ನಾಗ್ಪುರ ಹಿಂಸಾಚಾರ: 14 ಮಂದಿ ಬಂಧನ, 3 ಹೊಸ ಎಫ್‌ಐಆರ್‌ ದಾಖಲು! | Nagpur Violence

ವಿಜಯವಾಣಿ (48)
Published on

Nagpur Violence: ಇತ್ತೀಚೆಗೆ ಮಹಾರಾಷ್ಟ್ರದ ನಾಗ್ಪುರದಲ್ಲಿ ಭುಗಿಲೆದ್ದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ಒಟ್ಟು 14 ಮಂದಿಯನ್ನು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಒಟ್ಟು ಬಂಧಿತರ ಸಂಖ್ಯೆ ಇದೀಗ 105ಕ್ಕೆ ಏರಿದೆ. ಬಂಧಿತರಲ್ಲಿ 10 ಬಾಲಾಪರಾಧಿಗಳು ಸೇರಿದ್ದಾರೆ. ಗಲಭೆ ನಗರದಲ್ಲಿ ಅಶಾಂತಿ ಮೂಡಿಸಿದ್ದು, ಸ್ಥಳೀಯರಲ್ಲಿ ಆತಂಕ ಕಾಡಿದೆ.

ಘಟನೆಗಳಿಗೆ ಸಂಬಂಧಿಸಿದಂತೆ ಪೊಲೀಸರು ಮೂರು ಹೆಚ್ಚುವರಿ ಎಫ್‌ಐಆರ್ ದಾಖಲಿಸಿದ್ದಾರೆ. ಛತ್ರಪತಿ ಸಂಭಾಜಿನಗರ ಜಿಲ್ಲೆಯಲ್ಲಿ ಔರಂಗಜೇಬನ ಸಮಾಧಿಯನ್ನು ತೆಗೆದುಹಾಕುವಂತೆ ಕರೆ ನೀಡಿದ ಪ್ರತಿಭಟನೆಯು ನಾಗ್ಪುರದ ಹಲವಾರು ಭಾಗಗಳಲ್ಲಿ ವ್ಯಾಪಕ ಕಲ್ಲು ತೂರಾಟಕ್ಕೆ ಕಾರಣವಾಯಿತು. ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಲ್ಲದೇ ವಾಹನಗಳಿಗೆ ಬೆಂಕಿಯಿಟ್ಟು ಗಲಭೆಯ ತೀವ್ರತೆಯನ್ನು ಹೆಚ್ಚಿಸಿದರು.

ನಾಗ್ಪುರ ಪೊಲೀಸ್ ಆಯುಕ್ತ ರವೀಂದ್ರ ಕುಮಾರ್ ಸಿಂಘಾಲ್ ಮಾತನಾಡಿ, "ಗಲಭೆಗೆ ಸಂಬಂಧಿಸಿದಂತೆ ನಗರದ ವಿವಿಧ ಭಾಗಗಳಿಂದ ಒಟ್ಟು 14 ಆರೋಪಿಗಳನ್ನು ಬಂಧಿಸಲಾಗಿದೆ. ಹೆಚ್ಚುವರಿಯಾಗಿ, ಮೂರು ಹೊಸ ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ. ಉನ್ನತ ಮಟ್ಟದ ಪರಿಶೀಲನಾ ಸಭೆಯ ನಂತರ ಕೆಲವು ಪ್ರದೇಶಗಳಲ್ಲಿ ಕರ್ಫ್ಯೂ ತೆಗೆದುಹಾಕುವ ನಿರ್ಧಾರವನ್ನು ನಿರ್ಧರಿಸಲಾಗುವುದು ಎಂದು ಹೇಳಿದರು.

ನಾಗ್ಪುರ ಹಿಂಸಾಚಾರದಲ್ಲಿ ಉಪ ಆಯುಕ್ತರ (ಡಿಸಿಪಿ) ಶ್ರೇಣಿಯ ಮೂವರು ಅಧಿಕಾರಿಗಳು ಸೇರಿದಂತೆ 33ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಲಭೆಯ ಪ್ರಮುಖ ಆರೋಪಿ ಫಹೀಮ್ ಖಾನ್ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಾಗಿರುವುದು ಇಲ್ಲಿ ಗಮನಾರ್ಹ. ನಾಗ್ಪುರದ ಸ್ಥಳೀಯ ನ್ಯಾಯಾಲಯವು ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಬಂಧಿಸಲ್ಪಟ್ಟ 17 ಮಂದಿಯನ್ನು ಶನಿವಾರ (ಮಾರ್ಚ್ 22)ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net