ನ್ಯಾಯಾಂಗ ನಿಂದನೆ ಅರ್ಜಿದಾರನಿಗೆ 11 ಲಕ್ಷ ರೂ. ದಂಡ: ರಿಜಿಸ್ಟ್ರಾರ್ ಜನರಲ್ ವಿರುದ್ಧವೇ ಅರ್ಜಿ ಸಲ್ಲಿಕೆ, ಹೈಕೋರ್ಟ್ ಕೆಂಗಣ್ಣು

Judicial
Published on

ಬೆಂಗಳೂರು: ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ವಿರುದ್ಧವೇ 11 ಸಿವಿಲ್ ನ್ಯಾಯಾಂಗ ನಿಂದನೆ ದಾವೆ ಹೂಡಿದ್ದ ವ್ಯಕ್ತಿಯೊಬ್ಬರಿಗೆ 11 ಲಕ್ಷ ರೂ. ದಂಡ ವಿಧಿಸಿರುವ ಹೈಕೋರ್ಟ್, ಇದು ನ್ಯಾಯಾಂಗವನ್ನೇ ಬೆದರಿಸುವ ಪ್ರಯತ್ನದಂತಿದೆ. ಇಂಥದ್ದನ್ನು ನೋಡಿಕೊಂಡು ನ್ಯಾಯಾಲಯ ಮೌನವಾಗಿರಲು ಸಾಧ್ಯವಿಲ್ಲ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

ಉಡುಪಿ ಜಿಲ್ಲೆ ಕಾರ್ಕಳ ಮೂಲದ ಜಿತೇಂದ್ರ ಕುಮಾರ್ ರಾಜನ್ ಸಲ್ಲಿಸಿದ್ದ ಸಿವಿಲ್ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ನಡೆಸಿದ ಹಿರಿಯ ನ್ಯಾಯಮೂರ್ತಿ ಬಿ. ವೀರಪ್ಪ ಹಾಗೂ ನ್ಯಾಯಮೂರ್ತಿ ಎಂ.ಜಿ. ಉಮಾ ಅವರಿದ್ದ ಪೀಠ, ಒಂದೊಂದು ಅರ್ಜಿಗೆ ತಲಾ 1 ಲಕ್ಷ ರೂ.ಗಳಂತೆ 11 ಲಕ್ಷ ರೂ. ದಂಡ ವಿಧಿಸಿದೆ. ದಂಡದ ಮೊತ್ತವನ್ನು 8 ವಾರಗಳಲ್ಲಿ ರಾಜ್ಯ ವಕೀಲರ ಪರಿಷತ್​ಗೆ ಪಾವತಿಸಬೇಕು. ನಿಗದಿತ ಸಮಯದೊಳಗೆ ದಂಡ ಪಾವತಿಸದಿದ್ದರೆ ಜಿಲ್ಲಾಧಿಕಾರಿಗಳು ದಂಡ ವಸೂಲಿಗೆ ಕ್ರಮ ಕೈಗೊಳ್ಳಬೇಕು. ದಂಡದ ಮೊತ್ತ ಪಾವತಿಯಾಗದಿದ್ದರೆ ವಕೀಲರ ಪರಿಷತ್ ಅರ್ಜಿದಾರರ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಬಹುದು ಎಂದು ಹೈಕೋರ್ಟ್ ಆದೇಶದಲ್ಲಿ ಹೇಳಿದೆ.ಅನಗತ್ಯವಾಗಿ ಸಿವಿಲ್ ನ್ಯಾಯಾಂಗ ನಿಂದನೆ ದಾವೆ ಹೂಡಿ ನ್ಯಾಯಾಲಯದ ಅಮೂಲ್ಯ ಸಮಯ ಹಾಳು ಮಾಡಿದ್ದಲ್ಲದೆ ರಿಜಿಸ್ಟ್ರಾರ್ ಜನರಲ್ ವಿರುದ್ಧವೇ ದಾವೆ ಹೂಡುವ ಮೂಲಕ ಬೆದರಿಸುವ ಪ್ರಯತ್ನ ಮಾಡಲಾಗಿದೆ. ಅರ್ಜಿದಾರರ ಈ ನಡೆ ನ್ಯಾಯಾಂಗವನ್ನೇ ಅಣಕಿಸಿದಂತಿದೆ. ಆದ್ದರಿಂದ, ಅವರ ವಿರುದ್ಧ ಸ್ವಯಂಪ್ರೇರಿತ ಕ್ರಿಮಿನಲ್ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಬೇಕು ಎಂದು ರಿಜಿಸ್ಟ್ರಾರ್ ಜನರಲ್​ಗೆ ಹೈಕೋರ್ಟ್ ನಿರ್ದೇಶಿಸಿದೆ.

