13 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿ

13tnpnewsfilephoto01
Published on

ತಿ.ನರಸೀಪುರ: ಪಟ್ಟಣದ ಭಗವಾನ್ ಚಿತ್ರಮಂದಿರದ ಮುಂಭಾಗದಲ್ಲಿ ಪುರಸಭೆ ವತಿಯಿಂದ ಸುಮಾರು 13 ಕೋಟಿ ರೂ. ವೆಚ್ಚದಲ್ಲಿ ಕೈಗೆತ್ತಿಕೊಂಡಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಎಂ.ಅಶ್ವಿನ್‌ಕುಮಾರ್ ಶುಕ್ರವಾರ ಭೂಮಿಪೂಜೆ ನೆರವೇರಿಸಿದರು.


2022-23ನೇ ಸಾಲಿನ ಅಮೃತ್ ನಗರೋತ್ಥಾನ ಯೋಜನೆಯಡಿ 3.79 ಕೋಟಿ ರೂ., 2019-20ನೇ ಸಾಲಿನ ಮುಖ್ಯಮಂತ್ರಿಗಳ ವಿವೇಚನಾ ನಿಧಿಯಡಿ 3 ಕೋಟಿ ರೂ., 15ನೇ ಹಣಕಾಸು ಯೋಜನೆಯಡಿ 1.82 ಕೋಟಿ ರೂ., 2016-17ನೇ ಸಾಲಿನ ಎಸ್‌ಸಿಪಿ, ಟಿಎಸ್‌ಪಿ ಅನುದಾನದಡಿ 87.87 ಲಕ್ಷ ರೂ. ಹಾಗೂ 2022-23ನೇ ಸಾಲಿನ ಎಸ್‌ಎಫ್‌ಸಿ ಅನುದಾನ ಯೋಜನೆಯಡಿ 18.16 ಲಕ್ಷ ರೂ. ವೆಚ್ಚದಲ್ಲಿ ರಸ್ತೆ, ಚರಂಡಿ ಹಾಗೂ ವಿದ್ಯುತ್ ದೀಪ ಅಳವಡಿಸುವ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದರು.


ಉದ್ದೇಶಿತ ಕಾಮಗಾರಿ 2 ವರ್ಷಗಳ ಹಿಂದೆಯೇ ಆಗಬೇಕಿತ್ತಾದರೂ, ಆಗ ಕರೊನಾ ಇದ್ದ ಕಾರಣ ಕಾಮಗಾರಿ ವಿಳಂಬವಾಗಿತ್ತು. ನಗರೋತ್ಥಾನ ಯೋಜನೆಯಡಿ ಪ್ರತಿ ಪುರಸಭೆಗೆ ಸರ್ಕಾರ ತಲಾ 10 ಕೋಟಿ ರೂ. ಬಿಡುಗಡೆ ಮಾಡಿದ್ದು, ಅದರಲ್ಲಿ 4 ಕೋಟಿ ರೂ.ಗಳನ್ನು ರಸ್ತೆ ಅಭಿವೃದ್ಧಿಗೆ ಬಳಸಲು ನಿಗದಿಪಡಿಸಿತ್ತು. ನೀಡಿರುವ ಅನುದಾನದಲ್ಲಿ ಭಾಗಶಃ ಪಟ್ಟಣದ ಎಲ್ಲ ಹದಗೆಟ್ಟ ರಸ್ತೆಗಳನ್ನು ಅಭಿವೃದ್ಧಿಪಡಿಸಬೇಕಿದೆ. ವರುಣ ಕ್ಷೇತ್ರದ ಶಾಸಕ ಯತೀಂದ್ರ ಹಾಗೂ ಪುರಸಭೆಯ ಎಲ್ಲ ಸದಸ್ಯರು ಪಕ್ಷಾತೀತವಾಗಿ ತಿ.ನರಸೀಪುರ ಭಾಗದ ರಸ್ತೆಗಗಳ ಅಭಿವೃದ್ಧಿಗೆ ತಾರತಮ್ಯ ಮಾಡದೇ ಒಪ್ಪಿಗೆ ಸೂಚಿಸಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದರು.


