

ಬೆಂಗಳೂರು:ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಬೂಸ್ಟ್ ನೀಡಲು ಕೇಂದ್ರ ಸರ್ಕಾರ ಜಾರಿ ಮಾಡಿರುವ ರ‌್ಯಾಂಪ್ ಯೋಜನೆಗೆ ಈ ಬಾರಿ ಕರ್ನಾಟಕಕ್ಕೆ 118.72 ಕೋಟಿ ರೂ. ದೊರೆತಿದ್ದು, ರಾಜ್ಯ ಸರ್ಕಾರ ತನ್ನ ಪಾಲಿನ 29.25 ಕೋಟಿ ರೂ. ವಿನಿಯೋಗಿಸುತ್ತಿದೆ.
ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸುವ ಮತ್ತು ವೇಗಗೊಳಿಸುವ ಉದ್ದೇಶದಿಂದ ಈ ಯೋಜನೆ ಜಾರಿಯಲ್ಲಿದ್ದು, ಪ್ರೋತ್ಸಾಹಿಸಲು ಆರ್ಥಿಕ ನೆರವು ನೀಡಲಾಗುತ್ತಿದೆ.
ವಿಶ್ವಬ್ಯಾಂಕ್ ನೆರವಿನೊಂದಿಗೆ ಯೋಜನೆ ಜಾರಿಗೊಳಿಸಲಾಗುತ್ತಿದ್ದು, ರಾಷ್ಟ್ರ ಮತ್ತು ರಾಜ್ಯಮಟ್ಟದಲ್ಲಿ ಸಂಸ್ಥೆಗಳನ್ನು ಬಲಪಡಿಸುವುದು ತಂತ್ರಜ್ಞಾನ ವೇದಿಕೆಗಳನ್ನು ನಿರ್ಮಿಸುವುದು ಮತ್ತು ಸಂಯೋಜಿಸುವುದು ಈ ಯೋಜನೆಯ ಭಾಗವಾಗಿದೆ.
ಆತ್ಮನಿರ್ಭರ್ ಭಾರತ್ ಮಿಷನ್‌ಗೆ ಪೂರಕವಾಗಿ ನಾವೀನ್ಯತೆ, ಕಲ್ಪನೆಯನ್ನು ಪ್ರೋತ್ಸಾಹಿಸುವುದು, ಗುಣಮಟ್ಟದ ಮಾನದಂಡಗಳನ್ನು ಅಭಿವೃದ್ಧಿಪಡಿಸುವುದು, ಉತ್ತಮ ಅಭ್ಯಾಸಗಳು ಹಾಗೂ ಪ್ರಕ್ರಿಯೆಗಳನ್ನು ಸುಧಾರಿಸುವುದು, ಮಾರುಕಟ್ಟೆ ವ್ಯಾಪ್ತಿ ಹಿಗ್ಗಿಸುವುದು, ಹೊಸ ವ್ಯಾಪಾರ ಮತ್ತು ಉದ್ಯಮಶೀಲತೆ ಉತ್ತೇಜಿಸುವ ಕೆಲಸ ಮಾಡಲು ಈ ಅನುದಾನ ಬಳಸಿಕೊಳ್ಳಲಾಗುತ್ತದೆ.
ಈಗಾಗಲೇ ಗುಜರಾತ್, ಮಹಾರಾಷ್ಟ್ರ, ಪಂಜಾಬ್, ರಾಜಸ್ಥಾನ, ತಮಿಳುನಾಡು ರಾಜ್ಯಗಳಲ್ಲಿ ಅನುಷ್ಠಾನಗೊಂಡಿದ್ದು, ಕರ್ನಾಟಕದಲ್ಲಿ ಇನ್ನಷ್ಟೇ ಅನುಷ್ಠಾನಕ್ಕೆ ಬರುತ್ತಿದೆ. ಯೋಜನೆ ಅವಧಿ ಐದು ವರ್ಷಗಳಾಗಿರುತ್ತದೆ.
ಯೋಜನೆ ಸ್ವರೂಪ ಮತ್ತು ಅಗತ್ಯ ಇರುವ ಹಣಕಾಸಿನ ನೆರವನ್ನು ಗಮನಿಸಿ ಹಣ ಬಿಡುಗಡೆ ಮಾಡಲಾಗುತ್ತದೆ. ಅದೇ ರೀತಿ ಮರು ಪಾವತಿ ಅವಧಿ ಕೂಡ ನಿದಿಯಾಗುತ್ತದೆ. ಇದರ ಲಾಭ ಪಡೆಯಲು ಆನ್‌ಲೈನ್‌ನಲ್ಲಿ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬೇಕಾಗುತ್ತದೆ. ನೆರವು ಪಡೆಯಲು ಕೊಲ್ಯಾಟರಲ್ (ಮೇಲಾಧಾರ) ಅಗತ್ಯ ಇರುವುದಿಲ್ಲ. ಪ್ರಕ್ರಿಯೆ ಶುಲ್ಕವೂ ಇರುವುದಿಲ್ಲ.