ಶಿಕ್ಷಕರ ಅರ್ಹತಾ ಪರೀಕ್ಷೆಗೆ ಸಿದ್ಧತೆ: ನಾಳೆ 15 ಕೇಂದ್ರಗಳಲ್ಲಿ ಎಕ್ಸಾಂ, ಒಟ್ಟು 5589 ಅಭ್ಯರ್ಥಿಗಳು

15-klr-5 Dc R Selvamani
Published on

ಕೋಲಾರ : ಕರೊನಾ ಮಾರ್ಗಸೂಚಿ ಪಾಲನೆಯೊಂದಿಗೆ ಆ.22ರಂದು ಶಿಕ್ಷಕರ ಅರ್ಹತಾ ಪರೀಕ್ಷೆಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಸಿದ್ಧತೆ ನಡೆಸಿದ್ದು, ಒಟ್ಟು 5589 ಅಭ್ಯರ್ಥಿಗಳು ನಗರದ 15 ಕೇಂದ್ರಗಳಲ್ಲಿ ಪರೀಕ್ಷೆ ಬರೆಯಲಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಹೇಳಿದರು.

ಜಿಲ್ಲಾಧಿಕಾರಿಗಳ ಕಚೇರಿ ನ್ಯಾಯಾಂಗ ಸಭಾಂಗಣದಲ್ಲಿ ಶುಕ್ರವಾರ ನಡೆದ ಪರೀಕ್ಷಾ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಪ್ರಾಥಮಿಕ ಶಿಕ್ಷಕರಾಗಲು 2254 ಹಾಗೂ ಪ್ರೌಢಶಿಕ್ಷಕರಾಗಲು 3335 ಮಂದಿ ಪರೀಕ್ಷೆ ತೆಗೆದುಕೊಂಡಿದ್ದಾರೆ ಎಂದರು.

ಪರೀಕ್ಷಾ ಕೇಂದ್ರಗಳು: ನಗರ ಸರ್ಕಾರಿ ಬಾಲಕರ, ಬಾಲಕಿಯರ ಹಾಗೂ ನೂತನ ಪದವಿ ಪೂರ್ವ ಕಾಲೇಜುಗಳು, ಚಿನ್ಮಯ ವಿದ್ಯಾಲಯ ಹಾಗೂ ಮಹಿಳಾ ಸಮಾಜ ಶಾಲೆಗಳಲ್ಲಿ ತಲಾ 2 ಕೇಂದ್ರಗಳು ಉಳಿದಂತೆ ಆರ್‌ವಿ ಇಂಟರ್ ನ್ಯಾಷನಲ್ ಶಾಲೆ, ಸೆಂಟ್‌ಆನ್ಸ್ ಶಾಲೆ, ಸುಭಾಷ್‌ಶಾಲೆ, ಸೈನಿಕ್ ಪಬ್ಲಿಕ್ ಶಾಲೆ, ಆಲ್‌ಅಮಿನ್ ಹೈಸ್ಕೂಲ್, ಆಲ್‌ಅಮಿನ್ ಉರ್ದು ಶಾಲೆ ಹಾಗೂ ಮೆಥೋಡಿಸ್ಟ್ ಶಾಲೆಗಳಲ್ಲಿ ಸಿದ್ಧತೆ ಮಾಡಲಾಗಿದೆ.

ಕೋವಿಡ್ ಆತಂಕದ ಹಿನ್ನೆಲೆಯಲ್ಲಿ ಅಗತ್ಯ ಸಿದ್ಧತೆಯಾಗಿ ಎಲ್ಲ 15 ಪರೀಕ್ಷಾ ಕೇಂದ್ರಗಳಲ್ಲಿ ಸ್ಯಾನಿಟೈಸರ್ ಸಿಂಪಡಣೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು. ಪರೀಕ್ಷೆಗೆ ಬರುವ ಎಲ್ಲ ಅಭ್ಯರ್ಥಿಗಳು ಮತ್ತು ಸಿಬ್ಬಂದಿಗೆ ಥರ್ಮಲ್ ಸ್ಕ್ರೀನಿಂಗ್ ಕಡ್ಡಾಯಗೊಳಿಸಲಾಗಿದೆ. ಮಾಸ್ಕ್ ಧರಿಸಲು ಸೂಚಿಸಿದ್ದು, ಕೇಂದ್ರಕ್ಕೆ ಬರುವ ಎಲ್ಲರಿಗೂ ಸ್ಯಾನಿಟೈಸರ್ ಕೈಗೆ ಹಾಕಿಯೇ ಒಳ ಪ್ರವೇಶಿಸಲು ಕ್ರಮ ವಹಿಸಬೇಕು ಎಂದು ಸೂಚಿಸಿದರು.

