

ಬೆಂಗಳೂರು: ತಾಯಿಯನ್ನು ಕೊಲೆ ಮಾಡಿದ ಪ್ರಕರಣದಲ್ಲಿ ಬಂಧಿತ ಟೆಕ್ಕಿ ಅಮೃತಾ ಸಹ ಆತ್ಮಹತ್ಯೆಗೆ ನಿರ್ಧರಿಸಿದ್ದಳು. ಪೊಲೀಸರ ವಶದಲ್ಲಿ ಇದ್ದಾಗಲೇ ಆಕೆ ಆತ್ಮಹತ್ಯೆಗೆ ಯತ್ನಿಸಿದ್ದಳು. ಈ ಹಿನ್ನೆಲೆಯಲ್ಲಿ ಮನೋವೈದ್ಯರಿಂದ ಕೌನ್ಸೆಲಿಂಗ್ ಮಾಡಿಸಿರುವ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಅಕ್ಷಯನಗರದಲ್ಲಿ ನಿರ್ಮಲಾ (54) ಕೊಲೆ ಪ್ರಕರಣ ಸಂಬಂಧ ಕೆ.ಆರ್. ಪುರ ಪೊಲೀಸರು ಟೆಕ್ಕಿ ಅಮೃತಾ ಮತ್ತು ಶ್ರೀಧರ್ನನ್ನು ಅಂಡಮಾನ್ನಲ್ಲಿ ಬಂಧಿಸಿದ್ದರು. ಫೆ.6ರಂದು ನಗರಕ್ಕೆ ಕರೆತಂದು ಶುಕ್ರವಾರ ಮಹಜರ್ ಮಾಡಿ ಸಂಜೆ ಕೋರ್ಟ್ಗೆ ಹಾಜರುಪಡಿಸಿದ್ದರು. ನ್ಯಾಯಾಲಯ ಅವರಿಬ್ಬರನ್ನೂ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದೆ.
2018ರಲ್ಲೇ ಕೆಲಸ ಬಿಟ್ಟಿದ್ದಳು: ಅಮೃತಾ ಮತ್ತು ಶ್ರೀಧರ್ ವಿಚಾರಣೆ ವೇಳೆ ಹಲವು ವಿಷಯ ಬಾಯ್ಬಟ್ಟಿದ್ದಾರೆ. ಅಮೃತಾ 60 ಸಾವಿರ ರೂ. ವೇತನ ಬರುತ್ತಿದ್ದ ಕೆಲಸದಲ್ಲಿದ್ದಳು. ಆದರೆ 2018ರಲ್ಲಿ ಉದ್ಯೋಗ ತೊರೆದಿದ್ದಳು. ಬ್ಯಾಂಕ್ ಮತ್ತು ಕ್ರೆಡಿಟ್ಕಾರ್ಡ್ನಿಂದ 15 ಲಕ್ಷ ರೂ. ವರೆಗೂ ಸಾಲ ಮಾಡಿದ್ದಳು. ಆದರೆ ಮರುಪಾವತಿ ಸಾಧ್ಯವಾಗಿರಲಿಲ್ಲ. ಸಾಲಮರುಪಾವತಿಗೆ ಬ್ಯಾಂಕ್ಗಳಿಂದ ಒತ್ತಡ ಆರಂಭವಾಗಿತ್ತು. ಆಕೆಯ ಮೊಬೈಲ್ಗೆ ಪದೇಪದೆ ಬ್ಯಾಂಕ್ಗಳಿಂದ ಎಸ್ಎಂಎಸ್ ಮತ್ತು ಕರೆಗಳು ಬರುತ್ತಿದ್ದವು. ಬ್ಯಾಂಕ್ ಅಧಿಕಾರಿಗಳು ಮನೆಯ ಬಳಿ ಬಂದರೆ ತಾಯಿ ಬೈಯುತ್ತಾರೆ, ಮನೆಯ ಮರ್ಯಾದೆ ಹೋಗುತ್ತದೆ ಎಂದು ಅಮೃತಾ ಆತಂಕಗೊಂಡಿದ್ದಳು. ಆದ್ದರಿಂದ, ತಾಯಿ ಮತ್ತು ಸಹೋದರ ಹರೀಶ್ನನ್ನು ಕೊಲೆ ಮಾಡಿ ತಾನೂ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದಳು.
