

ನ್ಯೂಯಾರ್ಕ್: ಒಂದೇ ಒಂದು ಹಾವಿನಿಂದಾಗಿ ಅಮೆರಿಕದಲ್ಲಿ ಸುಮಾರು 11 ಸಾವಿರಕ್ಕೂ ಹೆಚ್ಚು ಮಂದಿ ತೊಂದರೆ ಅನುಭವಿಸಿದ ಅಪರೂಪದ ಘಟನೆ ನಡೆದಿದೆ. ಅಷ್ಟಕ್ಕೂ ಹಾವಿನಿಂದಾದ ತೊಂದರೆ ಏನು? ಹನ್ನೊಂದು ಸಾವಿರ ಮಂದಿಗೆ ಹೇಗೆ ತೊಂದರೆ ಕೊಟ್ಟಿತು? ಅನ್ನೋ ಪ್ರಶ್ನೆ ನಿಮ್ಮ ತಲೆಯಲ್ಲಿ ಮೂಡಿರಬಹುದು, ಅದಕ್ಕೆ ಉತ್ತರ ಇಲ್ಲಿದೆ.
ಅಮೆರಿಕದಲ್ಲಿ ರಾತ್ರಿ ಏಕಾಏಕಿ ವಿದ್ಯುತ್ ಪೂರೈಕೆ ಸ್ಥಗಿತಗೊಂಡು ಸುಮಾರು 11,700 ಮಂದಿ ವಿದ್ಯುತ್ ಇಲ್ಲದೆ ತೊಂದರೆ ಅನುಭವಿಸಿದರು. ಕಿಲ್ನ್ ಕ್ರೀಕ್, ಸೆಂಟ್ರಲ್ ನ್ಯೂಪೋರ್ಟ್ ನ್ಯೂಸ್, ಕ್ರಿಸ್ಟೋಫರ್ ನ್ಯೂಪೋರ್ಟ್ ಯುನಿವರ್ಸಿಟಿ ಪ್ರದೇಶಗಳು ವಿದ್ಯುತ್ ಸಮಸ್ಯೆಯನ್ನು ಎದುರಿಸಿದವು. ಈ ಅನಿರೀಕ್ಷಿತ ಘಟನೆಗೆ ಹಾವು ಕಾರಣ ಎಂದು ತಿಳಿದು ಡೊಮಿನಿಯನ್ ಎನರ್ಜಿ ಅಧಿಕಾರಿಗಳು ಒಂದು ಕ್ಷಣ ಆಶ್ಚರ್ಯಚಕಿತರಾದರು.
ಹಾವು ವಿದ್ಯುತ್ ತಂತಿಗಳ ಬಳಿ ಹೋಗಿ ದೊಡ್ಡ ವಿದ್ಯುತ್ ಉಪಕರಣವನ್ನು ಸ್ಪರ್ಶಿಸಿದ ಪರಿಣಾಮ ಪವರ್ ಕಟ್ ಆಗಿ ಸುಮಾರು 6,000 ಮನೆಗಳಿಗೆ ವಿದ್ಯುತ್ ಕಡಿತಗೊಂಡಿದೆ. ಇದರಿಂದ 11 ಸಾವಿರಕ್ಕೂ ಅಧಿಕ ಮಂದಿ ಕೆಲ ಕಾಲ ಕತ್ತಲೆಯಲ್ಲಿ ಸಮಯ ಕಳೆಯುವಂತಾಯಿತು. ಅಲ್ಲದೆ, ಸಮಸ್ಯೆಗಳನ್ನು ಸಹ ಎದುರಿಸಬೇಕಾಯಿತು. ಆದರೆ, ವಿದ್ಯುತ್ ಇಲಾಖೆ ಸಿಬ್ಬಂದಿ ತಕ್ಷಣವೇ ಸ್ಪಂದಿಸಿ ಒಂದೂವರೆ ಗಂಟೆಯೊಳಗೆ ಎಲ್ಲ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿದರು.
ಅಂದಹಾಗೆ ಈ ಈಸ್ಟರ್ನ್ ಗಾರ್ಟರ್ ಹಾವುಗಳು ವರ್ಜೀನಿಯಾದಲ್ಲಿ ಕಂಡುಬರುವ ಸಾಮಾನ್ಯ ಹಾವುಗಳಾಗಿವೆ. ಪೀಪಲ್ ಮ್ಯಾಗಜೀನ್ ಪ್ರಕಾರ ಮೇ ತಿಂಗಳಲ್ಲಿ ಈ ಹಾವುಗಳಿಂದ ನ್ಯಾಶ್ವಿಲ್ಲೆ ಬಳಿ ನಾಲ್ಕು ಬಾರಿ ವಿದ್ಯುತ್ ಕಡಿತ ಉಂಟಾಗಿದೆ. ಟೆನ್ನೆಸ್ಸೀಯ ಫ್ರಾಂಕ್ಲಿನ್‌ನಲ್ಲಿರುವ ಹೆನ್‌ಪೆಕ್ ಸಬ್‌ಸ್ಟೇಷನ್‌ಗೆ ಅನೇಕ ಹಾವುಗಳು ಪ್ರವೇಶಿಸಿದ ಪರಿಣಾಮ ವಿದ್ಯುತ್ ಸಮಸ್ಯೆ ಎದುರಾದವು.
ಈ ಹಾವುಗಳು ಸಬ್‌ಸ್ಟೇಷನ್‌ಗಳು ಮತ್ತು ವಿದ್ಯುತ್ ಉಪಕರಣಗಳನ್ನು ಪ್ರವೇಶಿಸಿ ಉಪಕರಣಗಳಿಗೆ ಹಾನಿಯನ್ನುಂಟುಮಾಡುತ್ತವೆ. ಇಂತಹ ಸಾಕಷ್ಟು ಪ್ರಕರಣಗಳು ಈಗಾಗಲೇ ವರದಿಯಾಗಿವೆ. (ಏಜೆನ್ಸೀಸ್)