

ಬೆಂಗಳೂರು: ಈ ವರ್ಷ ಮೇ ತಿಂಗಳಲ್ಲಿ ನಡೆದ ವಿಶ್ವ ರೇಸಿಂಗ್ ಚಾಂಪಿಯನ್ಶಿಪ್ ಫಿನಾಲೆ ತಲುಪಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಬೆಂಗಳೂರು ಮೂಲದ 13 ವರ್ಷದ ಬಾಲಕ ಕೊಪ್ಪರಂ ಶ್ರೇಯಸ್ ಹರೀಶ್ ಸಾಹಸಯಾತ್ರೆ ಕೊನೆಗೊಂಡಿದ್ದು, ಬಾರದ ಲೋಕಕ್ಕೆ ತೆರಳಿದ್ದಾರೆ.
ಚೆನ್ನೈನ ಮದ್ರಾಸ್ ಅಂತರರಾಷ್ಟ್ರೀಯ ಸರ್ಕಿಟ್ (ಎಂಐಸಿ) ನಲ್ಲಿ ಆಯೋಜಿಸಲಾಗಿದ್ದ ಎಂಆರ್‌ಎಫ್ ಇಂಡಿಯನ್ ನ್ಯಾಷನಲ್ ಮೋಟರ್‌ಸೈಕಲ್ ರೇಸಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಸ್ಪರ್ಧಿಸಿದ್ದ ಬೈಕ್ ರೇಸರ್ ಶ್ರೇಯಸ್ ಹರೀಶ್ ಅಪಘಾತದಲ್ಲಿ ದುರಂತ ಸಾವಿಗೀಡಾಗಿದ್ದಾರೆ.
ಶನಿವಾರ ನಡೆದ ಸ್ಪರ್ಧೆಯಲ್ಲಿ ಶ್ರೇಯಸ್ ಮುಂಚೂಣಿಯಲ್ಲಿದ್ದರು. ತಿರುವಿನಲ್ಲಿ ಆಯತಪ್ಪಿ ಬೈಕ್ ಬಿದ್ದ ಪರಿಣಾಮ ಅವರು ಧರಿಸಿದ್ದ ಹೆಲ್ಮೆಟ್ ಲಾಕ್ ಕಳಚಿದೆ. ಹಿಂಬದಿ ಬರುತ್ತಿದ್ದ ಪ್ರತಿಸ್ಪರ್ಧಿಯ ಬೈಕ್ ಶ್ರೇಯಸ್ ತಲೆ ಮೇಲೆ ಹರಿದು ಮುಂದಕ್ಕೆ ಸಾಗಿದೆ. ಕೂಡಲೇ ಇದನ್ನೂ ಗಮನಿಸಿದ ಆಯೋಜಕರು ರೇಸ್ ಸ್ಥಗಿತಗೊಳಿಸಿ ಗಂಭೀರವಾಗಿ ಗಾಯಗೊಂಡಿದ್ದ ಶ್ರೇಯಸ್ನನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಆದರೆ, ಆಸ್ಪತ್ರೆ ತಲಪುವಷ್ಟರಲ್ಲೇ ಶ್ರೇಯಸ್ ಕೊನೆಯುಸಿರೆಳೆದಿದ್ದ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ MMIC ಅಧ್ಯಕ್ಷ ಅಜಿತ್ ಥಾಮಸ್ ಶ್ರೇಯಸ್ ಉದಯೋನ್ಮುಖ ಪ್ರತಿಭಾವಂತ ರೈಡರ್ ಆಗಿದ್ದ. ಆತನ ಸಾವು ತುಮಬಾ ನೋವುಂಟು ಮಾಡಿದೆ. ದುರ್ಘಟನೆ ನಡೆದ ಸ್ಥಳದಲ್ಲಿಯೇ ಚಿಕಿತ್ಸೆ ನೀಡಿ ಆಸ್ಪತ್ರೆಗೆ ರವಾನಿಸಲಾಗಿತ್ತು. ಆದರೆ, ಮಾರ್ಗಮಧ್ಯೆ ಆತ ಕೊನೆಯುಸಿರೆಳೆದಿದ್ದಾನೆ.
ದುರಂತ ಘಟನೆಯ ನಂತರ, ಮದ್ರಾಸ್ ಮೋಟಾರ್ ಸ್ಪೋರ್ಟ್ಸ್ ಕ್ಲಬ್ ಶನಿವಾರ ಮತ್ತು ಭಾನುವಾರದಂದು ನಿಗದಿಯಾಗಿದ್ದ ಉಳಿದ ರೇಸ್‌ಗಳನ್ನು ರದ್ದುಗೊಳಿಸಿದೆ ಎಂದು MMIC ಅಧ್ಯಕ್ಷ ಅಜಿತ್ ಥಾಮಸ್ ತಿಳಿಸಿದ್ದಾರೆ.