

ಬೆಂಗಳೂರು: ಮಹತ್ವದ ಬೆಳವಣಿಗೆ ಒಂದರಲ್ಲಿ ಇನ್ಫೋಸಿಸ್ ಗೆ ನೀಡಲಾಗಿದ್ದ 32 ಸಾವಿರ ಕೋಟಿ ರೂ. ಮೊತ್ತದ ಜಿಎಸ್ಟಿ ನೋಟಿಸ್ಅನ್ನು ರಾಜ್ಯ ಸರ್ಕಾರ ಹಿಂಪಡೆದಿದೆ. ಈ ಮೊದಲು 2017ರಿಂದ 2022ರವರೆಗೆ ಐದು ವರ್ಷದಲ್ಲಿ ಬರೋಬ್ಬರಿ 32,403.46 ಕೋಟಿ ರೂ ಮೊತ್ತದ ಐಜಿಎಸ್ಟಿ ಪಾವತಿಸಬೇಕು ಎಂದು ಜಿಎಸ್ಟಿ ಅಧಿಕಾರಿಗಳು ಇನ್ಫೋಸಿಸ್ಗೆ ನೋಟಿಸ್ ಜಾರಿ ಮಾಡಿದ್ದರು.
ರಾಜ್ಯ ಸರ್ಕಾರ, ತಾನು ನೀಡಿರುವ ಜಿಎಸ್ ಟಿ ನೋಟಿಸನ್ನು ಹಿಂಪಡೆದಿದೆ ಎಂದು ಖುದ್ದು ಇನ್ಫೋಸಿಸ್ ಸಂಸ್ಥೆ ಪ್ರಕಟಿಸಿದೆ.32,000 ಕೋಟಿ ರೂ. ತೆರಿಗೆ ಬಾಕಿ ಉಳಿಸಿಕೊಂಡಿರುವ ಆರೋಪಗಳ ಬಗ್ಗೆ ಕೇಂದ್ರೀಯ ಜಿಎಸ್ಟಿ ಗುಪ್ತಚರ ವಿಭಾಗದ ಮಹಾನಿರ್ದೇಶಕರಿಗೆ ನೀವು ವಿವರಣೆ ಕೊಡಬೇಕು ಎಂದು ತನಗೆ ಕಳುಹಿಸಿರುವ ಸೂಚನಾ ಪತ್ರದಲ್ಲಿ ರಾಜ್ಯ ಸರ್ಕಾರ ತಿಳಿಸಿದೆ ಎಂದು ಇನ್ಫೋಸಿಸ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಜುಲೈ 31ರಂದು ನೀಡಲಾಗಿರುವ ನೋಟಿಸ್ನಲ್ಲಿ 32,000 ಕೋಟಿ ರೂ.ಗಳ ಜಿಎಸ್ಟಿ ತೆರಿಗೆಯನ್ನು ಸರ್ಕಾರಕ್ಕೆ ಕಟ್ಟಿಲ್ಲ. ಹಾಗಾಗಿ, ಕೂಡಲೇ ತೆರಿಗೆಯನ್ನು ಕಟ್ಟಬೇಕೆಂದು ಸೂಚಿಸಿತ್ತು. ಅಲ್ಲದೆ, ಈ ತೆರಿಗೆಯು ಇನ್ಫೋಸಿಸ್ ಕಂಪನಿಯು ವಿದೇಶಗಳಲ್ಲಿನ ತನ್ನ ಶಾಖೆಗಳಿಂದ ಅಲ್ಲಿನ ಕಂಪನಿಗಳಿಗೆ ನೀಡುತ್ತಿರುವ ಸಾಫ್ಟ್ ವೇರ್ ಸೇವೆಗಳ ಮೇಲೆ ವಿಧಿಸಲಾಗುವ ತೆರಿಗೆಯಾಗಿದೆ ಎಂದು ಉಲ್ಲೇಖಿಸಿತ್ತು.
ವಿದೇಶಗಳಲ್ಲಿ ನೀಡುವ ಸೇವೆಗಳ ಮೇಲಿನ ಜಿಎಸ್ ಟಿಯನ್ನು ಈಗಾಗಲೇ ಕೇಂದ್ರ ಸರ್ಕಾರವೇ ರದ್ದುಗೊಳಿಸಿದೆ. ಇತ್ತೀಚೆಗಷ್ಟೇ ಈ ಕುರಿತಂತೆ ಮಾರ್ಗಸೂಚಿಯನ್ನು ಕೇಂದ್ರೀಯ ತೆರಿಗೆ ಇಲಾಖೆ ಸಾರ್ವಜನಿಕವಾಗಿ ಬಿಡುಗಡೆ ಮಾಡಿದೆ. ಈ ಹೊಸ ನಿಯಮದ ಪ್ರಕಾರ, ಭಾರತದಿಂದ ವಿದೇಶದ ಕಂಪನಿಗಳಿಗೆ ನೀಡಲಾಗುವ ಸಾಫ್ಟ್ ವೇರ್ ಸೇವೆಗಳು ಮಾತ್ರ ತೆರಿಗೆ ವ್ಯಾಪ್ತಿಗೆ ಒಳಪಡಲಿವೆ ಎಂದು ರಾಜ್ಯ ಸರ್ಕಾರ ನೀಡಿದ್ದ ನೋಟಿಸ್ಗೆ ಉತ್ತರಿಸಿತ್ತು.