

ಜಗ್ತಿಯಾಲ್: ಇತ್ತೀಚೆಗೆ ಸಣ್ಣಪುಟ್ಟ ಕಾರಣಗಳಿಗೆ ಹಲವಾರು ಜನರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ತಾಯಿ ಗದರಿದ್ದಕ್ಕೆ, ಪೋನ್ ಕೊಡಿಸಿದಿದ್ದಕ್ಕೆ, ಪರೀಕ್ಷೆಯಲ್ಲಿ ಫೇಲ್ ಹೀಗೆ ನಾನಾ ಕಾರಣಗಳಿಗೆ ಕ್ಷಣಾರ್ಧದಲ್ಲಿ ತಮ್ಮ ಅಮೂಲ್ಯ ಜೀವವನ್ನೇ ಬಲಿಕೊಡುತ್ತಿದ್ದಾರೆ. ಇತ್ತೀಚೆಗಷ್ಟೇ 9ನೇ ತರಗತಿ ವಿದ್ಯಾರ್ಥಿಯೊಬ್ಬ ತಾಯಿ ತನಗೆ ಸ್ಮಾರ್ಟ್‌ಫೋನ್ ನೀಡಲು ನಿರಾಕರಿಸಿದಳು ಎಂಬ ಕಾರಣಕ್ಕೆ ತನ್ನ ಜೀವನವನ್ನು ಅಂತ್ಯಗೊಳಿಸಿರುವ ಘಟನೆ ತೆಲಂಗಾಣದ ಜಗ್ತಿಯಾಲ್ ಎಂಬಲ್ಲಿ ನಡೆದಿದೆ.
ಸಾಯಿ ಚರಣ್ (14) ಎಂಬಾತನೇ ಮೃತ ವಿದ್ಯಾರ್ಥಿಯಾಗಿದ್ದು, ಸ್ಥಳೀಯ ಶಾಲೆಯಲ್ಲಿ ಒಂಬತ್ತನೇ ತರಗತಿ ಓದುತ್ತಿದ್ದಾನೆ. ಆದರೆ ಇತ್ತೀಚಿಗೆ ಹುಡುಗ ತನ್ನ ಓದಿನ ಕಡೆ ಗಮನ ಕೊಡದೆ ಪದೇ ಪದೇ ಫೋನ್ ಬಳಸುತ್ತಿದ್ದ. ಈ ಬಗ್ಗೆ ತಾಯಿ ಹಲವು ಬಾರಿ ಎಚ್ಚರಿಕೆ ನೀಡಿ, ಫೋನ್ ಬಳಸುವ ಬದಲು ಪುಸ್ತಕಗಳತ್ತ ಗಮನಹರಿಸಿ ಅಧ್ಯಯನ ಮಾಡು ಎಂದು ಸಲಹೆ ನೀಡಿದ್ದಳು.
ಇದನ್ನೂ ಓದಿ: ದೃಷ್ಟಿದೋಷ ಶಿಕ್ಷಕನನ್ನು ತರಗತಿಯಲ್ಲೇ ಅವಮಾನಿಸಿದ ವಿದ್ಯಾರ್ಥಿಗಳು..
ಆದರೆ, ಅಮ್ಮನ ಮಾತನ್ನು ಕಡೆಗಣಿಸಿದ್ದ ವಿದ್ಯಾರ್ಥಿಯು ಫೋನ್ ಬಳಸುತ್ತಲೇ ಇದ್ದನು. ಮಂಗಳವಾರದಂದು ಕಾಲಿನ ಗಾಯದಿಂದ ಬಳಲುತ್ತಿದ್ದ ಆತ ಶಾಲೆಯಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಗೆ ಹಾಜರಾಗಿರಲಿಲ್ಲ. ಬಹಳ ಹೊತ್ತು ಸ್ಮಾರ್ಟ್‌ಫೋನ್‌ನಲ್ಲಿ ಆಟವಾಡುತ್ತಿದ್ದ ಆತನನ್ನು ನೋಡಿದ ತಾಯಿ ಗದರಿಸಿ ಫೋನ್ ಕಿತ್ತುಕೊಂಡು ಹೊರಹೋಗಿದ್ದಳು. ಇದರಿಂದ ಮನನೊಂದ ಆತ ಮನೆಯಲ್ಲಿ ಯಾರೂ ಇಲ್ಲದನ್ನು ಕಂಡು ಕೊಠಡಿಯೊಳಗೆ ಹೋಗಿ ಬಾಗಿಲು ಹಾಕಿಕೊಂಡು ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಹೊರಗೆ ಹೋದ ತಾಯಿ ಬಹಳ ಹೊತ್ತಿನ ನಂತರ ಮನೆಗೆ ಬಂದಾಗ ಕೋಣೆಯ ಬಾಗಿಲು ಮುಚ್ಚಿರುವುದು ಗಮನಕ್ಕೆ ಬಂದಿದೆ. ಆಕೆ ಕೂಗಿದರೂ ಆತ ಪ್ರತಿಕ್ರಿಯೆ ನೀಡದೆ ಆತಂಕಗೊಂಡು ಅಕ್ಕಪಕ್ಕದವರ ಸಹಾಯದಿಂದ ಬಾಗಿಲು ಒಡೆದು ನೋಡಿದಾಗ ಮಗು ಅದಾಗಲೇ ಪ್ರಾಣ ಕಳೆದುಕೊಂಡಿರುವುದು ಕಂಡು ಬಂದಿದೆ. ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿದರು. ಬಾಲಕನ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಜಗಿತ್ಯಾಲ ಏರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ.(ಏಜೆನ್ಸೀಸ್)