಈ ರಾಷ್ಟ್ರಗಳನ್ನೇ ಅವಲಂಬಿಸಿದೆ. ಈ ಕುರಿತ ಅಂಕಿ ನೋಟ ಇಲ್ಲಿದೆ.

  • 1/3 ಯುಎಇನ 3ನೇ ಒಂದಂಶ ನಿವಾಸಿಗಳು ಭಾರತೀಯರು
  • 89 ಲಕ್ಷ - ಗಲ್ಪ್ ರಾಷ್ಟ್ರಗಳಲ್ಲಿರುವ ಭಾರತೀಯರು
  • ಭಾರತದ 3ನೇ ಅತಿದೊಡ್ಡ ವ್ಯಾಪಾರ ಪಾಲುದಾರ ರಾಷ್ಟ್ರ ಯುಎಇ
  • 80 ಶತಕೋಟಿ ಡಾಲರ್ ಭಾರತದ ವಾರ್ಷಿಕ ರೆಮಿಟೆನ್ಸ್
  • 60% ಕಚ್ಚಾ ತೈಲ ಪೂರೈಸುವುದು ಗಲ್ಪ್ ರಾಷ್ಟ್ರಗಳು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net