ಸೈಲೆಂಟಾಗಿ ಕೆಲ್ಸ ಮುಗ್ಸಿದ ಬಾಲಕ; ಬೆಚ್ಚಿ ಬಿದ್ರು ಬ್ಯಾಂಕ್ ಅಧಿಕಾರಿಗಳು!

11 yr old_stole_20_lakh
Published on

ಜಿಂದ್​: ಹರಿಯಾಣದಲ್ಲಿ ಹುಬ್ಬೇರಿಸುವಂಥಾ ಕಳ್ಳತನ ನಡೆದಿದೆ. ಬಾಲಕನಿಗೆ ಕೇವಲ ಹನ್ನೊಂದೇ ವರ್ಷ. ಬ್ಯಾಂಕ್ ಒಳಕ್ಕೆ ಹೋಗಿ ಯಾರಿಗೂ ಅನುಮಾನ ಬಾರದಂತೆ ಆತ ಸಹಜವಾಗಿಯೇ 20 ಲಕ್ಷ ರೂಪಾಯಿ ಎತ್ಕೊಂಡು ಹೋಗಿದ್ದ! ಸಿಸಿಟಿವಿ ದೃಶ್ಯ ನೋಡಿದ ಬಳಿಕವಷ್ಟೇ ಬ್ಯಾಂಕ್ ಅಧಿಕಾರಿಗಳಿಗೆ ಗೊತ್ತಾಗಿದ್ದು! ಸಿಸಿಟಿವಿ ದೃಶ್ಯವೀಕ್ಷಣೆಗೆ ಮೇಲಿನ ವಿಡಿಯೋ ಕ್ಲಿಕ್ಕಿಸಿ.

ಪಂಜಾಬ್​ ನ್ಯಾಷನಲ್ ಬ್ಯಾಂಕಿನ ಜಿಂದ್ ಶಾಖೆಯಲ್ಲಿ ಸೋಮವಾರ ಈ ಕಳವು ನಡೆದಿದೆ. ಸಿಸಿಟಿವಿ ಕ್ಯಾಮರಾ ಸೆರೆ ಹಿಡಿದ ದೃಶ್ಯದಲ್ಲಿ 11 ವರ್ಷದ ಬಾಲಕ ಹಣ ಎತ್ತಿಕೊಂಡು ಹೋಗುತ್ತಿರುವ ದೃಶ್ಯ ದಾಖಲಾಗಿದೆ. ಆರಂಭದಲ್ಲಿ ಬಾಲಕ ಮತ್ತು ಇನ್ನೋರ್ವ ಇಬ್ಬರೂ ಬೆಂಚ್​ನಲ್ಲಿ ಕಾಯುತ್ತಿದ್ದರು. ಸ್ವಲ್ಪ ಹೊತ್ತಿನ ಬಳಿಕ ಬಾಲಕ ಎದ್ದು ಬ್ಯಾಂಕ್​ ನ ಕ್ಯಾಷ್ ಕೌಂಟರ್ ಒಳಕ್ಕೆ ಹೋಗುವ ದೃಶ್ಯ ಕಾಣುತ್ತದೆ. ನಂತರ ಆತ ಚೀಲದಲ್ಲೇನೋ ತುಂಬಿಕೊಂಡು ಹೋಗುತ್ತಿರುವುದು ಎರಡು ಸಿಸಿಟಿವಿಗಳಲ್ಲಿ ಕಾಣುತ್ತದೆ. ಬಾಲಕ ಒಳ ಹೋಗುವಾಗ, ಅಲ್ಲಿಂದ ಹೊರ ಬರುವಾಗ ಆತನ ನಡವಳಿಕೆ ಎಲ್ಲೂ ಬ್ಯಾಂಕ್ ನೌಕರರ ಗಮನಸೆಳೆದಿಲ್ಲ. ಆರೋಪಿಗಳನ್ನು ಮನೋವರ್ ಮತ್ತು ರವೀಂದರ್ ಎಂದು ಗುರುತಿಸಲಾಗಿದೆ.

ಬ್ಯಾಂಕ್ ಮ್ಯಾನೇಜರ್ ವಿಶ್ವಜಿತ್ ಸಿನ್ಹಾ ನೀಡಿರುವ ದೂರಿನ ಪ್ರಕಾರ, ಬಾಲಕ 5 ಲಕ್ಷ ರೂಪಾಯಿಯ ನಾಲ್ಕು ಕಟ್ಟುಗಳನ್ನು ಕೊಂಡೊಯ್ದಿದ್ದಾನೆ. ಸೋಮವಾರವಾದ್ದರಿಂದ ಗ್ರಾಹಕದಟ್ಟಣೆ ಇದ್ದ ಸಂದರ್ಭದಲ್ಲಿ ಈ ಕಳವು ನಡೆದಿದೆ. ಕ್ಯಾಷಿಯರ್ ಕ್ಯಾಬಿನ್​ನಿಂದ ಹೊರಗೆ ಹೋಗುವಾಗ ಲಾಕ್ ಮಾಡುವುದು ಮರೆತಿದ್ದ. ಪೊಲೀಸರು ಇದರ ಆಧಾರದಲ್ಲಿ ಪ್ರಕರಣ ದಾಖಲಿಸಿದ್ದು ತನಿಖೆ ಆರಂಭಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net