ಡಿಡಿಪಿಐ ಎಸ್.ಜಿ.ನಾಗೇಶ್ ಸಭೆಗೆ ಮಾಹಿತಿ ನೀಡಿ, ಈಗಾಗಲೇ ಎಲ್ಲ ಕೇಂದ್ರಗಳಿಗೂ ಭೇಟಿ ನೀಡಿ ಸಿದ್ಧತೆ ಪರಿಶೀಲಿಸಿದ್ದು, ಯಾವುದೇ ಸಮಸ್ಯೆ ಎದುರಾಗದಂತೆ ಇಲಾಖೆ ಮುನ್ನಚ್ಚರಿಕೆ ವಹಿಸಿದೆ. ಜ್ವರ, ನೆಗಡಿ ಮತ್ತಿತರ ಕೋವಿಡ್‌ಗೆ ಸಂಬಂಧಿಸಿದ ಲಕ್ಷಣ ಕಂಡು ಬಂದರೆ ಅಂತಹ ಅಭ್ಯರ್ಥಿಗಳಿಗೆ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಲಾಗಿದೆ. ಪ್ರತಿ ಕೇಂದ್ರದಲ್ಲೂ ಆಶಾ ಹಾಗೂ ಶುಶ್ರೂಷಕಿಯೊಬ್ಬರನ್ನು ನೇಮಿಸಲು ಆರೋಗ್ಯ ಇಲಾಖೆಗೆ ಮನವಿ ಮಾಡಲಾಗಿದೆ ಎಂದರು.

ಪರೀಕ್ಷಾ ನೋಡಲ್ ಅಧಿಕಾರಿ ಎ.ಎನ್.ನಾಗೇಂದ್ರಪ್ರಸಾದ್ ಮಾತನಾಡಿ, ಪರೀಕ್ಷಾ ಕಾರ್ಯಕ್ಕೆ ಮುಖ್ಯ ಅಧೀಕ್ಷಕರು, ಅಭಿರಕ್ಷಕರು, ಸ್ಥಾನಿಕ ಜಾಗೃತದಳ, ಕೊಠಡಿ ಮೇಲ್ವಿಚಾಕರು ಸೇರಿ ಹೆಚ್ಚಿನ ಸಿಬ್ಬಂದಿ ನೇಮಿಸಿಕೊಳ್ಳಲಾಗಿದೆ. ದೈಹಿಕ ಅಂತರ ಕಾಯ್ದುಕೊಳ್ಳಲು ಕ್ರಮವಹಿಸಲಾಗಿದೆ, ಮುಖ್ಯ ಅಧೀಕ್ಷಕರನ್ನು ಹೊರತುಪಡಿಸಿ ಇತರೆಲ್ಲಾ ಸಿಬ್ಬಂದಿ, ಅಭ್ಯರ್ಥಿಗಳಿಗೆ ಮೊಬೈಲ್ ತರುವುದನ್ನು ನಿಷೇಧಿಸಲಾಗಿದೆ. ಮೊಬೈಲ್ ಪಡೆದುಕೊಳ್ಳಲು ಒಬ್ಬ ಮೊಬೈಲ್ ರಿಸೀವಿಂಗ್ ಅಧಿಕಾರಿಯನ್ನು ನೇಮಿಸಲಾಗಿದೆ ಎಂದರು.

ನಿಷೇಧಾಜ್ಞೆ ಜಾರಿ: ಪರೀಕ್ಷಾ ಕೇಂದ್ರಗಳ ಸುತ್ತ 200 ಮೀ. ವ್ಯಾಪ್ತಿಯಲ್ಲಿ 144ನೇ ಸೆಕ್ಷನ್ ಅನ್ವಯ ನಿಷೇಧಾಜ್ಞೆ ಜಾರಿ ಇರುತ್ತದೆ. ಭದ್ರತೆಗೆ ಪ್ರತಿ ಕೇಂದ್ರಕ್ಕೂ ಪೊಲೀಸ್ ಸಿಬ್ಬಂದಿಯನ್ನು ನೇಮಿಸಲಾಗಿದೆ ಎಂದು ವಿವರಿಸಿದರು.

ಡಿವೈಪಿಸಿ ಮೋಹನ್ ಬಾಬು, ಬಿಇಒಗಳಾದ ರಾಮಕೃಷ್ಣಪ್ಪ, ಕೆಂಪಯ್ಯ, ವಿ.ಉಮಾದೇವಿ, ವಿಷಯ ಪರಿವೀಕ್ಷಕರಾದ ಶಶಿವಧನ, ಗಾಯತ್ರಿ, ಕೃಷ್ಣಪ್ಪ, ವೆಂಕಟೇಶಪ್ಪ ಸಿಬ್ಬಂದಿ ಹಾಜರಿದ್ದರು.

ಮುಂಚಿತವಾಗಿ ಬನ್ನಿ: ಪೇಪರ್-1ರ ಪರೀಕ್ಷೆ ಬೆಳಗ್ಗೆ 9.30 ರಿಂದ 12 ಗಂಟೆವೆರಗೂ 10 ಕೇಂದ್ರಗಳಲ್ಲಿ ನಡೆಯಲಿದೆ. ಪೇಪರ್ 2ರ ವಿಷಯದ ಪರೀಕ್ಷೆ ಮಧ್ಯಾಹ್ನ 2 ರಿಂದ 4.30ರವರೆಗೂ ನಡೆಯಲಿದೆ. ಅಭ್ಯರ್ಥಿಗಳು ಅರ್ಧಗಂಟೆ ಮುಂಚಿತವಾಗಿ ಕೇಂದ್ರಕ್ಕೆ ಆಗಮಿಸಬೇಕು, ಥರ್ಮಲ್ ಸ್ಕ್ರೀನಿಂಗ್, ಸ್ಯಾನಿಟೈಸರ್‌ಗೆ ಒಳಪಡುವುದು ಕಡ್ಡಾಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net