ಸ್ಟಾರ್​ ನಟರಿಲ್ಲದ ಚಿತ್ರ ಬಾಕ್ಸ್​ ಆಫೀಸ್​ನಲ್ಲಿ ಕಮಾಲ್​! ಒಟಿಟಿಗೆ ಬಂದು ಎರಡು ವಾರ ಕಳೆದ್ರೂ ನಿಂತಿಲ್ಲ ಕಲೆಕ್ಷನ್​

ವಿಜಯವಾಣಿ - 2024-01-16T083322.459
Published on

ಮುಂಬೈ: ವಿದು ವಿನೋದ್​ ಚೋಪ್ರಾ ನಿರ್ದೇಶನದ ಹಾಗೂ ವಿಕ್ರಾಂತ್​ ಮಾಸ್ಸೆ ಅಭಿನಯದ 12 ಫೇಲ್​ ಇದೀಗ ಬಿಡುಗಡೆಗೊಂಡ ಮೊದಲ ವಾರದಲ್ಲಿ ಅಷ್ಟು ಅಬ್ಬರಿಸದೇ ಹೋದರೂ ಇಂದಿಗೆ ಬಾಕ್ಸ್ ಆಫೀಸ್​ನಲ್ಲಿ ಉತ್ತಮ ಗಳಿಕೆಯೊಂದಿಗೆ ಚಿತ್ರಮಂದಿರಗಳಲ್ಲಿ ಮುನ್ನುಗ್ಗುತ್ತಿದೆ. ಸದ್ಯ ಚಿತ್ರ ಒಟಿಟಿಗೆ ಬಂದು ಎರಡು ವಾರಗಳು ಕಳೆದರು ಸಹ ಚಿತ್ರವು ಥಿಯೇಟರ್​ಗಳಲ್ಲಿ ಪ್ರೇಕ್ಷಕರಿಂದ ತುಂಬುತ್ತಿದೆ.

ದೊಡ್ಡ ಸ್ಟಾರ್​​ಗಳಿಲ್ಲದ ಈ ಚಿತ್ರವು ಥಿಯೇಟರ್‌ಗಳಲ್ಲಿ 50 ಕೋಟಿ ರೂ.ಗೂ ಹೆಚ್ಚು ಕಲೆಕ್ಷನ್ ಮಾಡಿದೆ. ವಿಕ್ರಾಂತ್ ಮಾಸ್ಸೆ ಮತ್ತು ಮೇಧಾ ಶಂಕರ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ 12 ಫೇಲ್​, ಐಪಿಎಸ್ ಅಧಿಕಾರಿ ಮನೋಜ್ ಕುಮಾರ್ ಶರ್ಮಾ ಮತ್ತು ಐಆರ್‌ಎಸ್ ಅಧಿಕಾರಿ ಶ್ರದ್ಧಾ ಜೋಶಿ ಅವರ ಜೀವನಗಾಥೆ ಆಧರಿತ ಚಿತ್ರವಾಗಿದೆ.

ಕಳೆದ ಎರಡು ವಾರಗಳ ಹಿಂದೆಯಷ್ಟೇ ಸಿನಿಮಾ ಡಿಸ್ನಿ ಹಾಟ್​ಸ್ಟಾರ್​ನಲ್ಲಿ ಅಧಿಕೃತವಾಗಿ ಬಿಡುಗಡೆಗೊಂಡಿತು. ಇದೀಗ ಸುಲಭವಾಗಿ ಮನೆಯಲ್ಲೇ ಕುಳಿತು ಒಟಿಟಿಯಲ್ಲಿ ವೀಕ್ಷಿಸಲು ಅವಕಾಶ ಸಿಕ್ಕರೂ ಕೂಡ ಚಿತ್ರಮಂದಿರಗಳಲ್ಲೇ 12 ಫೇಲ್ ನೋಡಲು ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಥಿಯೇಟರ್​ಗಳತ್ತ ತೆರಳುತ್ತಿರುವುದು ಸದ್ಯ ಭಾರೀ ಆಶ್ಚರ್ಯಕ್ಕೆ ಕಾರಣವಾಗಿದೆ.

ಒಟಿಟಿ ಮೀರಿ ಚಿತ್ರಕ್ಕೆ ಚಿತ್ರಮಂದಿರಗಳಲ್ಲಿ ಇಂದಿಗೂ ಹೆಚ್ಚು ಆಕ್ಯುಪನ್ಸಿಗಳನ್ನು ಲಭಿಸುತ್ತಿವೆ. ಕಳೆದ ಮೂರು ದಿನಗಳಲ್ಲಿ ಚಿತ್ರ ಸುಮಾರು 1.4 ಕೋಟಿ ರೂ. ನಿವ್ವಳ ಕಲೆಕ್ಷನ್ ಮಾಡಿದೆ ಎಂದು ವರದಿಯಾಗಿದೆ. ಚಿತ್ರದಲ್ಲಿ ಪ್ರಿಯಾಂಶು ಚಟರ್ಜಿ, ಸಂಜಯ್ ಬಿಷ್ಣೋಯ್, ಹರೀಶ್ ಖನ್ನಾ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net