

ಪುಣೆ: ಸಾವು ಯಾವಾಗ, ಹೇಗೆ ಬರುತ್ತದೆ ಎಂದು ನಿರೀಕ್ಷಿಸಲು ಯಾರಿಂದಲೂ ಸಾಧ್ಯವಿಲ್ಲ. ಅನಿರೀಕ್ಷಿತವಾಗಿ ನಡೆಯುವ ಘಟನೆಗಳಿಂದ ನಮ್ಮ ಉಸಿರು ಒಮ್ಮೆಗೆ ನಿಲ್ಲಬಹುದು. ಇದೀಗ ಅಂತಹದ್ದೇ ಒಂದು ದುರ್ಘಟನೆಯಿಂದ ಮೂರುವರೆ ವರ್ಷ ವಯಸ್ಸಿನ ಮಗುವೊಂದು ಪ್ರಾಣ ಕಳೆದುಕೊಂಡಿರುವ ಆಘಾತಕಾರಿ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ.
ಮೃತ ಬಾಲಕಿಯನ್ನು ಗಿರಿಜಾ (3) ಎಂದು ಗುರುತಿಸಲಾಗಿದ್ದು, ಆಟವಾಡುತ್ತಿದ್ದಾಗ ಹೌಸಿಂಗ್ ಸೊಸೈಟಿಯ ಕಬ್ಬಿಣದ ಗೇಟ್ ಆಕಸ್ಮಿಕವಾಗಿ ಬಿದ್ದು, ಮೂರುವರೆ ವರ್ಷದ ಮಗು ಮೃತಪಟ್ಟಿದ್ದು, ಈ ಘಟನೆಯ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವೈರಲ್ ಆಗಿರುವ ವಿಡಿಯೋ ನೋಡುವುದಾದರೆ ಇಬ್ಬರು ಮಕ್ಕಳು ತಮ್ಮ ಸೈಕಲ್‌ನಲ್ಲಿ ಆಟವಾಡುತ್ತಿದ್ದಾರೆ. ಈ ವೇಳೆ ಬಾಲಕನೋರ್ವ,ಈ ಗೇಟನ್ನು ಎಳೆದು ಒಪನ್ ಮಾಡುತ್ತಾನೆ. ಮತ್ತೊಬ್ಬ ಬಾಲಕ ಆಗ ಸೈಕಲ್‌ನಲ್ಲಿ ಒಳಗೆ ಹೋಗುತ್ತಾನೆ. ಇದಾದ ನಂತರ ಬಾಲಕ ಈ ಗೇಟನ್ನು ಎಳೆದು ಹಾಕಲು ಮುಂದಾಗುವ ವೇಳೆ ಗೇಟ್ ಫಿಕ್ಸ್ ಆಗಿದ್ದ ಗ್ರಿಲ್‌ನಿಂದ ಜಾರಿದೆ ಅದೇ ವೇಳೆಗೆ ಸರಿಯಾಗಿ ಅಲ್ಲಿ ಮೂರುವರೆ ವರ್ಷದ ಮಗು ಹಾಗೂ ಆಕೆಯ ಅಕ್ಕ ಬಂದಿದ್ದು, ಪುಟ್ಟ ಮಗುವಿನ ಮೇಲೆ ಗೇಟ್ ಬಿದ್ದಿದೆ. ಆಕೆಯ ಅಕ್ಕ ಸ್ವಲ್ಪದರಲ್ಲೇ ಬಚಾವ್ ಆಗಿದ್ದಾಳೆ.
ಗೇಟ್ ಬಿದ್ದ ಕೂಡಲೇ ಅಲ್ಲಿದ್ದ ಮಕ್ಕಳು ಮನೆಯವರಿಗೆ ವಿಷಯ ತಿಳಿಸಲು ಓಡಿ ಹೋಗಿದ್ದು, ಇದನ್ನು ಕಂಡ ವ್ಯಕ್ತಿಯೊಬ್ಬರು ಗೇಟನ್ನು ಪಕ್ಕಕ್ಕೆ ಸರಿಸಿ ಅದರಡಿ ಸಿಲುಕಿದ್ದ ಬಾಲಕಿಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಕ್ಷಣಾರ್ಧದಲ್ಲೇ ಈ ವಿಡಿಯೋ ವೈರಲ್ ಆಗಿದ್ದು, ಬಾಲಕಿಯ ಸಾವುಗೆ ನೆಟ್ಟಿಗರು ಕಂಬನಿ ಮಿಡಿದಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ಪಿಂಪ್ರಿ ಚಿಂಚವಾಡದ ಗಣೇಶನಗರದ ಬೊಪ್ಕೆಲ್‌ನಲ್ಲಿ ಈ ಘಟನೆ ನಡೆದಿದ್ದು, ಆಕಸ್ಮಿಕ ಸಾವು ಅಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಪೊಲೀಸರು ಹೇಳುವ ಪ್ರಕಾರ ಗೇಟ್ ಪಕ್ಕದಲ್ಲಿ ಗಿರಿಜಾ ಆಟವಾಡುತ್ತಿರುವಾಗ ಬಾಲಕನೋರ್ವ ಈ ಗೇಟನ್ನು ಹಾಕಲು ಯತ್ನಿಸಿದ್ದಾನೆ ಈ ವೇಳೆ ಗೇಟ್ ಟ್ರ್ಯಾಕ್‌ನಿಂದ ಜಾರಿ ಬಾಲಕಿ ಮೇಲೆ ಬಿದ್ದಿದೆ. ಕೂಡಲೇ ಬಾಲಕಿಯನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ಮಾರ್ಗಮಧ್ಯೆಯೇ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಈ ಗೇಟ್ 100 ಕೆಜಿಗೂ ಅಧಿಕ ಭಾರವಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.