ಗುಂಪುಗೂಡಬೇಡಿ ಎಂದರೂ ಕೇಳಲಿಲ್ಲ, ಒಟ್ಟಿಗೇ ಪ್ರಾರ್ಥನೆ ಮಾಡಿದರು, ಒಟ್ಟಾಗಿ ಆಸ್ಪತ್ರೆ ಸೇರಿದರು!

tamilnadu- corona
Published on

ಚೆನ್ನೈ: ಕಳೆದ ಒಂದೂವರೆ ತಿಂಗಳಿನಿಂದಲೂ ಸರ್ಕಾರ, ಅಧಿಕಾರಿಗಳು, ಪೊಲೀಸರು ಒಂದಲ್ಲ, ಎರಡಲ್ಲ, ಸಾವಿರಾರು ಬಾರಿ ಹೇಳುತ್ತಲೇ ಬಂದಿದ್ದಾರೆ, ಒಂದೆಡೆ ಸೇರಬೇಡಿ, ಗುಂಪಾಗಿ ಇರಬೇಡಿ, ಪ್ರಾರ್ಥನೆ ಒಟ್ಟಿಗೇ ಮಾಡಬೇಡಿ ಇತ್ಯಾದಿ… ಇತ್ಯಾದಿ… ಆದರೆ ಕೆಲವರಿಗೆ ಈ ಮಾತುಗಳೆಂದರೆ ಅಸಡ್ಡೆ. ಇದೇ ರೀತಿ ಅಸಡ್ಡೆ ತೋರಿದ ಒಂದೇ ಕುಟುಂಬದ 15 ಮಂದಿ ಈಗ ಆಸ್ಪತ್ರೆ ಸೇರಿದ್ದಾರೆ!

ಹೌದು. ಇದು ನಡೆದಿರುವುದು ಚೆನ್ನೈನ ತಿರುವಿಕಾ ನಗರದಲ್ಲಿ. ಒಂದೇ ಕುಟುಂಬದ 15 ಮಂದಿ ಸೇರಿದಂತೆ ಇನ್ನೂ ಅನೇಕರು ಇಲ್ಲಿ ಸಾಮೂಹಿಕ ಪ್ರಾರ್ಥನೆಯಾಗಿ ಸೇರಿದ್ದರು. ಲಾಕ್‌ಡೌನ್‌ ಆದೇಶ ಈ ಪ್ರದೇಶದಲ್ಲಿ ಕಟ್ಟುನಿಟ್ಟಿನಲ್ಲಿ ಜಾರಿಯಲ್ಲಿದ್ದರೂ ಅದರತ್ತ ತಲೆಕೆಡಿಸಿಕೊಳ್ಳದ ಎಲ್ಲರೂ ಏನಾಗುತ್ತದೆಯೋ ನೋಡಿಯೇ ಬಿಡೋಣ ಎಂದು ಒಟ್ಟಿಗೇ ಸೇರಿದ್ದಾರೆ.

ನಂತರ ಈ ಸಭೆಯಲ್ಲಿ ಪಾಲ್ಗೊಂಡ ಹಲವರಲ್ಲಿ ಜ್ವರ, ಕೆಮ್ಮು, ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದೆ. ಅವರನ್ನೆಲ್ಲಾ ಪರೀಕ್ಷೆಗೆ ಒಳಪಡಿಸಿದಾಗ ಒಂದೇ ಕುಟುಂಬದ 15 ಮಂದಿಗೆ ಸೋಂಕು ತಗುಲಿರುವುದು ಪತ್ತೆಯಾಗಿದೆ! ಇವರ ಪೈಕಿ ಹೆಚ್ಚಿನವರು ಪೌರಕಾರ್ಮಿಕರಾಗಿದ್ದು ಬಹುತೇಕ ಎಲ್ಲರೂ 40 ವರ್ಷ ವಯಸ್ಸಿನ ಒಳಗಿನವರು ಎನ್ನಲಾಗಿದೆ.

ಈ ಕುಟುಂಬಸ್ಥರು ಅಂತಸ್ತಿನ ಒಂದೇ ಕಟ್ಟಡದಲ್ಲಿ ವಾಸವಾಗಿದ್ದಾರೆ ಬೇರೆ ಬೇರೆ ಮಹಡಿಗಳಲ್ಲಿ ನೆಲೆಸಿದ್ದಾರೆ. ಇದೇ ಕಟ್ಟಡದಲ್ಲಿ ಇರುವ ನೆಲ ಮಹಡಿಯಲ್ಲಿ ನಡೆದ ಪ್ರಾರ್ಥನಾ ಸಭೆಯಲ್ಲಿ ಈಚೆಗೆ ಎಲ್ಲರೂ ಭಾಗವಹಿಸಿದ್ದರು.

ಈ ಪ್ರಾರ್ಥನಾ ಸಭೆಯಲ್ಲಿ ಕುಟುಂಬದ ಜನರಷ್ಟೇ ಇದ್ದರೋ ಅಥವಾ ಹೊರಗಡೆಯಿಂದಲೂ ಬಂದವರು ಇದ್ದರೋ ಎಂಬ ಬಗ್ಗೆ ಖಚಿತ ಮಾಹಿತಿ ಇನ್ನೂ ಲಭ್ಯವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಈ 15 ಮಂದಿ ಇಷ್ಟು ದಿನ ಯಾರ ಸಂಪರ್ಕಕ್ಕೆ ಬಂದಿದ್ದರು, ಇವರನ್ನು ಬಿಟ್ಟು ಪ್ರಾರ್ಥನೆಗೆ ಇನ್ನೆಷ್ಟು ಜನ ಸೇರಿದ್ದರು ಎಂಬಿತ್ಯಾದಿ ಮಾಹಿತಿಯನ್ನು ಕಲೆ ಹಾಕುವ ತಲೆನೋವಿನ ಕೆಲಸ ಈಗ ಪೊಲೀಸರದ್ದು! (ಏಜೆನ್ಸೀಸ್‌)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net