ತಿರುಮಲ ಕರ್ನಾಟಕ ಛತ್ರದಲ್ಲಿ 132 ಕೊಠಡಿಗಳು ಭಕ್ತರ ಬಳಕೆಗೆ ಲಭ್ಯ; ರಾಮಲಿಂಗಾ ರೆಡ್ಡಿ ಚಾಲನೆ

tiru
Published on

ಬೆಂಗಳೂರು: ತಿರುಪತಿ ಶ್ರೀ ವೆಂಕಟೇಶನ ದರ್ಶನಕ್ಕೆ ತೆರಳುವ ಭಕ್ತರ ಅನುಕೂಲಕ್ಕೆ ರಾಜ್ಯ ಸರ್ಕಾರ ತಿರುಮಲದಲ್ಲಿರುವ ನೂತನವಾಗಿ ನಿರ್ಮಿಸಿರುವ ವಸತಿ ಸಂಕೀರ್ಣಗಳ ಪೈಕಿ 132 ಹವಾನಿಯಂತ್ರಣ ರಹಿತ ಕೊಠಡಿಗಳನ್ನು ಹೊಂದಿರುವ ಐಹೊಳೆ ಬ್ಲಾಕ್ ಕಟ್ಟಡವನ್ನು ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಉದ್ಘಾಟಿಸಿದ್ದಾರೆ.

ರಾಜ್ಯದ ಯಾತ್ರಾರ್ಥಿಗಳಿಗೆ ಅನುಕೂಲಕ್ಕಾಗಿ 200 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಮೂರು ವಸತಿ ಸಂಕೀರ್ಣಗಳು, ಒಂದು ಸುಸಜ್ಜಿತ ಕಲ್ಯಾಣ ಮಂಟಪ ಹಾಗೂ ಹಾಲಿ ಇದ್ದ ಪ್ರವಾಸಿ ಸೌಧವನ್ನು ಉನ್ನತೀಕರಿಸುವ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ.

ಈಗಾಗಲೇ 110 ಎಸಿ ಕೊಠಡಿಗಳ ಬ್ಲಾಕ್ -2 ( ಹಂಪಿ ಬ್ಲಾಕ್) ಅನ್ನು ಸಾರ್ವಜನಿಕರ ಅನುಕೂಲಕ್ಕಾಗಿ ಲೋಕಾರ್ಪಣೆಗೊಳಿಸಲಾಗಿದೆ. ಇದರೊಟ್ಟಿಗೆ ಈಗ 132 ಹವಾನಿಯಂತ್ರಣ ರಹಿತ ಕೊಠಡಿಗಳನ್ನು ಹೊಂದಿರುವ ಐಹೊಳೆ ಬ್ಲಾಕ್ ಕಟ್ಟಡವನ್ನು ಉದ್ಘಾಟಿಸಲಾಗಿದೆ. ಈ ಕಟ್ಟಡದಲ್ಲಿನ ಪ್ರತಿ ಕೊಠಡಿಗಳಿಗೆ 24 ಗಂಟೆಗಳ ಅವಧಿಗೆ ಕೊಠಡಿ ನಿರ್ವಹಣಾ ಶುಲ್ಕ 1350 ರೂ. (ಜಿಎಸ್ಟಿ ಹೊರತುಪಡಿಸಿ) ನಿಗದಿ ಪಡಿಸಿದ್ದು, ಕಡಿಮೆ ಬೆಲೆಯಲ್ಲಿ ಸುಸಜ್ಜಿತ ಕೊಠಡಿಗಳನ್ನು ಯಾತ್ರಾರ್ಥಿಗಳಿಗೆ ಒದಗಿಸುವ ಮೂಲಕ ಅನುಕೂಲ ಮಾಡಿಕೊಡಲಾಗಿದೆ ಎಂದು ಮುಜರಾಯಿ ಇಲಾಖೆ ಹೇಳಿದೆ.

