

ವೇಮಗಲ್: ಹಸಿವುಮುಕ್ತ ಕರ್ನಾಟಕವನ್ನಾಗಿ ಮಾಡಲು ಸಿದ್ದರಾಮಯ್ಯ ಅನ್ನಭಾಗ್ಯ ಜತೆಗೆ ಇಂದಿರಾ ಕ್ಯಾಂಟೀನ್ ಯೋಜನೆ ಜಾರಿಗೆ ತಂದಿದ್ದು, ಬಡವರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಶಾಸಕ ಕೊತ್ತೂರು ಜಿ.ಮಂಜುನಾಥ್ ಹೇಳಿದರು.
ಕೋಲಾರ ತಾಲೂಕು ವೇಮಗಲ್&ಕುರಗಲ್ ಪಟ್ಟಣದಲ್ಲಿ ನಿರ್ಮಾಣ ಮಾಡಿರುವ ಇಂದಿರಾ ಕ್ಯಾಂಟೀನ್ಗೆ ಶುಕ್ರವಾರ ಚಾಲನೆ ನೀಡಿ ಮಾತನಾಡಿ, ಬಡವರು ಹೊಟ್ಟೆ ತುಂಬ ಊಟ ಮಾಡಬೇಕು, ಹಸಿವಿನಿಂದ ಯಾವೊಬ್ಬ ಪ್ರಜೆಯೂ ಬಳಲಬಾರದು ಎಂಬ ಉದ್ದೇಶರಿಂದ ಇಂದಿರಾ ಕ್ಯಾಂಟೀನ್ ಅನ್ನು ರಾಜ್ಯಾದ್ಯಂತ ಜಾರಿಗೆ ತರಲಾಗಿದೆ ಎಂದರು.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದ ಮೇಲೆ ಯೋಜನೆಯನ್ನು ಸ್ಥಗಿತಗೊಳಿಸಲಾಗಿತ್ತು, ಸರ್ಕಾರ ಅದನ್ನು ಮರು ಜಾರಿಗೆ ತಂದಿದೆ. ಬಡಕೂಲಿ ಕಾರ್ಮಿಕರು ಒಂದು ದಿನದ ಊಟಕ್ಕೂ ಪರದಾಡಬಾರದು. ಇಂದಿರಾ ಕ್ಯಾಂಟೀನ್ಗಳಿಗೆ ಹೋಗಿ ಊಟ ಸೇವಿಸಬೇಕು ಎಂದು ಸಲಹೆ ನೀಡಿದರು.
ಜಿಲ್ಲೆಯಲ್ಲಿ 4 ಕ್ಯಾಂಟೀನ್ ಸ್ಥಾಪಿಸಲಾಗಿದ್ದು, ವೇಮಗಲ್&-ಕುರುಗಲ್ ಪಟ್ಟಣ ಪಂಚಾಯಿತಿ ಆಗಿರುವುದರಿಂದ ಜನಸಂಖ್ಯೆಯೂ ಹೆಚ್ಚಾಗಿದೆ. ಜತೆಗೆ ಕೂಲಿ ಕಾರ್ಮಿಕರು ವಾಸವಿದ್ದು, ಇಲ್ಲಿ ಕ್ಯಾಂಟೀನ್ ಅಗತ್ಯವಿತ್ತು ಎಂದರು.
ದೇವನಹಳ್ಳಿಯಿಂದ ಎಚ್. ಕ್ರಾಸ್ ಮುಖಾಂತರ ವೇಮಗಲ್ ಕೋಲಾರದ ತನಕ ಮತ್ತು ವೇಮಗಲ್ನಿಂದ ಮಾಲೂರಿನಿಂದ ಹೊಸೂರು ತನಕ ಡಬಲ್ ರಸ್ತೆ ಮಾಡಲಾಗುತ್ತಿದೆ. ಸರ್ಕಾರಿ ಮೆಡಿಕಲ್ ಕಾಲೇಜ್ ಹಾಗೂ ಸಾರ್ವಜನಿಕರಿಗೆ ಉಪಯೋಗವಾಗುವ ಇತರ ಯೋಜನೆಗಳನ್ನು ಸರ್ಕಾರ ನೀಡಿದೆ ಎಂದು ತಿಳಿಸಿದರು.
ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ತಾಲೂಕು ಅಧ್ಯಕ್ಷ ವಿ.ಎಂ ಮುನಿಯಪ್ಪ, ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕಿ ಎಸ್.ಅಂಬಿಕಾ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎಸ್.ಎಂ.ವೆಂಕಟೇಶ್, ಮುಖಂಡರಾದ ಚಂಜಿಮಲೆ ಬಿ.ರಮೇಶ್, ಸೀತಿ ಹೊಸೂರು ಮುರಳಿಗೌಡ, ನಾಗನಾಳ ಸೋಮಣ್ಣ, ವೇಮಗಲ್ ಎಸ್.ಎಫ್. ಎಸ್.ಸಿ ನಿರ್ದೇಶಕ ರವಿಕುಮಾರ್, ಆಜ್ಯಹಿತ ರಕ್ಷಣಾ ವೇದಿಕೆ ಅಧ್ಯಕ್ಷ ಎಂ.ಬಾಬು, ದಲಿತ ನಾಗರಿಕ ಸಮಿತಿಯ ಅಧ್ಯಕ್ಷ ಪುರಹಳ್ಳಿ ಜಿ.ಯಲ್ಲಪ್ಪ ಇತರರಿದ್ದರು.
