

ಬೆಂಗಳೂರು: ಆನ್‌ಲೈನ್ ಶಾಪಿಂಗ್‌ನಲ್ಲಿ 15 ಲಕ್ಷ ರೂ. ಮೌಲ್ಯದ ಬಹುಮಾನ ಗೆದ್ದಿರುವುದಾಗಿ ಮಹಿಳೆಗೆ ಆಮಿಷವೊಡ್ಡಿದ ಸೈಬರ್ ಕಳ್ಳರು 40.51 ಲಕ್ಷ ರೂ. ಪಡೆದು ಮೋಸ ಮಾಡಿದ್ದಾರೆ.
ಎಚ್‌ಎನ್‌ಆರ್ ಬಡಾವಣೆಯಲ್ಲಿ ನೆಲೆಸಿರುವ 51 ವರ್ಷದ ಮಹಿಳೆ ವಂಚನೆಗೆ ಒಳಗಾಗಿದ್ದಾರೆ. ಈಕೆ ನೀಡಿದ ದೂರಿನ ಮೇರೆಗೆ ಕೇಂದ್ರ ಸಿಇಎನ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೂರುದಾರ ಮಹಿಳೆಗೆ ಕರೆ ಮಾಡಿದ ಅಪರಿಚಿತ ವ್ಯಕ್ತಿ, ‘ನಿಮಗೆ ಮೀಶೋ ಶಾಪಿಂಗ್‌ನಲ್ಲಿ ನಿಮಗೆ 15 ಲಕ್ಷ ರೂ. ಬಹುಮಾನ ಬಂದಿದೆ. ಅದನ್ನು ನಿಮಗೆ ಕೊಡಲು ಟಿಡಿಎಸ್ ಪಾವತಿ ಮಾಡಬೇಕು’ ಎೆಂದು ಸೂಚಿಸಿದ್ದರು. ಬಹುಮಾನದ ಆಸೆಯಿಂದ ಮಹಿಳೆ, ತನ್ನ ಬ್ಯಾಂಕ್ ಖಾತೆಯಿಂದ ಅಪರಿಚಿತ ವ್ಯಕ್ತಿ ಕೊಟ್ಟ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡಿದ್ದರು.
ಸ್ವಲ್ಪ ಸಮಯದ ಬಳಿಕ ಮತ್ತೆ ಕರೆ ಮಾಡಿದ ವ್ಯಕ್ತಿ, ಜಿಎಸ್‌ಟಿ ಮತ್ತು ಸಿಜಿಎಸ್‌ಟಿ ಟ್ಯಾಕ್ಸ್ ಪಾವತಿ ಮಾಡಲು ಸೂಚಿಸಿದ್ದ. ಮಹಿಳೆಗೆ ಬೇರೆ ಬೇರೆ ಸಬೂಬು ಹೇಳಿ ಹಂತ ಹಂತವಾಗಿ 40.51 ಲಕ್ಷ ರೂ. ವರ್ಗಾವಣೆ ಮಾಡಿಸಿಕೊಂಡಿದ್ದ. ಕೊನೆಗೊಂದು ದಿನ ವಂಚನೆ ಎಂಬುದು ಗೊತ್ತಾಗಿ ಮಹಿಳೆ, ದೂರು ನೀಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.