ಅಡುಗೆ ಮನೆಯಲ್ಲಿ 12 ಅಡಿ ಹೆಬ್ಬಾವು ಪ್ರತ್ಯಕ್ಷ; ಕಿಚನ್‌ ದೃಶ್ಯ ಕಂಡು ಕುಟುಂಬಕ್ಕೆ ನಡುಕ! | Python In Kitchen

ಉತ್ತರ ಪ್ರದೇಶದ ಇಟಾವಾದಲ್ಲಿ ಮನೆಯ ಅಡುಗೆ ಸ್ಲ್ಯಾಬ್ ಮೇಲೆ ಬರೋಬ್ಬರಿ 12 ಅಡಿ ಉದ್ದದ ಹೆಬ್ಬಾವು ಪತ್ತೆಯಾಗಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಅರಣ್ಯ ಇಲಾಖೆಯವರು ಹೆಬ್ಬಾವನ್ನು ರಕ್ಷಿಸಿದ್ದಾರೆ.
12 Foot Python
ಅಡುಗೆ ಸ್ಲ್ಯಾಬ್ ಮೇಲೆ 12 ಅಡಿ ಹೆಬ್ಬಾವು
Published on: 

Uttar Pradesh Python: ಅಡುಗೆ ಮಾಡಲು ಕಿಚನ್‌ಗೆ ಹೋದ ಮಹಿಳೆಗೆ ಅಲ್ಲಿ ಶಾಕ್ ಕಾದಿತ್ತು. ಅಡುಗೆ ಸ್ಲ್ಯಾಬ್ ಮೇಲೆಯೇ ಬರೋಬ್ಬರಿ 12 ಅಡಿ ಉದ್ದದ ಹೆಬ್ಬಾವು ಕಂಡಿದೆ. ಹಾವು ಕಂಡ ತಕ್ಷಣ ಭಯಗೊಂಡ ಮಹಿಳೆ ಕಿರುಚುತ್ತಾ ಅಡುಗೆ ಮನೆಯಿಂದ ಹೊರಗೆ ಓಡಿದ್ದಾರ.

ಉತ್ತರ ಪ್ರದೇಶದ ಇಟಾವಾದಲ್ಲಿ ನಡೆದ ಈ ಘಟನೆ ಕುಟುಂಬಸ್ಥರು ಹಾಗೂ ಸ್ಥಳೀಯರನ್ನು ಬೆಚ್ಚಿಬೀಳಿಸಿದೆ. ಸಂಜೆ ವೇಳೆ ಮೂವರು ಮಕ್ಕಳಿಗೆ ಅಡುಗೆ ಮಾಡಲು ಮಹಿಳೆ ಕಿಚನ್‌ಗೆ ಹೋಗಿದ್ದರು. ಈ ವೇಳೆ ಸ್ಲ್ಯಾಬ್ ಮೇಲೆ ಬೃಹತ್ ಹೆಬ್ಬಾವು ಕಾಣಿಸಿಕೊಂಡಿದೆ. ಹಾವು ಕಂಡು ಗಾಬರಿಗೊಂಡ ಮಹಿಳೆ ಕಿರುಚುತ್ತಾ ಹೊರಗೆ ಓಡಿ, ಕುಟುಂಬಸ್ಥರು ಹಾಗೂ ಅಕ್ಕಪಕ್ಕದವರನ್ನು ಎಚ್ಚರಿಸಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ. ವನ್ಯಜೀವಿ ತಜ್ಞ ಡಾ. ಆಶಿಶ್ ತ್ರಿಪಾಠಿ ಕೂಡ ರಕ್ಷಣಾ ಕಾರ್ಯಾಚರಣೆಯಲ್ಲಿ ಕೈಜೋಡಿಸಿದ್ದಾರೆ. ಮನೆಯಲ್ಲಿದ್ದವರಿಗೆ ಅಥವಾ ಹೆಬ್ಬಾವಿಗೆ ಯಾವುದೇ ತೊಂದರೆಯಾಗದಂತೆ ಎಚ್ಚರಿಕೆಯಿಂದ ಕಾರ್ಯಾಚರಣೆ ನಡೆಸಿ, ಕೊನೆಗೆ ಬೃಹತ್ ಹೆಬ್ಬಾವನ್ನು ಸುರಕ್ಷಿತವಾಗಿ ಹಿಡಿದು ಹೊರಗೆ ತರಲಾಗಿದೆ.

