ಕಸಾಪ ಬೈಲಾ ಪರಿಷ್ಕರಣೆಗೆ 11 ಸದಸ್ಯರ ಸಮಿತಿ: ನ್ಯಾ. ಅರಳಿ ನಾಗರಾಜ್ ಅಧ್ಯಕ್ಷತೆ; ಅಧ್ಯಕ್ಷ ಸ್ಥಾನ ಸ್ಪರ್ಧೆ ಠೇವಣಿ 1 ಲಕ್ಷ ರೂ. ನಿಗದಿಗೆ ನಿರ್ಧಾರ

Kasapa
Published on

ಬೆಂಗಳೂರು: ಅನೇಕ ದಶಕಗಳ ಹಿಂದೆ ರಚನೆಯಾಗಿ ಸಣ್ಣ ಪುಟ್ಟ ಬದಲಾವಣೆಗಳನ್ನಷ್ಟೆ ಕಂಡಿರುವ ಕನ್ನಡ ಸಾಹಿತ್ಯ ಪರಿಷತ್ತಿನ ನಿಬಂಧನೆಗಳನ್ನು (ಬೈಲಾ) ಆಮೂಲಾಗ್ರ ಬದಲಾವಣೆ ಮಾಡುವ ನಿಟ್ಟಿನಲ್ಲಿ ನ್ಯಾ. ಅರಳಿ ನಾಗರಾಜ್ ಅಧ್ಯಕ್ಷತೆಯಲ್ಲಿ 11 ಜನರ ಸಮಿತಿಯನ್ನು ಕಸಾಪ ಅಧ್ಯಕ್ಷ ಡಾ. ಮಹೇಶ ಜೋಶಿ ರಚಿಸಿದ್ದಾರೆ. ಕಸಾಪ ಸದಸ್ಯತ್ವ ಶುಲ್ಕವನ್ನು ಅರ್ಧ ಕಡಿತ ಮಾಡುವುದು, ಒಬ್ಬರು ಒಂದೇ ಬಾರಿ ಚುನಾವಣೆ ಸ್ಪರ್ಧೆಯಂತಹ ಅನೇಕ ಮಹತ್ವದ ಅಂಶಗಳು ಹೊಸ ಬೈಲಾದಲ್ಲಿ ಸೇರ್ಪಡೆ ಆಗುವ ನಿರೀಕ್ಷೆಯಿದೆ.

11 ಸದಸ್ಯರ ಸಮಿತಿ: ಕನ್ನಡದಲ್ಲಿ ಆದೇಶ ನೀಡಿದ ನ್ಯಾಯಮೂರ್ತಿ ಎಂದೇ ನ್ಯಾ.ಅರಳೀ ನಾಗರಾಜ್ ಪ್ರಸಿದ್ಧರು. ಅವರ ನೇತೃತ್ವದ ಸಮಿತಿಯಲ್ಲಿ ಬೆಂಗಳೂರು ಪ್ರಧಾನ ಜಿಲ್ಲಾ ಮತ್ತು ಸತ್ರ ನಿವೃತ್ತ ನ್ಯಾಯಾಧೀಶ ಶಿವಲಿಂಗೇಗೌಡ, ಕಸಾಪ ಚುನಾವಣಾಧಿಕಾರಿಯಾಗಿದ್ದ ಐಎಎಸ್ ಅಧಿಕಾರಿ ಜಿ.ಎಂ. ಗಂಗಾಧರಸ್ವಾಮಿ, ವಿಶೇಷ ಚುನಾವಣಾಧಿಕಾರಿಯಾಗಿದ್ದ ಕೆಎಎಸ್ ಅಧಿಕಾರಿ ಎಸ್.ಟಿ. ಮೋಹನರಾಜು, ಮಂಡ್ಯ ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಮುದ್ದೇಗೌಡ, ಸಹಕಾರ ಇಲಾಖೆಯ ಅಶ್ವತ್ಥಯ್ಯ, ಕಸಾಪ ಸರಸ್ವತೀ ಗ್ರಂಥಭಂಡಾರ ಮಾಜಿ ಸದಸ್ಯ ಪಂಪಯ್ಯ ಸ್ವಾಮಿ, ವಕೀಲ ಸಿ.ವಿ. ಸುಧೀಂದ್ರ, ಧಾರವಾಡ ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಲಿಂಗರಾಜ ಅಂಗಡಿ, ಮಂಡ್ಯ ಜಿಲ್ಲಾ ಕಸಾಪ ಅಧ್ಯಕ್ಷ ರವಿಕುಮಾರ ಚಾಮಲಾಪುರ ಹಾಗೂ ಸಹಕಾರಿ ತಜ್ಞ ಆರ್.ಪಿ. ರವಿಶಂಕರ್ ಇರಲಿದ್ದಾರೆ.

