

ನವದೆಹಲಿ: ಸೇನಾ ಚೆಕ್ಪೋಸ್ಟ್ (Army CheckPost) ಗುರಿಯಾಗಿಸಿ ಉಗ್ರರು ನಡೆಸಿದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ (Suicide Bomb Blast) 12 ಮಂದಿ ಸೈನಿಕರು ಮೃತಪಟ್ಟಿರುವ ಘಟನೆ ಪಾಕಿಸ್ತಾನದ ಖೈಬರ್ಪಖ್ತುಂಖ್ವಾ ಪ್ರಾಂತ್ಯದಲ್ಲಿ ನಡೆದಿದೆ.
ಘಟನೆಯು ಖೈಬರ್ಪಖ್ತುಂಖ್ವಾ ಪ್ರಾಂತ್ಯದ ಬನ್ನು ಜಿಲ್ಲೆಯ ಮಾಲಿಖೇಲ್ ಎಂಬ ಪ್ರದೇಶದಲ್ಲಿ ನಡೆದಿದ್ದು, ಆರು ಮಂದಿ ಭಯೋತ್ಪಾದಕರು ಮೃತಪಟ್ಟಿದ್ದು, ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಘಟನೆಯ ಕುರಿತು ಮಾಹಿತಿ ನೀಡಿರುವ ಹಿರಿಯ ಅಧಿಕಾರಿಯೊಬ್ಬರು, ಸ್ಫೋಟಕ ತುಂಬಿದ್ದ ವಾಹನದೊಂದಿಗೆ ಚೆಕ್ಪೋಸ್ಟ್ ನುಗ್ಗಲು ಪ್ರಯತ್ನಿಸಿದರು. ಆದರೆ, ಯೋಧರು ಅದನ್ನು ವಿಫಲಗೊಳಿಸಿದರು. ಆ ನಂತರ ವಾಹನ ಸ್ಫೋಟಗೊಂಡಿದ್ದು, ಇದರ ಪರಿಣಾಮವಾಗಿ ಭದ್ರತಾ ಪಡೆಗಳ 12 ಸೈನಿಕರು ಮೃತಪಟ್ಟಿದ್ದಾರೆ. ನಂತರ ಸೇನೆ ನಡೆಸಿದ ಕಾರ್ಯಾಚರಣೆಯಲ್ಲಿ ಆರು ಮಂದಿ ಭಯೋತ್ಪಾದಕರು ಮರತಪಟ್ಟಿದ್ದು, ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ.
ಪಾಕಿಸ್ತಾನದಲ್ಲಿ ಇತ್ತೀಚಿನ ದಿನಗಳಲ್ಲಿ ಭಯೋತ್ಪಾದಕ ದಾಳಿಗಳು ಹೆಚ್ಚುತ್ತಿದ್ದು, ನವೆಂಬರ್ 09ರಂದು ಕ್ವೆಟ್ಟಾದ ರೈಲು ನಿಲ್ದಾಣವನ್ನು ಗುರಿಯಾಗಿಸಿ ಉಗ್ರರು ನಡೆಸಿದ ದಾಳಿಯಲ್ಲಿ 14 ಸೈನಿಕರು ಸೇರಿದಂತೆ 30ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದರು. ಇದರ ಬೆನ್ನಲ್ಲೇ ಪಾಕ್ ಸರ್ಕಾರವು ಉಗ್ರರ ವಿರುದ್ಧ ಮಿಲಿಟರಿ ಕಾರ್ಯಾಚರಣೆಯನ್ನು ಘೋಷಿಸಿದೆ.