ಕೊನೆಗೂ ನಿಟ್ಟುಸಿರು ಬಿಟ್ಟ ಕುಟುಂಬ

ಹೆಬ್ಬಾವು ಸಿಕ್ಕಿಬಿದ್ದ ಬಳಿಕ ಮಹಿಳೆ, ಕೂಲಿ ಕೆಲಸ ಮಾಡುವ ಅವರ ಪತಿ ಹಾಗೂ ಮೂವರು ಮಕ್ಕಳು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಮನೆಯೊಳಗೇ ಇಷ್ಟು ದೊಡ್ಡ ಹಾವು ಕಾಣಿಸಿಕೊಂಡಿದ್ದರಿಂದ ಕುಟುಂಬಸ್ಥರು ಮಾತ್ರವಲ್ಲದೆ ಅಕ್ಕಪಕ್ಕದವರೂ ಆತಂಕಗೊಂಡಿದ್ದರು.

ವಿಷಕಾರಿಯಲ್ಲ, ಆದರೂ ಎಚ್ಚರ ಅಗತ್ಯ

ಡಾ. ಆಶಿಶ್ ತ್ರಿಪಾಠಿ, ಇದು ಇಂಡಿಯನ್ ರಾಕ್ ಪೈಥಾನ್ (Python molurus) ಎಂದು ಗುರುತಿಸಿದ್ದಾರೆ. ಇದು ವಿಷಕಾರಿಯಲ್ಲದ ಹಾವು. ಆದರೆ ಹೆಬ್ಬಾವು ಕಚ್ಚಿದರೆ ಗಂಭೀರ ಸೋಂಕು ಉಂಟಾಗುವ ಸಾಧ್ಯತೆ ಇದ್ದು, ಕೆಲವೊಮ್ಮೆ ಗ್ಯಾಂಗ್ರೀನ್‌ನಂತಹ ತೊಂದರೆಗೂ ಕಾರಣವಾಗಬಹುದು ಎಂದು ಅವರು ತಿಳಿಸಿದ್ದಾರೆ.

ಕಾಡಿಗೆ ಸುರಕ್ಷಿತವಾಗಿ ಬಿಡುಗಡೆ

ಹೆಬ್ಬಾವು ಸಂರಕ್ಷಿತ ವನ್ಯಜೀವಿಯಾಗಿರುವುದರಿಂದ ಅದಕ್ಕೆ ಹಾನಿ ಮಾಡುವುದು ಅಥವಾ ಕೊಲ್ಲುವುದು ಕಾನೂನುಬಾಹಿರ. ವನ್ಯಜೀವಿ ಸಂರಕ್ಷಣಾ ಕಾಯ್ದೆ, 1972ರ ಅಡಿಯಲ್ಲಿ ಹೆಬ್ಬಾವಿಗೆ ರಕ್ಷಣೆ ಇದೆ. ನಿಯಮ ಉಲ್ಲಂಘಿಸಿದರೆ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಬಹುದು.

ಇದನ್ನೂ ಓದಿ: ಗ್ಯಾಸ್ ಸಿಲಿಂಡರ್‌ನಲ್ಲಿ ಮದ್ಯದ ‘ಸೀಕ್ರೆಟ್ ಚೇಂಬರ್’; ಖತರ್ನಾಕ್ ಐಡಿಯಾಗೆ ಪೊಲೀಸರೇ ಶಾಕ್! | Bihar Liquor Smuggling

ರಕ್ಷಣಾ ಕಾರ್ಯಾಚರಣೆ ಬಳಿಕ ಹೆಬ್ಬಾವನ್ನು ಅರಣ್ಯ ಇಲಾಖೆ ಅಧಿಕಾರಿಗಳ ವಶಕ್ಕೆ ಒಪ್ಪಿಸಲಾಗಿದೆ. ಬಳಿಕ ಅಧಿಕಾರಿಗಳ ಮೇಲ್ವಿಚಾರಣೆಯಲ್ಲಿ ಅದನ್ನು ಸುರಕ್ಷಿತವಾಗಿ ಅರಣ್ಯ ಪ್ರದೇಶಕ್ಕೆ ಬಿಡಲಾಗಿದೆ.(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net