

ಜಾರ್ಖಂಡ್: ಗಂಡ ಹೆಂಡತಿಯ ನಡುವಿನ ಜಗಳವು ದುರಂತವೊಂದಕ್ಕೆ ಕಾರಣವಾಗಿರುವ ಘಟನೆ ಜಾರ್ಖಂಡ್‌ನ ಧಾತುವಾ ಗ್ರಾಮದಲ್ಲಿ ನಡೆದಿದೆ.
ಸುಪ್ರಿಯಾ(14) ಸಾವಿಗೀಡಾದ ದುರ್ದೈವಿಯಾಗಿದ್ದು, ಉದಯನಾಥ್ ಹಾಗೂ ಕಾಂತಿದೇವಿ ಜಗಳವಾಡಿದ ದಂಪತಿಗಳಾಗಿದ್ದಾರೆ.
ಬುಧವಾರ ಬೆಳಿಗ್ಗೆ ಗಣೇಶಿನಾಥ ಎಂಬಾತ ದಂಪತಿಗಳ ಮನೆಯ ಹತ್ತಿರ ಬಂದು ಸಾಲವಾಗಿ ಪಡೆದ 100ರೂ.ವನ್ನು ಹಿಂದಿರುಗಿಸುವಂತೆ ಉದಯನಾಥ್ಗೆ ಕೇಳಿಕೊಂಡಿದ್ದಾನೆ. ಈ ವೇಳೆ ಉದಯ ತನ್ನ ಬಳಿ ಹಣವಿಲ್ಲವೆಂದು ಎಂದು ಹೇಳಿ, ತನ್ನ ಹೆಂಡತಿಗೆ 100 ರೂ.ನೀಡುವಂತೆ ಮನವಿ ಮಾಡಿದ್ದಾನೆ.
ಆದರೆ ಕಾಂತಿದೇವಿ ಈ ವೇಳೆ ಹಣ ನೀಡಲು ನಿರಾಕರಿಸಿದ್ದು, ಮನೆಯಂಗಳದಲ್ಲಿಯೇ ದಂಪತಿ ನಡುವೆ ತೀವ್ರ ವಾಗ್ವಾದ ಶುರುವಾಗಿದೆ. ಸಿಟ್ಟಿಗೆದ್ದ ಉದಯನಾಥ್ ಮನೆಯಲ್ಲಿದ್ದ ಬಂದೂಕನ್ನು ಹೊರತೆಗೆದಿದ್ದು, ಈ ವೇಳೆ ಆಕಸ್ಮಾತ್ ಆಗಿ ಗುಂಡು ಸೋದರ ಸೊಸೆ ಸುಪ್ರಿಯಾಗೆ ತಗುಲಿದೆ.
ತಕ್ಷಣವೇ ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಬಾಲಕಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ. ಇನ್ನು, ವಿಷಯವನ್ನು ತಿಳಿದ ಪೊಲೀಸರು ಮೃತದೇಹವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.(ಏಜೆನ್ಸೀಸ್)