ಪ್ರಿಯಕರನನ್ನು ಖುಷಿಪಡಿಸುವ ನಿರ್ಧಾರ: ಅದಕ್ಕೂ ಮೊದಲು ಪ್ರಿಯಕರ ಶ್ರೀಧರ್ ರಾವ್ನನ್ನು ಖುಷಿ ಪಡಿಸಬೇಕೆಂದು ನಿರ್ಧರಿಸಿದ್ದಳು. ಹಾಗಾಗಿ ಜ.31ರಂದು ಅಂಡಮಾನ್ ನಿಕೋಬಾರ್ಗೆ ವಿಮಾನ ಟಿಕೆಟ್ ಬುಕ್ ಮಾಡಿಸಿದ್ದಳು. ಫೆ.2ರ ಬೆಳಗಿನ ಜಾವ ತಾಯಿಯನ್ನು ಕೊಲೆ ಮಾಡಿ ಸಹೋದರ ಹರೀಶ್ನ ಹತ್ಯೆಗೆ ಮುಂದಾಗಿದ್ದಳು. ಹರೀಶ್ ಮಗ್ಗಲಿಗೆ ತಿರುಗಿದ್ದ ಕಾರಣ ಮೊದಲ ಇರಿತ ಪಕ್ಕಕ್ಕೆ ತಗಲಿತು. ಎಚ್ಚೆತ್ತ ಹರೀಶ್ ಮುಖ ಕೆಳಗೆ ಮಾಡಿದಾಗ ಬೆನ್ನಿಗೆ ಎರಡು ಬಾರಿ ಚುಚ್ಚಿದ್ದಳು. ಅಷ್ಟೊತ್ತಿಗೆ ಶ್ರೀಧರ್ ಮನೆ ಬಳಿಗೆ ಬಂದಿದ್ದ. ಆತನೊಂದಿಗೆ ಬೈಕ್ನಲ್ಲಿ ವಿಮಾನ ನಿಲ್ದಾಣ ತಲುಪಿ, ಅಂಡಮಾನ್ ವಿಮಾನ ಹತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ಕೊಲೆ ಮತ್ತು ಕೊಲೆ ಯತ್ನ ಪ್ರಕರಣದಲ್ಲಿ ಪ್ರಿಯಕರ ಶ್ರೀಧರ್ ರಾವ್ ಪಾತ್ರ ಇಲ್ಲ. ಆತನೊಂದಿಗೆ ಹಾಯಾಗಿ ಸ್ವಲ್ಪ ಸಮಯ ಕಳೆದು, ಬೆಂಗಳೂರಿಗೆ ಮರಳಿ ಆತ್ಮಹತ್ಯೆ ಮಾಡಿಕೊಳ್ಳಲು ಅಮೃತಾ ನಿರ್ಧರಿಸಿದ್ದಳು. ಅದಕ್ಕಾಗಿ ಅಂಡಮಾನ್ ತಲುಪಿದ ಬಳಿಕ ತಾಯಿಯನ್ನು ಕೊಂದ ವಿಷಯವನ್ನು ಆತನಿಗೆ ತಿಳಿಸಿದ್ದಳು. ಆತ ಸಹ ವಿಚಾರಣೆ ವೇಳೆ ಅದನ್ನೇ ಹೇಳುತ್ತಿದ್ದಾನೆ. ಆದರೆ, ಪ್ರೇಯಸಿಯನ್ನು ಕರೆದೊಯ್ಯಲು ಜ.2ರ ಬೆಳಗ್ಗೆ ಬೈಕ್ನಲ್ಲಿ ಬಂದಾಗ ಸಿಸಿ ಕ್ಯಾಮರಾದಲ್ಲಿ ತನ್ನ ಮುಖ ಸೆರೆಯಾಗದಂತೆ ಎಚ್ಚರಿಕೆ ವಹಿಸಿದ್ದಾನೆ. ರಾಮಮೂರ್ತಿನಗರ ರೈಲ್ವೆ ಸೇತುವೆ ಬಳಿ ಅಮೃತಾ, ಮೊಬೈಲ್ ಮತ್ತು ಸಿಮ್ ಎಸೆದ ವಿಷಯ ಆತನಿಗೆ ಗೊತ್ತಿತ್ತು. ತನ್ನ ಮೊಬೈಲ್ ಸ್ವಿಚ್ಆಫ್ ಮಾಡಿಕೊಂಡು ಅಂಡಮಾನ್ಗೆ ತೆರಳಿದ್ದ. ಈ ಎಲ್ಲ ಅನುಮಾನದ ಮೇಲೆ ಕೊಲೆ ಸಂಚಿನಲ್ಲಿ ಆತನ ಪಾತ್ರ ಇರುವ ಬಗ್ಗೆ ತನಿಖೆ ಮುಂದುವರಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.
