'ನೀವು ನನಗೆ ವಿಷ ಕೊಡ್ತೀರೋ, ಹಾಲು ಕೊಡ್ತೀರೋ ನಿಮಗೆ ಬಿಟ್ಟದ್ದು...'

hd-kumarswamy-1
Published on

ತುಮಕೂರು: ''ಶಿರಾ ತಾಲೂಕಿನ ಜನರೇ, ನನಗೆ ವಿಷ ಕೊಡ್ತೀರೋ, ಹಾಲು ಕೊಡ್ತೀರೋ ಅದರು ನಿಮಗೆ ಬಿಟ್ಟದ್ದು'' ಎಂದು ಮಾಜಿ ಸಿಎಂ ಎಚ್​.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

ಶಿರಾ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ರಂಗೇರಿದೆ. ಕಳೆದ ಚುನಾವಣೆಯಲ್ಲಿ ಈ ಕ್ಷೇತ್ರ ಜೆಡಿಎಸ್​ ಪಾಲಾಗಿತ್ತು. ಶಾಸಕ ಸತ್ಯನಾರಾಯಣ ಅವರ ಅಕಾಲಿಕ ನಿಧನದಿಂದಾಗಿ ಉಪ ಚುನಾವಣೆ ನಡೆಯುತ್ತಿದೆ. ಈ ಕ್ಷೇತ್ರವನ್ನು ಮತ್ತೆ ಗೆಲ್ಲುವುದು ಜೆಡಿಎಸ್​ಗೆ ಪ್ರತಿಷ್ಠೆಯ ಪ್ರತೀಕವೂ ಹೌದು, ಬಿಜೆಪಿ-ಕಾಂಗ್ರೆಸ್​ ಕೂಡ ಶಿರಾ ಮೇಲೆ ಕಣ್ಣಿಟ್ಟಿವೆ. ಹಾಗಾಗಿ ಭಾವನಾತ್ಮಕ ಅಸ್ತ್ರ ಪ್ರಯೋಗಿಸುತ್ತಿರುವ ಎಚ್​ಡಿಕೆ, ''ಶಿರಾ ನಾವು ಗೆದ್ದ ಕ್ಷೇತ್ರವೂ ಹೌದು, ಆಪರೇಷನ್ ಕಮಲ ಮೆಟ್ಟಿ ಉಳಿಸಿಕೊಂಡ ಕ್ಷೇತ್ರವೂ ಹೌದು. ಸತ್ಯಣ್ಣ ಇದ್ದಿದ್ದರೆ ಈ ಕ್ಷೇತ್ರ ನಮ್ಮಲ್ಲೇ ಇರುತ್ತಿತ್ತು. ನ್ಯಾಯಬದ್ಧವಾಗಿ ಶಿರಾವನ್ನು ನಾವೇ ಗೆಲ್ಲಬೇಕಾದ ಕ್ಷೇತ್ರ'' ಎಂದು ಸರಣಿ ಟ್ವೀಟ್​ ಮಾಡಿದ್ದರು. ಅಲ್ಲದೆ ಬುಧವಾರ ಶಿರಾದಲ್ಲಿ ನಡೆದ ಜೆಡಿಎಸ್​ ಕಾರ್ಯಕರ್ತರ ಸಭೆಯಲ್ಲೂ ಇದೇ ಅಸ್ತ್ರ ಬಳಸಿದ ಎಚ್​ಡಿಕೆ, ''ನನಗೆ ವಿಷ ಕೊಡ್ತಿರೋ, ಹಾಲು ಕೊಡ್ತಿರೋ ನಿಮಗೆ ಬಿಟ್ಟಿದ್ದು. ಇಲ್ಲಿಂದ ಹೊಸ ರಾಜಕೀಯ ಆರಂಭವಾಗಬೇಕು. ಈ ಚುನಾವಣೆಯಲ್ಲಿ ನಾವು ಗೆಲ್ಲಲೇ ಬೇಕು. ಕಾರ್ಯಕರ್ತರ ಅಂತಿಮ ಅಭಿಪ್ರಾಯ ಪಡೆದು ಇನ್ನೆರಡು ದಿನದಲ್ಲಿ ಟಿಕೆಟ್ ಫೈನಲ್ ಮಾಡ್ತೀವಿ'' ಎಂದರು.

''ಕಾಂಗ್ರೆಸ್ ಮತ್ತು ಬಿಜೆಪಿ ಬಹಳ ವೇಗದಲ್ಲಿ ಹೊರಟಿವೆ. ಸಭೆ ಸಮಾರಂಭ ನಡೆಸಿವೆ. ಕೆಲ ಕಾರಣಗಳಿಂದ ಜೆಡಿಎಸ್​ ಕಾರ್ಯಕರ್ತರ ಸಭೆ ನಡೆಸಲು ಆಗಿಲ್ಲ. ಈ ಕಾರಣಕ್ಕೆ ಕಾರ್ಯಕರ್ತರು ಎದೆಗುಂದಬೇಕಿಲ್ಲ. ಈ ಕ್ಷೇತ್ರದಲ್ಲಿ ಕಾಡುಗೊಲ್ಲರು ನನಗೆ ಸತ್ಕಾರ ನೀಡಿದ್ದಾರೆ. ನಾನು ಗ್ರಾಮ ವಾಸ್ತವ್ಯ ಮಾಡಿದ್ದು ಕಾಡು ಗೊಲ್ಲರ ಮನೆಯಲ್ಲಿ. ಶಿರಾ ಕ್ಷೇತ್ರದಲ್ಲಿ ಗೊಲ್ಲ ಸಮುದಾಯದ ಮತ ನಿರ್ಣಾಯಕ'' ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net