ಬನ್ನೇರುಘಟ್ಟ ಪಾರ್ಕ್‌ನಲ್ಲಿ 15 ಜಿಂಕೆಗಳ ಸಾವು!

15 deer die bannerugatta
15 deer die bannerugatta
Published on

ವಿಜಯವಾಣಿ ಸುದ್ದಿಜಾಲ ಆನೇಕಲ್
ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ 7 ಚಿರತೆ ಮರಿಗಳು ಸಾವಿಗೀಡಾದ ಬೆನ್ನಲ್ಲೇ 15 ಜಿಂಕೆಗಳು ಮೃತಪಟ್ಟಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ.
ತಿಂಗಳ ಹಿಂದೆ ಬೆಂಗಳೂರಿನ ಸೇಂಟ್ ಜಾನ್ಸ್ ಆಸ್ಪತ್ರೆ ಉದ್ಯಾನದಲ್ಲಿದ್ದ 37 ಜಿಂಕೆಗಳನ್ನು ಸೂಕ್ತ ಪೋಷಣೆ ಇಲ್ಲವೆಂದು ಬನ್ನೇರುಘಟ್ಟ ಪಾರ್ಕ್‌ಗೆ ತಂದು ಉದ್ಯಾನದ ಅರಣ್ಯ ವ್ಯಾಪ್ತಿಯ ಸಫಾರಿಯ ಕ್ವಾರಂಟೈನ್ ಕೇಜ್ ಬಳಿ ಬಿಡಲಾಗಿತ್ತು. ಈ ಪೈಕಿ 15 ಜಿಂಕೆಗಳು ಮೃತಪಟ್ಟಿವೆ.
ಬೇರೆಡೆಯಿಂದ ತಂದ ಪ್ರಾಣಿಗಳನ್ನು ಕನಿಷ್ಠ ತಿಂಗಳ ಕಾಲ ಕ್ವಾರಂಟೈನ್ ಮಾಡಿ, ಆರೋಗ್ಯ, ಆಹಾರ, ಔಷಧೋಪಚಾರ ಬಗ್ಗೆ ನಿಗಾವಹಿಸಬೇಕು. ಆದರೆ ಜಿಂಕೆಗಳ ಬಗ್ಗೆ ಕಾಳಜಿ ವಹಿಸದ ಹಿನ್ನೆಲೆಯಲ್ಲಿ ಒಂದಕ್ಕೊಂದು ಕಿತ್ತಾಡಿಕೊಂಡಿರುವ ಜತೆಗೆ ಸರಿಯಾದ ಆಹಾರ ದೊರಕದೆ ಅನಾರೋಗ್ಯ ಪೀಡಿತವಾಗಿ ಮೃತಪಟ್ಟಿರುವ ಸಾಧ್ಯತೆ ಇದೆ ಎನ್ನಲಾಗಿದೆ.
ಬೆಂಗಳೂರಿನಿಂದ ತರಲಾದ ಜಿಂಕೆಗಳ ಆಹಾರ ಪದ್ಧತಿ ಬದಲಾದ ಹಿನ್ನೆಲೆಯಲ್ಲಿ ಅವುಗಳ ಜೀರ್ಣಕ್ರಿಯೆಯಲ್ಲಿ ತೊಂದರೆಯಾಗಿ ಸಾವನ್ನಪ್ಪುತ್ತಿರುವ ಸಾಧ್ಯತೆ ಹೆಚ್ಚಾಗಿದ್ದು, ಉಳಿದ ಜಿಂಕೆಗಳ ಬಗ್ಗೆಯಾದರೂ ಕಾಳಜಿ ವಹಿಸಬೇಕು ಎಂದು ಪ್ರಾಣಿಪ್ರಿಯರು ಒತ್ತಾಯಿಸಿದ್ದಾರೆ.

ವರದಿ ಬಂದ ಬಳಿಕಮಾಹಿತಿ ಲಭ್ಯ: ಬೆಂಗಳೂರಿನ ಸೇಂಟ್ ಜಾನ್ ಆಸ್ಪತ್ರೆ ಉದ್ಯಾನದಲ್ಲಿದ್ದ ಜಿಂಕೆಗಳನ್ನು ಬನ್ನೇರುಘಟ್ಟಕ್ಕೆ ತರಲಾಗಿತ್ತು. ಈ ವೇಳೆ ಎರಡು ಜಿಂಕೆಗಳು ಸಾವನ್ನಪ್ಪಿದ್ದವು. ಉಳಿದ ಜಿಂಕೆಗಳನ್ನು ಬನ್ನೇರುಘಟ್ಟದ ಸಸ್ಯಾಹಾರಿ ಕೇಂದ್ರದ ಬಳಿ ಬಿಡಲಾಗಿತ್ತು. ಬೆಂಗಳೂರಿನಲ್ಲಿ ಪ್ರತಿದಿನ ಬೇರೆ ರೀತಿಯ ಆಹಾರ ಸೇವಿಸುತ್ತಿದ್ದವು. ಇಲ್ಲಿ ಕಾಡಿನ ಆಹಾರಕ್ಕೆ ಹೊಂದಿಕೊಳ್ಳದ ಜತೆಗೆ ಕೆಲವು ಜಿಂಕೆಗಳು ಒಂದಕ್ಕೊಂದು ಕಿತ್ತಾಡಿಕೊಂಡು ಮೃತಪಟ್ಟಿರುವ ಸಾಧ್ಯತೆ ಇದೆ. ಮೃತಪಟ್ಟ ಜಿಂಕೆಗಳ ಮಾದರಿಯನ್ನು ಪಶು ವೈದ್ಯಕೀಯ ಆಸ್ಪತ್ರೆಗೆ ಕಳುಹಿಸಲಾಗಿದ್ದು, ವರದಿ ಬಂದ ಬಳಿಕ ಸಂಪೂರ್ಣ ಮಾಹಿತಿ ತಿಳಿಯಲಿದೆ ಎಂದು ಉದ್ಯಾನವನದ ಕಾರ್ಯನಿರ್ವಾಹಕ ನಿರ್ದೇಶಕ ಸೂರ್ಯಸೇನ್ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net