ವಿಮಾನದಲ್ಲಿ ಬಾಂಬ್​​ ಇರುವುದಾಗಿ ಬಾಲಕನಿಂದ ಇಮೇಲ್​​; ಮಾಹಿತಿ ನೀಡಿದ ಆತನನ್ನು ಬಂಧಿಸಿದ್ದೇಕೆ ಗೊತ್ತಾ?

Untitled-design-2024-06-23T145744.914
Published on

ನವದೆಹಲಿ: ಮನೆಯಲ್ಲಿ ಮಕ್ಕಳಿಗೆ ಓದಲು ಸಹಾಯವಾಗಲೆಂದು ಮೊಬೈಲ್​​ ತೆಗೆದುಕೊಟ್ಟರೆ ಅದನ್ನು ಸದುಪಯೋಗ ಪಡಿಸಿಕೊಳ್ಳುವವರ ಸಂಖ್ಯೆ ತೀರಾ ವಿರಳ, ಅದೇ ದುರುಪಯೋಗ ಪಡಿಸಿಕೊಳ್ಳುವವರೇ ಹೆಚ್ಚು. ಇದೇ ರೀತಿಯ ಪ್ರಕರಣವೊಂದು ಬೆಳಕಿಗೆ ಬಂದಿದೆ. ದೆಹಲಿಯಿಂದ ದುಬೈಗೆ ತೆರಳುತ್ತಿದ್ದ ವಿಮಾನದಲ್ಲಿ ಬಾಂಬ್ ಇರಿಸಲಾಗಿದೆ ಎಂದು ಸುಳ್ಳು ಮಾಹಿತಿ ನೀಡಿ ಇಮೇಲ್​​ ಮಾಡಿದ್ದ 13 ವರ್ಷದ ಬಾಲಕನನ್ನು ಐಜಿಯ ವಿಮಾನ ನಿಲ್ದಾಣ ಪೊಲೀಸರು ಬಂಧಿಸಿದ್ದಾರೆ.

ಆರೋಪಿ ಬಾಲಕ 9ನೇ ತರಗತಿ ಓದುತ್ತಿರುವ ವಿದ್ಯಾರ್ಥಿಯಾಗಿದ್ದು, ಕೆಲವು ದಿನಗಳ ಹಿಂದೆ ಬಾಲಕನೊಬ್ಬ ವಿಮಾನದಲ್ಲಿ ಬಾಂಬ್ ಇದೆ ಎಂದು ಬೆದರಿಕೆ ಹಾಕಿದ್ದ ನಕಲಿ ಬೆದರಿಕೆ ಕರೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿನ ಸುದ್ದಿಯಿಂದ ಪ್ರೇರಿತನಾಗಿ ನಕಲಿ ಬಾಂಬ್ ಎಚ್ಚರಿಕೆ ನೀಡುವ ಆಲೋಚನೆ ಅವನ ಮನಸ್ಸಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದರು.

ಸುದ್ದಿ ನೋಡಿದಾಗ ತಾನೂ ಹಾಗೆಯೇ ಮಾಡಬಹುದೆಂದುಕೊಂಡು ಈ ರೀತಿ ಇಮೇಲ್​ ಮಾಡಿದ್ದಾನೆ. ಆತನ ಪಾಲಕರು ಆತನಿಗೆ ವಿದ್ಯಾಭ್ಯಾಸಕ್ಕಾಗಿ ಮೊಬೈಲ್ ಫೋನ್ ನೀಡಿದ್ದರು. ಅದರ ಮೂಲಕ ಆತ ತನ್ನ ಇ-ಮೇಲ್ ಐಡಿಯಿಂದ ನಕಲಿ ಬೆದರಿಕೆ ಇಮೇಲ್ ಕಳುಹಿಸಿದ್ದಾನೆ. ಬಳಿಕ ಇಮೇಲ್ ಐಡಿಯನ್ನು ತಕ್ಷಣವೇ ಡಿಲೀಟ್​ ಮಾಡಿದ್ದಾನೆ. ಕೇವಲ ತಮಾಷೆಗಾಗಿ ಈ ಕೃತ್ಯ ಎಸಗಿರುವುದಾಗಿ ಯುವಕ ಹೇಳಿದ್ದಾನೆ. ಇಮೇಲ್​ ಮಾಡಿದ ನಂತರ ಭಯದಿಂದ ಆತ ತನ್ನ ಪಾಲಕರೊಂದಿಗೆ ಯಾವುದೇ ಮಾಹಿತಿ ಹಂಚಿಕೊಂಡಿಲ್ಲ ಎಂದು ಪೊಲೀಸರು ಹೇಳಿದರು.

ದುಬೈಗೆ ತೆರಳುತ್ತಿದ್ದ ವಿಮಾನದಲ್ಲಿ ಬಾಂಬ್​ ಇರಿಸಲಾಗಿದೆ ಎಂಬ ಸುದ್ದಿ ತಿಳಿದ ಬಳಿಕ ದೆಹಲಿ ವಿಮಾನ ನಿಲ್ದಾಣದಲ್ಲಿ ಆತಂಕ ಸೃಷ್ಟಿಯಾಗಿತ್ತು. ಮಾಹಿತಿ ಬಂದ ನಂತರ ವಿಮಾನ ನಿಲ್ದಾಣದಲ್ಲಿ ಎಚ್ಚರಿಕೆ ನೀಡಲಾಗಿದೆ. ಭದ್ರತಾ ಸಂಸ್ಥೆ ಮತ್ತು ಬಾಂಬ್ ನಿಷ್ಕ್ರಿಯ ದಳ ವಿಮಾನವನ್ನು ಶೋಧಿಸಿದೆ. ಶೋಧ ನಡೆಸಿದಾಗ ಯಾವುದೇ ಅನುಮಾನಾಸ್ಪದ ವಸ್ತು ಪತ್ತೆಯಾಗಿಲ್ಲ. ಬಳಿಕ ಪೊಲೀಸರ ತಂಡ ರಚಿಸಿ ಸುಳ್ಳು ಬಾಂಬ್ ಮಾಹಿತಿ ನೀಡಿದವರನ್ನು ಹಿಡಿಯುವ ಕಾರ್ಯ ಆರಂಭಿಸಲಾಗಿತ್ತು. ಇ-ಮೇಲ್ ಕಳುಹಿಸಿದ ತಕ್ಷಣ ಇ-ಮೇಲ್ ಐಡಿಯನ್ನು ಡಿಲೀಟ್ ಮಾಡಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ.

ಇಮೇಲ್‌ನ ಮೂಲವನ್ನು ಉತ್ತರಾಖಂಡ್‌ನ ಪಿಥೋರಗಢ್‌ನಲ್ಲಿ ಪತ್ತೆಹಚ್ಚಲಾಗಿದೆ. ನಂತರ ಪೊಲೀಸ್​​ ತಂಡವನ್ನು ಕಳುಹಿಸಿ ನಕಲಿ ಇಮೇಲ್ ಕಳುಹಿಸುತ್ತಿದ್ದ ಆರೋಪದ ಮೇಲೆ ಬಾಲಕನನ್ನು ಹಿಡಿಯಲಾಯಿತು. ಬಳಿಕ ಮಕ್ಕಳ ನ್ಯಾಯಾಲಯಕ್ಕೆ ಆತನನ್ನು ಹಾಜರುಪಡಿಸಲಾಯಿತು. ಬಳಿಕ ಅವನ ಪಾಲಕರಿಗೆ ಬಾಲಕನನ್ನು ಹಸ್ತಾಂತರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. (ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net