

ಮುಜಫ್ಫರ್ನಗರ: ವಲಸೆ ಕಾರ್ಮಿಕರ ದಾರುಣ ಸಾವು ಮುಂದುವರಿದಿದೆ. ಒಂದೆಡೆ, ಮುಜಫ್ಪರ್ನಗರದ ಹೆದ್ದಾರಿಯಲ್ಲಿ ಕಾಲ್ನಡಿಗೆಯಲ್ಲಿ ಸಾಗುತ್ತಿದ್ದ ವಲಸೆ ಕಾಮಿರ್ಕರ ಮೇಲೆ ಬಸ್ ಹರಿದು 6 ಜನ ಸ್ಥಳದಲ್ಲಿಯೇ ಮೃತಪಟ್ಟಿದ್ದು, ನಾಲ್ವರು ಗಾಯಗೊಂಡಿದ್ದಾರೆ. ಇನ್ನೊಂದೆಡೆ, ಮಧ್ಯಪ್ರದೇಶದ ಗುನಾದಲ್ಲಿ ಟ್ರಕ್ಕೊಂದು ಬಸ್ಗೆ ಡಿಕ್ಕಿಯಾಗಿದ್ದರಿಂದ 8 ಜನ ಸ್ಥಳದಲ್ಲಿಯೇ ಸಾವಿಗೀಡಾಗಿದ್ದು, 50ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ.
ಮುಜಫ್ಫರ್ನಗರ- ಸಹರಣ್ಪುರ ಹೆದ್ದಾರಿಯಲ್ಲಿ ವಲಸೆ ಕಾರ್ಮಿಕರು ಕಾಲ್ನಡಿಗೆ ಮೂಲಕ ತಮ್ಮೂರುಗಳಿಗೆ ಸಾಗುತ್ತಿದ್ದರು. ಗಲೌಲಿ ಚೆಕ್ಪೋಸ್ಟ್ ಬಳಿ ಉತ್ತರಪ್ರದೇಶದ ಸಾರಿಗೆ ಸಮಸ್ತೆ ಬಸ್ ಅವರ ಮೇಲೆ ಹರಿದಿದೆ. ಆರು ಮಂದಿ ಸ್ಥಳದಲ್ಲಿಯೇ ಮೃತಪಟ್ಟರೆ, ನಾಲ್ವರ ಸ್ಥಿತಿ ಗಂಭೀರವಾಗಿದೆ.
ದೂರದ ಮುಂಬೈನಿಂದ ಟ್ರಕ್ನಲ್ಲಿ ಉತ್ತರಪ್ರದೇಶದ ತಮ್ಮೂರುಗಳಿಗೆ ಹೊರಟಿದ್ದರು. ಬುಧವಾರ ರಾತ್ರಿ ಮಧ್ಯಪ್ರದೇಶದ ಗುನಾ ಬಳಿ ಬಸ್ವೊಂದಕ್ಕೆ ಟ್ರಕ್ ಡಿಕ್ಕಿಯಾಗಿದೆ. ಪರಿಣಾಮ 8 ಜನರು ಸ್ಥಳದಲ್ಲಿಯೇ ಮೃತಪಟ್ಟಿದ್ದು, 50ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ.
ವಲಸೆ ಕಾರ್ಮಿಕರಿಗಾಗಿ ಶ್ರಮಿಕ್ ಎಕ್ಸ್ಪ್ರೆಸ್ ರೈಲುಗಳನ್ನು ಬಿಡಲಾಗುತ್ತಿದೆಯಾದರೂ, ಸಾವಿರಾರು ಸಂಖ್ಯೆಯಲ್ಲಿ ಜನರು ರೈಲು ನಿಲ್ದಾಣಗಳ ಎದುರು ಬೀಡು ಬಿಟ್ಟಿದ್ದಾರೆ. ಸೀಮಿತ ಸಂಖ್ಯೆಯಲ್ಲಿರುವ ರೈಲುಗಳಲ್ಲಿ ಸಾಗಲು ದಿನಗಟ್ಟಲೇ ಕಾಯಬೇಕಿದೆ. ಹೀಗಾಗಿ ಜನರು ಕಾಲ್ನಡಿಗೆ ಹಾಗೂ ಟ್ರಕ್, ಲಾರಿ ಹಾಗೂ ಇತರ ವಾಹನಗಳಲ್ಲಿ ಪ್ರಯಾಣಕ್ಕೆ ಮುಂದಾಗುತ್ತಿದ್ದಾರೆ.