

ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಕೈದಿಗಳಿಗೆ ಐಶಾರಾಮಿ ಸವಲತ್ತು ಮತ್ತು ಮೊಬೈಲ್, ಡ್ರಗ್ಸ್ ದಂಧೆಗೆ ಕಡಿವಾಣವೇ ಬಿದ್ದಿಲ್ಲ.
ನಟ ದರ್ಶನ್ ಮತ್ತು ರೌಡಿಗಳಿಗೆ ವಿಶೇಷ ಸೌಲಭ್ಯ ಪ್ರಕರಣ ಬೆಳಕಿಗೆ ಬಂದಾಗ ಸರ್ಕಾರವೇ ಮುಜುಗರಕ್ಕೆ ಒಳಗಾಗಿತ್ತು. ಈ ಪ್ರಕರಣ ಮಾಸುವ ಮುನ್ನವೇ ಪರಪ್ಪನ ಅಗ್ರಹಾರ ಕೇಂದ್ರ ಸೆಂಟ್ರಲ್ ಜೈಲ್ ಮೇಲೆ ಆಗ್ನೇಯ ವಿಭಾಗ ಪೊಲೀಸರು, ದಿಢೀರ್ ದಾಳಿ ನಡೆಸಿದಾಗ 15 ಮೊಬೈಲ್, 7 ಎಲೆಕ್ಟ್ರಿಕ್ ಸ್ಟೌ ಮತ್ತು ಮೂರು ಲಾಂಗ್ ಪತ್ತೆಯಾಗಿರುವುದು ಆತಂಕ ಹುಟ್ಟಿಸಿದೆ.
ಶನಿವಾರ ಸಂಜೆ ಆಗ್ನೇಯ ವಿಭಾಗ ಡಿಸಿಪಿ ಸಾರಾ ಾತಿಮಾ ನೇತೃತ್ವದಲ್ಲಿ ಸೆಂಟ್ರಲ್ ಜೈಲ್ ಮೇಲೆ ದಿಢೀರ್ ಕಾರ್ಯಾಚರಣೆ ನಡೆಸಲಾಯಿತು. ಜೈಲಿನಲ್ಲಿ ದರ್ಶನ್‌ಗೆ ಟೀ ಪಾರ್ಟಿ ಏರ್ಪಡಿಸಿದ್ದ ರೌಡಿ ವಿಲ್ಸನ್ ಗಾರ್ಡನ್ ನಾಗರಾಜ್ ಅಲಿಯಾಸ್ ನಾಗನ ಪಡೆಯಿಂದ ಮೊಬೈಲ್ ಮತ್ತು ಡ್ರಗ್ಸ್ ಸೇರಿ ಹಲವು ವಸ್ತುಗಳನ್ನು ಪತ್ತೆಯಾಗಿವೆ.
ನಾಗ ಮತ್ತು ಆತನ ಸಹಚರರ ಬ್ಯಾರಕ್‌ನಲ್ಲಿ 15 ಮೊಬೈಲ್, 3 ಜಾರ್ಜರ್, 7 ಎಲೆಕ್ಟ್ರಿಕ್ ಸ್ಟೌಗಳು, 3 ಲಾಂಗ್, ಬೀಡಿ-ಸಿಗರೇಟ್ ಪ್ಯಾಕೆಟ್‌ಗಳು ಮತ್ತು 30 ಗ್ರಾಂ ಡ್ರಗ್ಸ್ ಸೇರಿ ಇತರೆ ವಸ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಅಕ್ರಮ ಚಟುವಟಿಕೆ ಮಾಹಿತಿ ಹಿನ್ನೆಲೆಯಲ್ಲಿ ಪರಪ್ಪನ ಅಗ್ರಹಾರ ಜೈಲ್ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದಾಗ ಮಾಹಿತಿ ಸೋರಿಕೆಯಾಗಿ ಜೈಲಿನಲ್ಲಿ ಯಾವುದೇ ವಸ್ತುಗಳು ಪತ್ತೆ ಆಗಿರಲಿಲ್ಲ. ಇದಾದ ಮೇಲೆ ದರ್ಶನ್‌ಗೆ ವಿಶೇಷ ಸೌಲಭ್ಯ ಒದಗಿಸಿದ ಪ್ರಕರಣ ಬಯಲಾಗಿತ್ತು.
ಈ ವಿವಾದ ತಣ್ಣಗಾಗುವ ಮುನ್ನವೇ ಜೈಲಿನ ಮೇಲೆ ದಾಳಿ ನಡೆಸಿ ಮತ್ತೆ ಅಕ್ರಮ ಕೃತ್ಯಗಳನ್ನು ಆಗ್ನೇಯ ವಿಭಾಗದ ಪೊಲೀಸರು ಬಯಲು ಮಾಡಿದ್ದಾರೆ. ರೌಡಿ ನಾಗ ಮತ್ತು ಆತನಿಗೆ ಸಹಕರಿಸಿದ ಕಾರಾಗೃಹದ ಕೆಲ ಅಧಿಕಾರಿ, ಸಿಬ್ಬಂದಿಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ. ಮೊಬೈಲ್ ಮತ್ತು ಡ್ರಗ್ಸ್ ಪತ್ತೆ ಸಂಬಂಧ ಪರಪ್ಪನ ಅಗ್ರಹಾರ ಠಾಣೆಯಲ್ಲಿ ರೌಡಿ ನಾಗ ಮತ್ತು ಗ್ಯಾಂಗ್, ಜೈಲು ಅಧಿಕಾರಿಗಳ ವಿರುದ್ಧ ಪ್ರತ್ಯೇಕ ಪ್ರಕರಣ ದಾಖಲಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.