

ನವದೆಹಲಿ: ಸರ್ಕಾರದ ವತಿಯಿಂದ ಬುದ್ದಿ ಮಾಂದ್ಯ ಮಕ್ಕಳಿಗಾಗಿ ನಡೆಸಲಾಗುತ್ತಿರುವ ವಸತಿಗೃಹದಲ್ಲಿ 13 ಮಕ್ಕಳು ಮೃತಪಟ್ಟಿರುವ ಘಟನೆ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನಡೆದಿದೆ. ಸರ್ಕಾರದ ವತಿಯಿಂದ ಆಶಾ ಕಿರಣ ಬುದ್ಧಿಮಾಂದ್ಯ ಮಕ್ಕಳ ವಸತಿಗೃಹದಲ್ಲಿ ಕಳೆದ 20 ದಿನಗಳಲ್ಲಿ 13 ಮಕ್ಕಳು ಮೃತಪಟ್ಟಿದ್ದು, ದೆಹಲಿ ಸರ್ಕಾರ ಈ ಬಗ್ಗೆ ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶಿಸಿದೆ.
ಈ ಕುರಿತು ಮಾತನಾಡಿರುವ ಸಚಿವೆ ಅತಿಶಿ ಚೌಧರಿ, ಇದು ಅತ್ಯಂತ ಗಂಭೀರವಾದ ಸಮಸ್ಯೆಯಾಗಿದ್ದು, ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶಿಸಲಾಗಿದೆ. ಮುಂದಿನ 48 ಗಂಟೆಯೊಳಗೆ ವರದಿ ಸಲ್ಲಿಸುವಂತೆ ಸೂಚಿಸಲಾಗಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ಮಾತನಾಡಿ, ವಸತಿಗೃಹಕ್ಕೆ ಸತ್ಯಶೋಧನಾ ತಂಡವನ್ನು ಕಳುಹಿಸಿದ್ದೇವೆ. ತಂಡವು ಸಂಬಂಧಪಟ್ಟ ಅಧಿಕಾರಿಗಳನ್ನು ಭೇಟಿ ಮಾಡಿ ಈ ಸಾವಿಗೆ ಕಾರಣವನ್ನು ಕಂಡುಹಿಡಿಯಲು ಪ್ರಯತ್ನಿಸುತ್ತದೆ. ರಾತ್ರಿ ಶೆಲ್ಟರ್ ಆಡಿಟ್ ಕೂಡ ಮಾಡಲಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ. ವಿಪಕ್ಷ ಬಿಜೆಪಿ ಪ್ರತಿಕ್ರಿಯಿಸಿ, ಆರೋಗ್ಯ ಸಂಬಂಧಿ ಸಮಸ್ಯೆಗಳು ಹಾಗೂ ಅಪೌಷ್ಟಿಕತೆಯಿಂದ ಸಾವುಗಳು ಸಂಭವಿಸಿವೆ. ಆಮ್ ಆದ್ಮಿ ಪಕ್ಷದ ನಿರ್ಲಕ್ಷ್ಯವೇ ಇದಕ್ಕೆ ಮುಖ್ಯ ಕಾರಣ ಎಂದು ಆರೋಪಿಸಿದೆ.
ಬಿಜೆಪಿ ಆರೋಪಿದ ಸಚಿವ ಗೋಪಾಲ್ ರೈ, ಬಿಜೆಪಿ ಮಕ್ಕಳ ಸಾವಿನಲ್ಲೂ ರಾಜಕೀಯ ಮಾಡುತ್ತಿದೆ. ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬರುವ ಮಯೂರ ವಿಹಾರದ ಚರಂಡಿಯಲ್ಲಿ ಮುಳುಗಿ ಮೃತಪಟ್ಟಿರುವ ತಾಯಿ ಮತ್ತು ಮಗುವಿನ ಕುರಿತಾಗಿ ಮಾತನಾಡದ ಬಿಜೆಪಿ ನಾಯಕರು ಆಶ್ರಯತಾಣವು ದೆಹಲಿ ಸರ್ಕಾರದ ವ್ಯಾಪ್ತಿಗೆ ಒಳಪಟ್ಟಿದೆ ಎನ್ನುವ ಕಾರಣಕ್ಕೆ ಪ್ರತಿಭಟನೆ ನಡೆಸುತ್ತಿದ್ದಾರೆ.ಸಂಬಂಧಪಟ್ಟ ಸಚಿವರು ಪ್ರಕರಣದ ಮೇಲ್ವಿಚಾರಣೆ ನೋಡಿಕೊಳ್ಳುತ್ತಿದ್ದಾರೆ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಲಾಗುವುದು ಎಂದು ಹೇಳಿದ್ದಾರೆ.