ದೇವನಗರಿಯಲ್ಲಿ ಮಕರ ಸಂಕ್ರಾಂತಿ ಸಂಭ್ರಮ- ಇಡೀ ದಿನ ಹೌಸ್ ಫುಲ್ ಆಗಿದ್ದ ಗ್ಲಾಸ್ ಹೌಸ್!

IMG-20240115-WA0027.jpg
Published on

ದಾವಣಗೆರೆ: ಕ್ಯಾಲೆಂಡರ್ ವರ್ಷದ ಮೊದಲ ಹಬ್ಬ ಮಕರ ಸಂಕ್ರಾಂತಿ ಹಬ್ಬವನ್ನು ನಗರಾದ್ಯಂತ ಸೋಮವಾರ ಸಂಭ್ರಮದಿಂದ ಆಚರಿಸಲಾಯಿತು. ಪ್ರಮುಖ ಉದ್ಯಾನಗಳು, ಪ್ರವಾಸಿ ತಾಣಗಳು ಜನರ ಸಡಗರಕ್ಕೆ ಸಾಕ್ಷಿಯಾಗಿದ್ದವು.

ನಗರದ ಸರ್ ಎಂ.ವಿಶ್ವೇಶ್ವರಯ್ಯ ಪಾರ್ಕ್, ಕಾಸಲ್ ಶ್ರೀನಿವಾಸ ಶೆಟ್ಟಿ ಪಾರ್ಕ್, ಚಿಣ್ಣರ ಉದ್ಯಾನ, ಗಂಗೂಬಾಯಿ ಹಾನಗಲ್ ಪಾರ್ಕ್ ಮೊದಲಾದೆಡೆ ಜನಸಂದಣಿ ಇತ್ತು. ಚಾಪೆ, ಪ್ಲಾಸ್ಟಿಕ್ ಹಾಸು, ನೀರಿನ ಕ್ಯಾನ್‌ಗಳ ಸಹಿತವಾಗಿ ಕುಟುಂಬ ಸದಸ್ಯರೊಂದಿಗೆ ಪ್ರಮುಖ ಸ್ಥಳಗಳಿಗೆ ಜನರು ಲಗ್ಗೆ ಇಟ್ಟರು. ಜೋಳದ ರೊಟ್ಟಿ, ಚಪಾತಿ, ಬುತ್ತಿ, ಮುಳುಗಾಯಿ-ಮೆಣಸಿನಕಾಯಿ ಎಣಗಾಯಿ, ಗಡಸೆಪ್ಪು, ಶೇಂಗಾ ಇತರೆ ಚಟ್ನಿಪುಡಿಯ ವಿಶೇಷ ಊಟವನ್ನು ಒಟ್ಟಿಗೆ ಕೂತು ಸವಿದರು. ಚಿಣ್ಣರು ಅಲ್ಲಲ್ಲಿ ಜಾರುಬಂಡಿ, ಜೋಕಾಲಿ, ವಿವಿಧ ಆಟಿಕೆಗಳು, ಜಿಮ್‌ನ ಸಲಕರಣೆಗಳನ್ನು ಬಳಸಿ ಅಟವಾಡುತ್ತ ಸಂಭ್ರಮಿಸಿದರು. ದೊಡ್ಡಬಾತಿಯ ಪವಿತ್ರವನ, ಆನಗೋಡು ಪ್ರಾಣಿ ಸಂಗ್ರಹಾಲಯದ ಪ್ರಕೃತಿ ಮಡಿಲಲ್ಲಿಯೂ ಹಬ್ಬದ ಸಡಗರ ಕಂಡುಬಂತು. ಕೆಲ ಪಾರ್ಕ್‌ಗಳಲ್ಲಿ ಮಧ್ಯಾಹ್ನದವರೆಗೆ ಜನರ ಸುಳಿವೇ ಇರಲಿಲ್ಲ. ಬಿರುಬಿಸಿಲಿನ ದಾಹ ತಣಿಸಲು ಪಾಲಕರು-ಮಕ್ಕಳು ಐಸ್‌ಕ್ರೀಂ, ಕಬ್ಬಿನಹಾಲು, ಕಲ್ಲಂಗಡಿ, ಕಡ್ಲೆಗಿಡ, ಎಳನೀರು, ಹಣ್ಣಿನ ಜ್ಯೂಸ್‌ಗೆ ಮೊರೆ ಹೋದರು. ನೀರಿನ ಬಾಟಲುಗಳಿಗೆ ಬೇಡಿಕೆ ಹೆಚ್ಚಿತ್ತು. ಮನೆಗಳಲ್ಲೂ ಹಬ್ಬದ ಸಂಭ್ರಮ ಜೋರಾಗಿತ್ತು. ವಿಶೇಷ ಸಿಹಿ ಖಾದ್ಯದ ಸವಿ ಇತ್ತು. ಕುಟುಂಬಸ್ಥರು, ಸ್ನೇಹಿತರಿಗೆ ಎಳ್ಳು-ಬೆಲ್ಲ ಹಂಚಿ ಶುಭಾಶಯ ಹೇಳಿದರು. ಪ್ರಮುಖ ದೇವಸ್ಥಾನಗಳಿಗೆ ತೆರಳಿ ದೇವರ ದರ್ಶನ ಪಡೆದರು. ಬೆಳಗಿನ ವಿಶೇಷ ಪೂಜೆ, ಅಭಿಷೇಕ ಕಣ್ತುಂಬಿಕೊಂಡರು. ಹಬ್ಬದ ದಿನ ಮಾರುಕಟ್ಟೆಗಳಲ್ಲಿ ಜನರ ಪ್ರಮಾಣ ತಗ್ಗಿತ್ತು. ತರಕಾರಿ ವ್ಯಾಪಾರದ ಜತೆಯಲ್ಲೇ ಎಳ್ಳು-ಬೆಲ್ಲ, ಸಕ್ಕರೆ ಅಚ್ಚು, ಕಬ್ಬಿನ ಜಲ್ಲೆಗಳನ್ನು ಮಾರಾಟಕ್ಕೆ ಇರಿಸಲಾಗಿತ್ತು. ಒಂದೇ ದಿನಕ್ಕೆ 99,450 ರೂ. ಕಲೆಕ್ಷನ್! ಗಾಜಿನಮನೆಯಲ್ಲೂ ಹಬ್ಬದ ಕಲರವ ಹೆಚ್ಚಿತ್ತು. ಬೆಳಗ್ಗಿನಿಂದಲೇ ರಷ್ ಆಗಿದ್ದರಿಂದ ಟಿಕೆಟ್ ನೀಡಲು ಕೌಂಟರ್‌ಗಳಲ್ಲಿ ಹೆಚ್ಚುವರಿ ಸಿಬ್ಬಂದಿ ನಿಯೋಜಿಸಲಾಗಿತ್ತು. ಫೋಟೋ-ಸೆಲ್ಫಿ ಕ್ರೇಜ್‌ಗಾಗಿ ಅಲಂಕಾರಿಕ ಗಿಡಗಳ ಬಳಿ ಸುಳಿದಾಡುತ್ತಿದ್ದ ಜನರಿಗೆ ಬುದ್ದಿ ಹೇಳುವಲ್ಲಿ ಗಾರ್ಡ್‌ಗಳು ಹರಸಾಹಸ ಪಡಬೇಕಾಯಿತು. ಮಕ್ಕಳು ಆಟೋಟದ ಮೋಜಿನಲ್ಲಿ ಮುಳುಗಿದ್ದರು. ಊಟದ ಬಳಿಕ ಪಾಲಕರು ವಿಶ್ರಾಂತಿ ಪಡೆದರು. ಸಂಜೆ ಸಂಗೀತ ಕಾರಂಜಿ ಜತೆಗೆ ಲೇಸರ್ ಷೋ ಮುದ ನೀಡಿತು. ಇತರೆ ದಿನಗಳಲ್ಲಿ ಗಾಜಿನಮನೆಗೆ ಸುಮಾರು 300 ಮಂದಿ ಭೇಟಿ ನೀಡುತ್ತಾರೆ. ಆದರೆ, ಸೋಮವಾರ ಉದ್ಯಾನ ಹಾಗೂ ಸಂಗೀತ ಕಾರಂಜಿಯನ್ನು ಒಟ್ಟು 4210 ಹಿರಿಯರು, 1131 ಮಕ್ಕಳು ವೀಕ್ಷಣೆ ಮಾಡಿದ್ದು ಒಂದೇ ದಿನದಲ್ಲಿ 99,450 ರೂ. ಸಂಗ್ರಹವಾಗಿದೆ ಎಂದು ಟಿಕೆಟ್ ಕೌಂಟರ್ ಸಿಬ್ಬಂದಿ ವೀರಭದ್ರಸ್ವಾಮಿ ತಿಳಿಸಿದರು. ---
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net