

ಕೊಚ್ಚಿ: ಮಂಗಳವಾರ ಬೆಳಗ್ಗೆ ಕೊಚ್ಚಿಯ ಅಲುವಾ ಮಣಪ್ಪುರಂ ಪ್ರದೇಶದಲ್ಲಿ ತರಬೇತುದಾರ ಸಾಜಿ ವಾಲಸ್ಸೆರಿಲ್ ಅವರು ಕೈಗೊಂಡಿದ್ದ ಸ್ವಿಮ್ಮಿಂಗ್ ತರಗತಿಯನ್ನು ವೀಕ್ಷಿಸಲು ಸಾಕಷ್ಟು ಮಂದಿ ನೆರೆದಿದ್ದರು. ಎಲ್ಲರ ಮುಖದಲ್ಲೂ ಒಂದು ರೀತಿಯ ಉತ್ಸಾಹದ ಚಿಲುಮೆ ಆ ಕ್ಷಣಕ್ಕೆ ಆವರಿಸಿತ್ತು. ಅದಕ್ಕೆ ಕಾರಣ ಓರ್ವ ಅಂಧ ವಿದ್ಯಾರ್ಥಿ ಎಂದರೆ ನೀವು ನಂಬಲೇಬೇಕು.
ಅಂಧ ಶಾಲೆಯ ವಿದ್ಯಾರ್ಥಿಯಾದ 11 ವರ್ಷದ ಮನೋಜ್ ಸಾಹಸವನ್ನು ಕಣ್ತುಂಬಿಕೊಳ್ಳಲು ಜನ ಕಿಕ್ಕಿರಿದು ತುಂಬಿದ್ದರು. ಹುಟ್ಟಿನಿಂದಲೇ ಕುರುಡನಾಗಿರುವ ಮನೋಜ್, ಅದ್ವೈತ್ ಆಶ್ರಮದಿಂದ ಅಲುವಾ ಮಣಪ್ಪುರಂವರೆಗೆ ಇರುವ ಪರಿಯಾರ್ ನದಿಯನ್ನು ಅಡ್ಡಲಾಗಿ ಈಜಲು ಸಿದ್ಧತೆ ಮಾಡಿಕೊಂಡಿದ್ದ.
ಅಂಧನಾಗಿದ್ದರೂ ನಾನಿದನ್ನು ಸಾಧಿಸುತ್ತೇನೆ ಎಂದು ಬಲವಾದ ನಂಬಿಕೆ ಮನೋಜ್ ಮುಖದಲ್ಲಿ ಕಾಣುತ್ತಿತ್ತು. ಅಲ್ಲದೇ ತನ್ನ ಸಾಹಸದ ಬಗ್ಗೆ ಮಾತನಾಡಿದ ಮನೋಜ್, ಮೊದಲ ಬಾರಿಗೆ ಪರಿಯಾರ್ ನದಿ ಸುತ್ತ ಈಜಾಡಿದ ನವನೀತ್ ಎಂಬ ಹಿರಿಯ ಅಂಧ ವಿದ್ಯಾರ್ಥಿಯೇ ನನಗೆ ಸ್ಪೂರ್ತಿ ಎಂದು ಹೇಳಿದ್ದಾನೆ. ನವನೀತ್ ಕೂಡ ಸಾಜಿ ಅವರ ವಿದ್ಯಾರ್ಥಿಯೇ. ಮನೋಜ್ ಕೂಡ ಒಂದು ತಿಂಗಳಿನಿಂದ ಸಾಜಿ ಬಳಿ ತರಬೇತಿ ಪಡೆದಿದ್ದಾನೆ.
ಮಂಗಳವಾರ ಬೆಳಗ್ಗೆ 8 ಗಂಟೆಗೆ ಅದ್ವೈತ ಆಶ್ರಮದ ಮುಖ್ಯಸ್ಥ ಸ್ವಾಮಿ ಸ್ವರೂಪಾನಂದ ಸ್ವಾಮಿಕಲ್ ಎಂಬುವರು ಸಾಹಸ ಕಾರ್ಯಕ್ಕೆ ಚಾಲನೆ ನೀಡಿದರು. ಈ ವೇಳೆ ಮನೋಜ್ಗೆ ಶಿಕ್ಷಕರು ಮತ್ತು ಸ್ನೇಹಿತರು ಹಾಗೂ ಪ್ರೇಕ್ಷಕರು ಗುರಿ ತಲುಪಲು ಚಿಯರ್ ಅಪ್ ಮಾಡಿದರು. ಶಾಲೆಯ ಬ್ಯಾಂಡ್ ತಂಡವು ಕೂಡ ನಿರಂತರವಾಗಿ ನುಡಿಸುವ ಮೂಲಕ ಚಿಯರ್ ಅಪ್ ಮಾಡಿದರು. ಅಂತಿಮವಾಗಿ ಮನೋಜ್ 8:45ಕ್ಕೆ ಗುರಿಯನ್ನು ಮುಟ್ಟಿದರು. ಬಳಿಕ ಮನೋಜ್ನನ್ನು ಚಿಯರ್ ಸಪ್ ಮೂಲಕವೇ ಬರಮಾಡಿಕೊಂಡರು.
ಹುಟ್ಟಿನಿಂದ ಅಂಧನಾದ ಮನೋಜ್ ಸಾಹಸ ಕಾರ್ಯವನ್ನು ಎಲ್ಲರು ಕೊಂಡಾಡಿ ಬೆನ್ನುತಟ್ಟಿದರು. ಆತನ ಆತ್ಮಸ್ಥೈರ್ಯಕ್ಕೆ ಎಲ್ಲರೂ ಸಲಾಂ ಹೊಡೆದರು. (ಏಜೆನ್ಸೀಸ್)