

ಲಖನೌ: ರನ್ನಿಂಗ್ ರೇಸ್ಗೆ (Running Race) ತಯಾರಿ ನಡೆಸುತ್ತಿದ್ದಾಗ ಬಾಲಕನೋರ್ವ ಹೃದಯಾಘಾತವಾಗಿ (Heart Attack) ಮೃತಪಟ್ಟಿರುವ ಘಟನೆ ಉತ್ತರಪ್ರದೇಶದ ಆಲಿಗಢದಲ್ಲಿ ನಡೆದಿದೆ. ಮೃತ ಬಾಲಕನನ್ನು ಮೋಹಿತ್ ಚೌಧರಿ (14) ಎಂದು ಗುರುತಿಸಲಾಗಿದೆ.
ಈ ಬಗ್ಗೆ ಮಾತನಾಡಿರುವ ಶಾಲೆಯ ಸಿಬ್ಬಂದಿ, ಡಿಸೆಂಬರ್ 07ರಂದು ಶಾಲೆಯಲ್ಲಿ ಕ್ರೀಡಾಕೂಟವನ್ನು (Sports Day) ಆಯೋಜಿಸಲಾಗುತ್ತು. ಅದರಲ್ಲಿ ಭಾಗಿಯಾಗುವ ಸಲುವಾಗಿ ಮೋಹಿತ್ ತಯಾರಿ ನಡೆಸುತ್ತಿದ್ದ. ಆರಂಭದಲ್ಲಿ ತನ್ನ ಸ್ನೇಹಿತರೊಂದಿಗೆ ಎರಡು ಸುತ್ತು ಓಡಿದ ಮೂರನೇ ಸುತ್ತನ್ನು ಪೂರ್ಣ ಮಾಡುವಾಗ ಕುಸಿದು ಬಿದ್ದಿದ್ದಾನೆ. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಿ ಸ್ನೇಹಿತರು ಪೋಷಕರಿಗೆ ಮಾಹಿತಿ ನೀಡಿದ್ದಾರೆ. ವೈದ್ಯರು ಆತ ಹೃದಯಾಘಾತವಾಗಿ (Heart Attack) ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ ಎಂದು ಶಾಲೆಯ ಸಿಬ್ಬಂದಿ ತಿಳಿಸಿದ್ದಾರೆ.
ಘಟನೆ ಬಗ್ಗೆ ಮಾತನಾಡಿರುವ ಹಿರಿಯ ಹಿರಿಯ ವೈದ್ಯರೊಬ್ಬರು, ಆಲಿಗಢದಲ್ಲಿ ಕಳೆದ 25 ದಿನಗಳ ಅವಧಿಯಲ್ಲಿ ಇದು ಮೂರನೇ ಪ್ರಕರಣವಾಗಿದ್ದು, 20 ವರ್ಷದ ಯುವತಿ, 8 ವರ್ಷದ ಬಾಲಕಿ ಬಳಿಕ ಇದೀಗ 14 ವರ್ಷದ ಬಾಲಕ ಹೃದಯಾಘಾತಕ್ಕೆ ಬಲಿಯಾಗಿದ್ದಾನೆ. ಈ ರೀತಿಯ ಪ್ರಕರಣಗಳು ಹೆಚ್ಚಾಗುತ್ತಿದ್ದು, ಹೃದಯದ ಆರೊಗ್ಯಕ್ಕೆ ಕಾಪಾಡಿಕೊಳ್ಳುವುದು ತುಂಬಾ ಮುಖ್ಯವಾಗಿದೆ ಎಂದು ಹಿರಿಯ ವೈದ್ಯರೊಬ್ಬರು ತಿಳಿಸಿದ್ದಾರೆ.