ತಿಂಗಳಲ್ಲಿ ವರದಿ: ಸಮಿತಿ ರಚನೆಗೆ ಡಿ.4ರಂದು ನಡೆದ ಮೊದಲ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ಕಸಾಪ ಆಡಳಿತಾತ್ಮಕ ಹಾಗೂ ಚುನಾವಣಾ ಸುಧಾರಣೆ ಕೈಗೊಳ್ಳಲು ನಿಬಂಧನೆಗಳಿಗೆ ತಿದ್ದುಪಡಿ ತರಬೇಕಿದೆ. ಈ ನಿಟ್ಟಿನಲ್ಲಿ ಡಿಸೆಂಬರ್ ಅಂತ್ಯದೊಳಗೆ ಸಲಹೆಯನ್ನು ನೀಡುವಂತೆ ತಿಳಿಸಲಾಗಿದೆ. ಕಾರ್ಯದಲ್ಲಿ ವಿಳಂಬವಾಗದಂತೆ ಡಿ.9ಕ್ಕೆ ಸಮಿತಿ ಮೊದಲ ಸಭೆಯನ್ನು ನಿಗದಿ ಮಾಡಲಾಗಿದೆ. ಹಾವೇರಿಯಲ್ಲಿ ಫೆ.6ಕ್ಕೆ ವಿಶೇಷ ಸರ್ವಸದಸ್ಯರ ಸಭೆಯನ್ನು ಆಯೋಜಿಸಲಾಗುವುದು, ಅಲ್ಲಿ ಬೈಲಾ ತಿದ್ದುಪಡಿಗೆ ಅನುಮೋದನೆ ಪಡೆಯಲಾಗುತ್ತದೆ ಎಂದು ಡಾ. ಮಹೇಶ ಜೋಶಿ ತಿಳಿಸಿದ್ದಾರೆ.

ಠೇವಣಿ 1 ಲಕ್ಷಕ್ಕೆ ಏರಿಕೆ!: ಕಸಾಪ ಚುನಾವಣೆಯಲ್ಲಿ ಕೇಂದ್ರ ಸ್ಥಾನಕ್ಕೆ ಸ್ಪರ್ಧಿಸಲು ಕೇವಲ 1,000 ರೂ. ಇದ್ದ ಠೇವಣಿ ಮೊತ್ತವನ್ನು 1 ಲಕ್ಷ ರೂ.ಗೆ ಹೆಚ್ಚಳ ಮಾಡಲು ಬೈಲಾದಲ್ಲಿ ತಿದ್ದುಪಡಿ ತರಲು ಕಾರ್ಯಕಾರಿ ಸಮಿತಿ ಅನುಮೋದನೆ ನೀಡಿದೆ. ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ 50 ಸಾವಿರ ರೂ. ಹಾಗೂ ಮುಂದಿನ ಚುನಾವಣೆಯಿಂದ ತಾಲೂಕು ಮಟ್ಟದಲ್ಲೂ ನಡೆಯುವ ಚುನಾವಣೆಗೆ ಸ್ಪರ್ಧಿಸಲು 25 ಸಾವಿರ ರೂ. ನಿಗದಿ ಮಾಡಲಾಗುತ್ತದೆ. ಒಮ್ಮೆ ಒಂದು ಹಂತದ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದರೆ ಅದೇ ಸ್ಥಾನಕ್ಕೆ ಮತ್ತೊಮ್ಮೆ ಸ್ಪರ್ಧಿಸದಂತೆಯೂ ತಿದ್ದುಪಡಿ ತರಲು ನಿರ್ಧಾರ ಮಾಡಲಾಗಿದೆ.

ಸಂಪುಟ ದರ್ಜೆಗೆ ಪತ್ರ: ಈಗಾಗಲೆ ಕಸಾಪ ಅಧ್ಯಕ್ಷರ ಪ್ರವಾಸದಲ್ಲಿ ಸ್ಥಳೀಯ ಅಧಿಕಾರಿಗಳು ಶಿಷ್ಟಾಚಾರ ಪಾಲನೆ ಮಾಡುವ ಪದ್ಧತಿ ಇತ್ತು. ಇನ್ನು ಮುಂದೆ ಕಸಾಪ ಅಧ್ಯಕ್ಷರಿಗೆ ಸಂಫುಟ ದರ್ಜೆಯ ಸ್ಥಾನಮಾನ ನೀಡಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನೀಲ್ ಕುಮಾರ್ ಪತ್ರ ಬರೆದು ಕೋರಿದ್ದಾರೆ. ಕನ್ನಡಿಗರ ಏಕೈಕ ಪ್ರಾತಿನಿಧಿಕ ಸಂಸ್ಥೆಯಾದ ಕಸಾಪ ಅಧ್ಯಕ್ಷರನ್ನು ಗಣ್ಯ ಅತಿಥಿಗಳೆಂದು ಪರಿಗಣಿಸಬೇಕೆಂದು ಪತ್ರದಲ್ಲಿ ತಿಳಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net