ನೂತನವಾಗಿ ತಿರುಮಲದಲ್ಲಿ ನಿರ್ಮಿಸಲಾಗಿರುವ ವಸತಿ ಸಂಕೀರ್ಣ ಮತ್ತು ಶ್ರೀಕೃಷ್ಣದೇವರಾಯ ಬ್ಲಾಕ್‌ನಲ್ಲಿನ 36 ಹವಾ ನಿಯಂತ್ರಿತ ಸೂಟ್‌ಗಳನ್ನು ಹಾಗೂ 500 ಆಸನಗಳ ಸಾಮರ್ಥ್ಯವುಳ್ಳ ತಿರುಮಲದಲ್ಲಿಯೇ ಬೃಹತ್ ಹಾಗೂ ನವೀನ ಮಾದರಿಯ ಸುಸಜ್ಜಿತ ಕಲ್ಯಾಣ ಮಂಟಪವಾದ ಶ್ರೀ ಕೃಷ್ಣ ಒಡೆಯರ್ ಬ್ಲಾಕ್ ಕಟ್ಟಡಗಳ ಕಾಮಗಾರಿ ಮುಕ್ತಾಯಗೊಂಡಿದ್ದು ಅಂತಿಮ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸಲಾಗುತ್ತಿದೆ.

ತಿರುಪತಿ ಹಾಗೂ ತಿರೂಚಾನೂರಿನಲ್ಲಿ ಕರ್ನಾಟಕ ರಾಜ್ಯ ಛತ್ರದಲ್ಲಿ ಹಾಲಿ ಇರುವ 24 ಕೊಠಡಿಗಳನ್ನು ಮತ್ತು ಕಲ್ಯಾಣ ಮಂಟಪಗಳನ್ನು ನವೀಕರಣಗೊಳಿಸಿ, ಯಾತ್ರಾರ್ಥಿಗಳಿಗೆ ಹಂಚಿಕೆ ಮಾಡುವ ಕಾರ್ಯವನ್ನು ಕೈಗೊಳ್ಳಲಾಗುತ್ತಿದೆ.

ಕರ್ನಾಟಕ ರಾಜ್ಯ ಛತ್ರದಲ್ಲಿ 50 ಸುಸಜ್ಜಿತ ಕೊಠಡಿಗಳು ಹಾಗೂ ವಾಣಿಜ್ಯ ಮಳಿಗೆಗಳನ್ನು ಒಳಗೊಂಡ ನೂತನ ಕಟ್ಟಡವನ್ನು ನಿರ್ಮಿಸಲು ಯೋಜನೆ ಸಿದ್ಧಗೊಳಿಸಲಾಗುತ್ತಿದೆ. ಕಲ್ಯಾಣ ಮಂಟಪ ಬ್ಲಾಕ್ ಹಾಗೂ ವಿವಿಐಪಿ ಕೊಠಡಿಗಳ ಬ್ಲಾಕ್ 2025ರ ಏಪ್ರಿಲ್ ಅಥವಾ ಮೇ ನಲ್ಲಿ ಸಂಪೂರ್ಣವಾಗಿ ಪೂರ್ಣಗೊಳ್ಳಲಿದ್ದು, ಸದರಿ ಕಟ್ಟಡಗಳ ಉದ್ಘಾಟನಾ ಸಮಾರಂಭವನ್ನು ರಾಜ್ಯದ ಹಾಗೂ ಆಂಧ್ರ ಪ್ರದೇಶದ ಮುಖ್ಯಮಂತ್ರಿಯವರ ಸಮ್ಮುಖದಲ್ಲಿ ನೆರವೇರಿಸಲು ನಿರ್ಧರಿಸಲಾಗಿದೆ.

ಧಾರ್ಮಿಕ ದತ್ತಿ ಇಲಾಖೆಯ ಕರ್ನಾಟಕ ದೇವಾಲಯಗಳ ವಸತಿ ಕಾಯ್ದಿರಿಸುವಿಕೆಯ ವೆಬ್ಸೈಟ್ ಮೂಲಕ ಶೇ.60ರಷ್ಟು ಆನ್‌ಲೈನ್ ಮೂಲಕ ಹಾಗೂ ಶೇ.40 ಆನ್​ಲೈನ್​ ಮೂಲಕ ಕೊಠಡಿಗಳನ್ನು ಹಂಚಿಕೆ ಮಾಡಿ ಅನುಕೂಲ ಮಾಡಿಕೊಡಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net