ಪಕ್ಷಾತೀತವಾಗಿ ಒಪ್ಪಿಗೆ:
ಪುರಸಭಾ ಅಧ್ಯಕ್ಷ ಟಿ.ಎಂ.ನಂಜುಂಡಸ್ವಾಮಿ ಮಾತನಾಡಿ, ಪಟ್ಟಣದ ಪ್ರಮುಖ ರಸ್ತೆಗಳು ಅಭಿವೃದ್ಧಿ ಕಾಣಬೇಕೆನ್ನುವ ದೃಷ್ಟಿಯಿಂದ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಪಕ್ಷಾತೀತವಾಗಿ ಸದಸ್ಯರೆಲ್ಲರೂ ಒಪ್ಪಿಗೆ ಸೂಚಿಸಿದ್ದ ಹಿನ್ನೆಲೆಯಲ್ಲಿ 4ನೇ ಹಂತದ ಭೂಮಿಪೂಜೆಗೆ ಚಾಲನೆ ನೀಡಲಾಗಿದೆ. 3.79 ಲಕ್ಷ ರೂ. ವೆಚ್ಚದಲ್ಲಿ ಪಟ್ಟಣದ ಭಗವಾನ್ ಚಿತ್ರಮಂದಿರದಿಂದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ, ಭಗವಾನ್ ಚಿತ್ರಮಂದಿರದಿಂದ ಖಾಸಗಿ ಬಸ್ ನಿಲ್ದಾಣ ಹಾಗೂ ಅರಣ್ಯ ಇಲಾಖೆವರೆಗೆ ಹದಗೆಟ್ಟ ರಸ್ತೆಯನ್ನು ಅಭಿವೃದ್ಧಿ ಪಡಿಸಲಾಗುವುದು. ಅಲ್ಲದೆ ತಾಲೂಕು ಕಚೇರಿಯಿಂದ ರಾಷ್ಟ್ರೀಯ ಹೆದ್ದಾರಿವರೆಗಿನ ಅಪೂರ್ಣಗೊಂಡ ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು. ಪಟ್ಟಣದ ವಿವಿಧ ವಾರ್ಡ್‌ಗಳಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಶಾಸಕರ ಮಾರ್ಗದರ್ಶನದಲ್ಲಿ ಮಾಡಲಾಗುವುದು ಎಂದು ತಿಳಿಸಿದರು.


ಉಪಾಧ್ಯಕ್ಷೆ ನಾಗರತ್ನ ಮಾದೇಶ್, ಸೋಮು, ಸದಸ್ಯರಾದ ಬಾದಾಮಿ ಮಂಜು, ತುಂಬಲ ಪ್ರಕಾಶ್, ಎಸ್.ಕೆ.ಕಿರಣ್, ಆರ್.ನಾಗರಾಜ್, ಎಲ್.ಮಂಜುನಾಥ್, ಸಿಸ್ಟಮ್ ಸಿದ್ದು, ವಿ.ಮೋಹನ್, ತೇಜಸ್ವಿನಿ, ರಾಜೇಶ್ವರಿ, ನಾಮನಿರ್ದೇಶಿತ ಸದಸ್ಯರಾದ ಲೋಕೇಶ್,ನಂಜುಂಡಸ್ವಾಮಿ, ಗಣೇಶ್, ಚಿಕ್ಕ ಮಹದೇವ, ಸರ್ವಮಂಗಳಾ, ಮುಖ್ಯಾಧಿಕಾರಿ ಎಚ್.ಆರ್.ಬಸವರಾಜು, ಆರೋಗ್ಯಾಧಿಕಾರಿ ಲೋಕೇಶ್ವರಿ, ಕಾರ್ಯನಿರ್ವಾಹಕ ಇಂಜಿನಿಯರ್ ನಿಂಗಯ್ಯ, ಜೆಇ ಸಿದ್ದಯ್ಯ, ಸಮನ್ವಯಾಧಿಕಾರಿ ಮಹದೇವ, ಜೆಡಿಎಸ್ ಕ್ಷೇತ್ರಾಧ್ಯಕ್ಷ ಚಿನ್ನಸ್ವಾಮಿ, ಮುಖಂಡರಾದ ಶಿವಮೂರ್ತಿ, ಮಾದಯ್ಯ, ಪ್ರಸಾದ್, ಭರತ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುದ್ದೇಗೌಡ, ಜಿ.ಪಂ. ಮಾಜಿ ಸದಸ್ಯ ಕೆ.ಮಹದೇವ್, ತಾಲೂಕು ಕುರುಬ ಸಂಘದ ಅಧ್ಯಕ್ಷ ಮಹೇಶ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net