ಮಹಜರ್ಗಾಗಿ ಅಮೃತಾ ಮತ್ತು ಶ್ರೀಧರ್ನನ್ನು ಪೊಲೀಸರು ಅಕ್ಷಯನಗರಕ್ಕೆ ಕರೆತಂದಿದ್ದರು. ನೆರೆಮನೆ ಯವರು ಅಮೃತಾಗೆ ಛೀಮಾರಿ ಹಾಕಿದರು. ‘ನಮಗೆ ಹೇಳಿದ್ದರೆ ನಿಮ್ಮ ತಾಯಿ, ತಮ್ಮನನ್ನು ಒಪ್ಪಿಸಿ ಮದುವೆ ಮಾಡಿಸುತ್ತಿದ್ದೆವು. ಹುಡುಗನ ಜತೆ ಓಡಿ ಹೋಗಲು ತಾಯಿಯನ್ನೇ ಕೊಲ್ಲಬೇಕಾಗಿತ್ತಾ’ ಎಂದು ಆಕೆಯನ್ನು ನಿಂದಿಸಿದರು. ಮುಖದಲ್ಲಿ ಪಶ್ಚಾತ್ತಾಪವಿಲ್ಲದೆ ಕೇಳಿದ ಪ್ರಶ್ನೆಗಳಿಗೆ ಅಮೃತಾ ಉತ್ತರ ನೀಡಿದಳು ಎನ್ನಲಾಗಿದೆ.
ಚಾಪೆ ಮೇಲೆ ತಾಯಿ ಮಲಗಿದ್ದರು. ಅವರ ಬಾಯಿಯನ್ನು ಒಂದು ಕೈಯಿಂದ ಮುಚ್ಚಿ ಮತ್ತೊಂದು ಕೈಯಿಂದ ಚೂರಿಯಿಂದ ಕತ್ತಿಗೆ ಚುಚ್ಚಿದೆ. ಮನಬಂದಂತೆ ಹೊಟ್ಟೆಗೆ ಐದಾರು ಬಾರಿ ಚುಚ್ಚಿದೆ ಎಂದು ಅಮೃತಾ ಹೇಳಿದ್ದಾಗಿ ಪೊಲೀಸರು ತಿಳಿಸಿದ್ದಾರೆ. ಮೊಬೈಲ್ ಮತ್ತು ಸಿಮ್ ಎಸೆದಿದ್ದ ರಾಮಮೂರ್ತಿನಗರ ರೈಲ್ವೆ ಮೇಲ್ಸುತುವೆ ಬಳಿಗೆೆ ಕರೆತಂದು ಸಿಮ್ ಮತ್ತು ಮೊಬೈಲ್ಗಾಗಿ ಹುಡುಕಾಡಲಾಯಿತು. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರ್ಪಾಂಗ್ ಸ್ಥಳಕ್ಕೆ ಕರೆದೊಯ್ದು ಶ್ರೀಧರ್ ನಿಲ್ಲಿಸಿದ್ದ ಬೈಕ್ ವಶಕ್ಕೆ ಪಡೆಯಲಾಯಿತು. ಎಲ್ಲ ದೃಶ್ಯಗಳನ್ನು ವಿಡಿಯೋ ಮಾಡಿಕೊಂಡಿದ್ದಾಗಿ ಪೊಲೀಸರು ಹೇಳಿದ್ದಾರೆ.
ಕೆ.ಆರ್. ಪುರ ಪೊಲೀಸರು ಅಂಡಮಾನ್ನಲ್ಲಿ ಬಂಧಿಸಲು ಹೋದಾಗ ಅಮೃತಾ ಗೋಡೆಗೆ ತಲೆಚಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಳು. ಬೆಂಗಳೂರಿಗೆ ಕರೆತಂದಾಗಲೂ, ಆತ್ಮಹತ್ಯೆಯ ಇಂಗಿತದಲ್ಲಿರುವುದು ಸ್ಪಷ್ಟವಾಗಿತ್ತು. ಹಾಗಾಗಿ ಮನೋವೈದ್ಯರನ್ನು ಗುರುವಾರ ರಾತ್ರಿ ಠಾಣೆಗೆ ಕರೆಸಿಕೊಂಡು ಅಮೃತಾಗೆ ಕೌನ್ಸೆಲಿಂಗ್ ಮಾಡಿಸಿದರು ಎನ್ನಲಾಗಿದೆ.