

ನವದೆಹಲಿ: ಕರೊನಾ ಸೋಂಕಿಗೆ ಒಳಗಾಗಿ ದೆಹಲಿಯ ಚತ್ತರ್ಪುರದ ಸರ್ದಾರ್ ಪಟೇಲ್ ಕೊವಿಡ್-19 ಕೇರ್ ಸೆಂಟರ್ನಲ್ಲಿ ದಾಖಲಾಗಿದ್ದ 14 ವರ್ಷದ ಬಾಲಕಿಗೆ ಇನ್ನೋರ್ವ ಕರೊನಾ ರೋಗಿ ಲೈಂಗಿಕ ಕಿರುಕುಳ ನೀಡಿದ್ದಾನೆ.
ಜು.15ರಂದು ಬಾಲಕಿ ವಾಶ್ರೂಂಗೆ ಹೋಗಿದ್ದಾಗ, ಈ ವ್ಯಕ್ತಿ ಅಲ್ಲಿಯೇ ಆಕೆಯ ಮೇಲೆ ದೌರ್ಜನ್ಯ ಎಸಗಿದ್ದಾನೆ. ಪ್ರಕರಣ ಇಂದು ಬೆಳಕಿಗೆ ಬಂದಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಕರೊನಾ ವಿರುದ್ಧ ‘ಚಹಾ’ ಹೋರಾಟ; ಏರ್ಪೋರ್ಟ್ ಅಧಿಕಾರಿಗಳ ಹೊಸ ಪ್ರಯೋಗ
ಆರೋಪಿ 19 ವರ್ಷದ ಯುವಕನನ್ನು ಮತ್ತು ಅವನೊಂದಿಗೆ ಇದ್ದ ಇನ್ನೊಬ್ಬನನ್ನು ಬಂಧಿಸಲಾಗಿದೆ ಎಂದು ಹೇಳಿದ್ದಾರೆ.
ಈ ಬಾಲಕಿ ಮತ್ತು ಯುವಕ ಇಬ್ಬರೂ ಸ್ಲಂ ನಿವಾಸಿಗಳು. ಇವರು ಕೊವಿಡ್-19ಗೆ ಒಳಗಾಗಿ ಇಲ್ಲಿ ದಾಖಲಾಗಿದ್ದರು. ಇವರಿಬ್ಬರ ಸಂಬಂಧಿಕರೂ ಇದ್ದಾರೆ. ಅಂದು ವಾಶ್ರೂಂನಲ್ಲಿ ಆದ ಘಟನೆಯನ್ನು ಬಾಲಕಿ ತನ್ನ ಸಂಬಂಧಿಯೋರ್ವರಿಗೆ ಹೇಳಿಕೊಂಡಿದ್ದಳು. ಅವರೇ ನಮಗೆ ಮಾಹಿತಿ ನೀಡಿದ್ದಾರೆ ಎಂದು ಪೊಲೀಸ್ ತಿಳಿಸಿದ್ದಾರೆ.
ಯುವಕ ಬಾಲಕಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದರೆ, ಆತನ ಸಹಚರ ಅದನ್ನು ಮೊಬೈಲ್ನಲ್ಲಿ ಸೆರೆ ಹಿಡಿಯುತ್ತಿದ್ದ. ಆಕೆ ನೀಡಿದ ದೂರಿನ ಅನ್ವಯ ಇಬ್ಬರ ವಿರುದ್ಧವೂ ಪ್ರಕರಣ ದಾಖಲಾಗಿದೆ. ಫೋನ್ ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.
10,000 ಬೆಡ್ಗಳುಳ್ಳ ಸರ್ದಾರ್ ಪಟೇಲ್ ಕೊವಿಡ್ ಸೆಂಟರ್ನ್ನು ಈ ತಿಂಗಳ ಪ್ರಾರಂಭದಲ್ಲಿ ದೆಹಲಿಯ ಲೆಫ್ಟಿನಂಟ್ ಗವರ್ನರ್ ಅನಿಲ್ ಬೈಜಾಲ್ ಅವರು ಉದ್ಘಾಟಿಸಿದ್ದರು.(ಏಜೆನ್ಸೀಸ್)