ನೀಟ್​ ಪ್ರಶ್ನೆಪತ್ರಿಕೆ ಸೋರಿಕೆ: 30 ವಿದ್ಯಾರ್ಥಿಗಳಿಗೆ ಪೇಪರ್ ಕೊಟ್ಟಿದ್ದ ಯುವಕರು ಅರೆಸ್ಟ್​! ಬಾಯ್ಬಿಟ್ಟ ಸತ್ಯವಿದು

Untitled-design-2024-06-23T200642.160
Published on

ಪಾಟ್ನಾ: ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್‌ಟಿಎ) ನಡೆಸಿದ ಯುಜಿಸಿ-ನೆಟ್ ಪರೀಕ್ಷೆಯಲ್ಲಿ ಅಕ್ರಮಗಳು ನಡೆದಿವೆ ಎಂಬ ವ್ಯಾಪಕ ಆರೋಪಗಳು ಇದೀಗ ದೇಶದಲ್ಲಿ ದೊಡ್ಡ ಸಂಚಲನ ಮೂಡಿಸಿದೆ. ಒಂದೆಡೆ ಇದರಿಂದ ತಮಗೆ ಅನ್ಯಾಯವಾಗಿದೆ, ಪ್ರಕರಣವನ್ನು ಸಿಬಿಐಗೆ ವಹಿಸಿ, ತನಿಖೆ ಪಾರದರ್ಶಕವಾಗಿರಲಿ ಎಂದು ಪರೀಕ್ಷೆ ಬರೆದಿರುವ ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ. 9 ಲಕ್ಷಕ್ಕೂ ಅಧಿಕ ಸಂಖ್ಯೆಯ ಅಭ್ಯರ್ಥಿಗಳು ಯುಜಿಸಿ-ನೆಟ್​ ಪರೀಕ್ಷೆ ಬರೆದಿದ್ದು, ತೀವ್ರ ವಿವಾದ ಮತ್ತು ಪರೀಕ್ಷೆಗೂ ಮುನ್ನ ಪತ್ರಿಕೆ ಸೋರಿಕೆಯಾದ ಬಗ್ಗೆ ನಡೆಯುತ್ತಿರುವ ತನಿಖೆಯ ಹೊರತಾಗಿಯೂ ಇದೀಗ ವೈದ್ಯಕೀಯ ಪ್ರವೇಶ ಪರೀಕ್ಷೆ (NEET) ಅನ್ನು ರದ್ದುಗೊಳಿಸದಿರಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ವೈದ್ಯಕೀಯ ಪ್ರವೇಶ ಪರೀಕ್ಷೆಯ ನೀಟ್‌ನ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಬಿಹಾರದಲ್ಲಿ ಬಂಧಿತರಾಗಿರುವ ಮೂವರು ಯುವಕರು ಬಳಿ ಎಲ್ಲಾ ಪ್ರಶ್ನೆ ಪತ್ರಿಕೆಗಳು ಮತ್ತು ಉತ್ತರ ಪತ್ರಿಕೆಗಳ ನಕಲುಗಳಿದ್ದವು ಎಂದು ಪೊಲೀಸರು ತಮ್ಮ ತನಿಖಾ ವರದಿಯನ್ನು ಕಳುಹಿಸಿದ ನಂತರ ಮಾನವ ಸಂಪನ್ಮೂಲ ಸಚಿವಾಲಯದ ಮೂಲಗಳು ಈ ಮಾಹಿತಿ ಹಂಚಿಕೊಂಡಿವೆ.

ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಹಾರದಲ್ಲಿ ಇದುವರೆಗೆ 13 ಮಂದಿಯನ್ನು ಬಂಧಿಸಲಾಗಿದೆ. ನಾಲ್ವರು ನೀಟ್‌ ಅಭ್ಯರ್ಥಿಗಳ ಪ್ರವೇಶ ಪತ್ರ, ಐಫೋನ್‌ 15 ಪ್ಲಸ್‌ ಮತ್ತು ಒನ್‌ ಪ್ಲಸ್‌ ಮೊಬೈಲ್‌ ಫೋನ್​ಗಳನ್ನು ಇದೀಗ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಸಿಕಂದರ್ ಯಡ್ವೆಂದು, ಅಖಿಲೇಶ್ ಕುಮಾರ್ ಮತ್ತು ಬಿಟ್ಟು ಕುಮಾರ್ ಎಂಬ ಮೂವರನ್ನು ವಿಚಾರಣೆ ಮಾಡಿದ ಪೊಲೀಸರು, ನಾಲ್ಕು ಅಭ್ಯರ್ಥಿಗಳಿಗೆ ಪ್ರಶ್ನೆ ಮತ್ತು ಉತ್ತರ ಪತ್ರಿಕೆಗಳನ್ನು ಹಂಚಿರುವ ಬಗ್ಗೆ ಮಾಹಿತಿ ಕಲೆಹಾಕಿದ್ದಾರೆ.

ಸಂಜೀವ್ ಸಿಂಗ್, ರಾಕಿ ಮತ್ತು ಅಮಿತ್ ಆನಂದ್ ಎಂಬ ಬಂಧಿತ ವ್ಯಕ್ತಿಗಳು ಈ ಸಂಚಿನಲ್ಲಿ ಭಾಗಿಯಾಗಿದ್ದಾರೆ. ಇವರೊಟ್ಟಿಗೆ 25-30 ಅಭ್ಯರ್ಥಿಗಳು ಸಹ ಪ್ರಶ್ನೆ ಪತ್ರಿಕೆ ಮತ್ತು ಉತ್ತರ ಪತ್ರಿಕೆಗಳನ್ನು ಸ್ವೀಕರಿಸಿದ್ದಾರೆ ಎಂದು ಅಭ್ಯರ್ಥಿಗಳ ವಿಚಾರಣೆಯಿಂದ ತಿಳಿದುಬಂದಿದೆ. ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಪ್ರತಿ ಅಭ್ಯರ್ಥಿಯಿಂದ 30ರಿಂದ 40 ಲಕ್ಷ ರೂ. ಪಡೆದಿರುವುದಾಗಿ ಬಂಧಿತರು ಹೇಳಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net