* ಸಬ್ರಿಜಿಸ್ಟ್ರಾರ್ ಕಚೇರಿ ಆರಂಭ
ವೇಮಗಲ್ -ಕುರುಗಲ್ ಪಟ್ಟಣ ಪಂಚಾಯಿತಿ ದೊಡ್ಡದಾಗಿ ಬೆಳೆಯುತ್ತಿದ್ದು ಈ ಭಾಗದಲ್ಲಿ ಹಲವಾರು ಕುಟುಂಬಗಳು ಬಡ ಪರಿಸ್ಥಿತಿಯಲ್ಲಿ ಬದುಕುತ್ತಿವೆ. ಇವರಿಗೆ ಮನೆಗಳನ್ನು ನಿರ್ಮಿಸುವ ಕೆಲಸ ಮತ್ತು ಸಬ್ ರಿಜಿಸ್ಟ್ರಾರ್ ಕಚೇರಿ ತೆರೆದು ಅನುಕೂಲವಾಗುವ ರೀತಿ ಶಾಸಕರು ಮಾಡಬೇಕು ಹಾಗೂ ಚೌಡದೇನಹಳ್ಳಿ, ಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಲ್ಲಿ ಕಳೆದ 5ವರ್ಷಗಳಿಂದ ಚುನಾವಣೆ ನಡೆದಿಲ್ಲದೇ ಅಭಿವೃದ್ಧಿ ಆಗುತ್ತಿಲ್ಲ. ಶೀಘ್ರ ಚುನಾವಣೆ ನಡೆಸಿ ಗ್ರಾಮಗಳನ್ನು ಪ್ರಗತಿಯತ್ತ ಕೊಂಡೊಯ್ಯಲು ಸರ್ಕಾರದ ಜತೆ ರ್ಚಿಚಿಸಬೇಕು ಎಂದು ವಿಧಾನ ಪರಿಷತ್ ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಮನವಿ ಮಾಡಿದರು.
* ನಾಲಿಗೆ-ಮಿದುಳಿಗೆ ಸಂಪರ್ಕ ಕಡಿತ
ಬಿಜೆಪಿ ಸರ್ಕಾರದಲ್ಲಿ ಕೋಲಾರ ವಿಧಾನಸಭಾ ಕ್ಷೇತ್ರಕ್ಕೆ 25 ಕೋಟಿ ರೂ. ಅನುದಾನ ತಂದು ಗುತ್ತಿಗೆದಾರರ ಬಳಿ ಮಾಜಿ ಸಚಿವ ವರ್ತೂರ್ ಪ್ರಕಾಶ್ ಶೇ.25 ಕಮಿಷನ್ ಪಡೆದಿದ್ದರು ಎಂಬ ಮಾತನ್ನು ಗುತ್ತಿಗೆದಾರರೇ ನನ್ನ ಬಳಿ ಹೇಳಿಕೊಂಡಿದ್ದಾರೆ. ನನ್ನ ಬಗ್ಗೆ ಕೀಳಾಗಿ ಮಾತನಾಡುವ ಅವರ ನಾಲಿಗೆ&ಮಿದುಳಿಗೆ ಸಂಪರ್ಕ ಕಡಿತವಾಗಿದ್ದರಿಂದ ಅಸಂಬದ್ಧ ಹೇಳಿಕೆ ನೀಡಿದ್ದಾರೆ ಎಂದು ಕೊತ್ತೂರು ಜಿ.ಮಂಜುನಾಥ್ ತಿರುಗೇಟು ನೀಡಿದರು.
ಪ್ರತಿ ತಿಂಗಳು ಸಾವಿರಾರು ಕೋಟಿ ವರಮಾನ ಬರುತ್ತಿದೆ, ಸರ್ಕಾರದಿಂದ ಅನುದಾನ ತಂದು ಕಮಿಷನ್ ಪಡೆಯಬೇಕಾದ ಅನಿವಾರ್ಯತೆ ನನಗಿಲ್ಲ. ಸಿದ್ದರಾಮಯ್ಯ ಅವರನ್ನು ಚುನಾವಣಾ ಸಂದರ್ಭದಲ್ಲಿ ಮನಸೋ ಇಚ್ಛೆ ಮಾತನಾಡಿ ಈಗ ತಲೆಕೆಟ್ಟು ಬದುಕಲು ಹಣವಿಲ್ಲದೆ ಹುಚ್ಚನ ರೀತಿ ಮಾತನಾಡುತ್ತಿದ್ದಾರೆ ಎಂದು ಛೇಡಿಸಿದರು.