ಕೋಮುಲ್​ಗೆ 12 ಮಂದಿ ಉಮೇದುವಾರಿಕೆ

komul namination
ಕೋಮುಲ್​ ನಿರ್ದೇಶಕ ಸ್ಥಾನಕ್ಕೆ ಮುಳಬಾಗಿಲು ಕ್ಷೇತ್ರದ ಅಭ್ಯರ್ಥಿಗಳು ಗುರುವಾರ ನಾಮಪತ್ರ ಸಲ್ಲಿಸಿದರು. ಸಮೃದ್ಧಿ ಮಂಜುನಾಥ್​, ಎಂ.ಮಲ್ಲೇಶ್​ ಬಾಬು, ಸಿಎಂಆರ್​ ಶ್ರೀನಾಥ್​ ಇದ್ದರು.
Published on

ಕೋಲಾರ: ಕೋಲಾರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ (ಕೋಮುಲ್​) 13 ನಿರ್ದೇಶಕ ಸ್ಥಾನಗಳಿಗೆ ಜೂ.25ರಂದು ನಿಗದಿಯಾಗಿರುವ ಚುನಾವಣೆಗೆ, ನಾಮಪತ್ರ ಸಲ್ಲಿಕೆಗೆ ಮೊದಲ ದಿನವಾದ ಶುಕ್ರವಾರ ಬಂಗಾರಪೇಟೆ ಶಾಸಕ ಎಸ್​.ಎನ್​.ನಾರಾಯಣಸ್ವಾಮಿ ಸೇರಿ 12 ಮಂದಿ ಉಮೇದುವಾರಿಕೆ ಸಲ್ಲಿಸಿದರು.

ಜೂ.17ರವರೆಗೆ ನಾಮಪತ್ರ ಸಲ್ಲಿಕೆಗೆ ಕಾಲಾವಕಾಶವಿದೆ. ಎಸ್​.ಎನ್​.ನಾರಾಯಣಸ್ವಾಮಿ ಬೆಳಗ್ಗೆ 10.15ರ ಸುಮಾರಿಗೆ ಆಗಮಿಸಿದರಾದರೂ 11 ಗಂಟೆಯವರೆಗೆ ಕಾದು, ಆನಂತರ ನಾಮಪತ್ರ ಸಲ್ಲಿಸಿದರು. ಅದುವರೆಗೂ ಚುನಾವಣಾಧಿಕಾರಿ ಬಳಿ ಚರ್ಚಿಸಿ ಹಲವು ಮಾಹಿತಿ ಪಡೆದುಕೊಂಡರು. ಜೆಡಿಎಸ್​&-ಬಿಜೆಪಿ ಮೈತ್ರಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ ಹಿನ್ನೆಲೆಯಲ್ಲಿ ಸಂಸದ ಎಂ.ಮಲ್ಲೇಶ್​ ಬಾಬು, ಮುಳಬಾಗಿಲು ಶಾಸಕ ಸಮೃದ್ಧಿ ಮಂಜುನಾಥ್​, ಜೆಡಿಎಸ್​ ಮುಖಂಡ ಸಿಎಂಆರ್​ ಶ್ರೀನಾಥ್​ ಅಭ್ಯರ್ಥಿಗಳಿಗೆ ಸಾಥ್​ ನೀಡಿದರು.

ಜೂ.18 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಜೂ.19 ಮತ್ತು 20ರಂದು ವಾಪಸ್​ ಪಡೆಯಲು ಕಾಲಾವಕಾಶ ನೀಡಲಾಗಿದೆ. ಜೂ.25ರ ಬೆಳಗ್ಗೆ 9 ರಿಂದ ಸಂಜೆ 4 ಗಂಟೆಯವರೆಗೆ ಕೋಲಾರದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಮತದಾನ ಪ್ರಕ್ರಿಯೆ ನಡೆಯಲಿದೆ. ಆ ಬಳಿಕ ಫಲಿತಾಂಶ ಘೋಷಣೆಯಾಗಲಿದೆ.

* ಹಗರಣಗಳ ಭಯ

ನಾನು ಕೋಮುಲ್​ಗೆ ಪ್ರವೇಶಿಸಲೇಬಾರದೆಂದು ಅನೇಕರು ವಿಧಾನಸಭೆ ಚುನಾವಣೆಯಲ್ಲಿ ಪಟ್ಟ ಶ್ರಮಕ್ಕಿಂತ ಹೆಚ್ಚು ಕಷ್ಟ ಪಡುತ್ತಿದ್ದಾರೆ ಎಂದು ಶಾಸಕ ಎಸ್​.ಎನ್​.ನಾರಾಯಣಸ್ವಾಮಿ ತಿಳಿಸಿದರು. ಒಕ್ಕೂಟದಲ್ಲಿ ನಡೆದಿರುವ 200 ಕೋಟಿ ರೂ.ಗೂ ಮೇಲ್ಪಟ್ಟ ಹಗರಣಗಳ ತನಿಖೆಗೆ ನಾನೇ ಒತ್ತಾಯ ಮಾಡುತ್ತಿರುವುದರಿಂದ ತೊಂದರೆ ಆಗುತ್ತದೆ ಎಂದು ಅಡ್ಡಗಾಲು ಹಾಕುತ್ತಿದ್ದಾರೆ. ಯಾರು ಏನೇ ಅಡ್ಡ ಹಾಕಿದರೂ ನಾನು ಪ್ರವೇಶ ಮಾಡಿಯೇ ಮಾಡುತ್ತೇನೆ. ಮಹಿಳಾ ಸ್ಥಾನವನ್ನು ಕಳೆದ ಬಾರಿ ಮಾಲೂರಿಗೆ ನೀಡಿದ್ದೆವು. ನಮ್ಮಲ್ಲಿಯೂ ಮತದಾರರು ಹೆಚ್ಚಿರುವ ಹಿನ್ನೆಲೆಯಲ್ಲಿ ಈ ಬಾರಿ ಮಹಿಳಾ ಅಭ್ಯರ್ಥಿಯನ್ನೂ ಕಣಕ್ಕೆ ಇಳಿಸುತ್ತಿದ್ದೇವೆ ಎಂದರು.

* ರಾಜಕೀಯ ಭವಿಷ್ಯ ಉತ್ತಮ

ಮುಳಬಾಗಿಲಿನ ಪೂರ್ವ, ಪಶ್ಚಿಮ ಹಾಗೂ ಮಹಿಳಾ ಕ್ಷೇತ್ರಕ್ಕೆ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಮುಂದಿನ ದಿನಗಳಲ್ಲಿ ರಾಜಕೀಯ ಭವಿಷ್ಯ ಉತ್ತಮವಾಗಲಿ ಎಂದು ಸಮೃದ್ಧಿ ಮಂಜುನಾಥ್​ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net