ಸಾಮಾನ್ಯವಾಗಿ ‘ಪಾರ್ಟಿ ಇನ್ ಪರ್ಸನ್’ (ಖುದ್ದು ವಾದ ಮಂಡಿಸುವ ವ್ಯಕ್ತಿ) ಅರ್ಜಿಗಳಲ್ಲಿ ನ್ಯಾಯಾಲಯ ತಾಳ್ಮೆ ವಹಿಸುತ್ತದೆ. ಅದನ್ನೇ ದೌರ್ಬಲ್ಯವೆಂದು ತಿಳಿದರೆ ಸಹಿಸಲು ಸಾಧ್ಯವಿಲ್ಲ ಎಂದು ಪೀಠ ನುಡಿದಿದೆ. ಪ್ರಕರಣವೊಂದಕ್ಕೆ ಸಂಬಂಧಿಸಿ ಅರ್ಜಿದಾರ ಸಲ್ಲಿಸಿದ್ದ ತಕರಾರು ಅರ್ಜಿಗಳನ್ನು 2021ರ ಮೇ 19ರಂದು ವಜಾಗೊಳಿಸಿದ್ದ ಏಕಸದಸ್ಯ ನ್ಯಾಯಪೀಠ, 1 ಲಕ್ಷ ರೂ. ದಂಡ ವಿಧಿಸಿತ್ತಲ್ಲದೆ ದಂಡದ ಮೊತ್ತ ವಸೂಲಿ ಮಾಡುವಂತೆ ರಿಜಿಸ್ಟಾರ್ ಜನರಲ್​ಗೆ ನಿರ್ದೇಶಿಸಿತ್ತು. ಆದರೆ, ಅರ್ಜಿದಾರ ದಂಡ ಪಾವತಿಸದೆ ರಿಜಿಸ್ಟ್ರಾರ್ ಜನರಲ್ ಟಿ.ಜಿ. ಶಿವಶಂಕರೇಗೌಡ ವಿರುದ್ಧವೇ ಸಿವಿಲ್ ನ್ಯಾಯಾಂಗ ನಿಂದನೆ ಅರ್ಜಿಗಳನ್ನು ಸಲ್ಲಿಸಿದ್ದರು.

ಪ್ರತಿಗ್ರಾಮದಲ್ಲೂ ಗೋಶಾಲೆ ಆರಂಭಿಸಿ

ರಾಜ್ಯದಲ್ಲಿ ಜಿಲ್ಲೆಗೊಂದು ಗೋಶಾಲೆ ಆರಂಭಿಸಿದರೆ ಸಾಲದು, ಪ್ರತಿ ಗಾಮದಲ್ಲೂ ಗೋಶಾಲೆ ಸ್ಥಾಪಿಸಬೇಕು ಎಂದು ಸರ್ಕಾರಕ್ಕೆ ಹೈಕೋರ್ಟ್ ಮೌಖಿಕ ಸೂಚನೆ ನೀಡಿದೆ. ರಾಜ್ಯದ ಪ್ರತಿ ತಾಲೂಕಿನಲ್ಲಿ ಗೋಶಾಲೆ ಆರಂಭಿಸಲು ಹಾಗೂ ಹಾಲಿ ಇರುವ ಗೋಶಾಲೆಗಳಿಗೆ ಸೂಕ್ತ ಪ್ರಮಾಣದಲ್ಲಿ ಮೇವು, ನೀರು ಮತ್ತು ಜಾಗ ಒದಗಿಸಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಹೈಕೊರ್ಟ್ ಕಾನೂನು ಸೇವೆಗಳ ಸಮಿತಿ ಸಲ್ಲಿಸಿರುವ ಪಿಐಎಲ್ ಅನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಸರ್ಕಾರದ ಪರ ವಕೀಲರು, ರಾಜ್ಯದ ಪ್ರತಿ ಜಿಲ್ಲೆಯಲ್ಲೂ ಗೋಶಾಲೆ ಅರಂಭಿಸಲು ಸರ್ಕಾರ ಆದೇಶಿಸಿದೆ ಎಂದು ತಿಳಿಸಿದರು. ಅದನ್ನು ಆಕ್ಷೇಪಿಸಿದ ಪೀಠ, ಜಿಲ್ಲೆಗೊಂದು ಗೋಶಾಲೆ ತೆರೆದರೆ ಸಾಲದು, ಗ್ರಾಮ ಮಟ್ಟದಲ್ಲೂ ಗೋಶಾಲೆ ಆರಂಭಿಸಬೇಕು. ಇತರ ರಾಜ್ಯಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಅಲ್ಲಿನ ಸರ್ಕಾರಗಳು ಪ್ರತಿ ಗ್ರಾಮದಲ್ಲಿ ಗೋಶಾಲೆ ಆರಂಭಿಸಿವೆ ಎಂದು ಹೇಳಿತು.

ಸುತ್ತೋಲೆ ವಿಚಾರ ಗ್ರಾಹಕರ ಗಮನಕ್ಕೂ ತರಬೇಕು

ಸಾಲದ ಮೇಲಿನ ಬಡ್ಡಿ ದರ ಕಡಿತಗೊಳಿಸಿರುವ ಸುತ್ತೋಲೆಯನ್ನು ಬ್ಯಾಂಕ್​ಗಳು ನೋಟಿಸ್ ಬೋರ್ಡ್​ನಲ್ಲಿ ಅಂಟಿಸಿದ ಮಾತ್ರಕ್ಕೆ ವಿಚಾರವನ್ನು ಗ್ರಾಹಕರಿಗೆ ತಲುಪಿಸಿದಂತಾಗುವುದಿಲ್ಲ. ಅದನ್ನು ಗ್ರಾಹಕರ ಗಮನಕ್ಕೂ ತರಬೇಕು ಎಂದು ಹೈಕೋರ್ಟ್ ಆದೇಶಿಸಿದೆ. ಸುತ್ತೋಲೆ ಹೊರಡಿಸಿದ ದಿನಾಂಕದಿಂದ ಅನ್ವಯವಾಗುವಂತೆ ಬಡ್ಡಿದರ ಕಡಿತದ ಪ್ರಯೋಜನವನ್ನು ಗ್ರಾಹಕರಿಗೆ ನೀಡುವಂತೆ ಏಕಸದಸ್ಯ ಪೀಠ ಹೊರಡಿಸಿದ್ದ ಆದೇಶ ಪ್ರಶ್ನಿಸಿ ರಾಷ್ಟ್ರೀಕೃತ ಬ್ಯಾಂಕ್ ಒಂದು ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿರುವ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಹಾಗೂ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಪೀಠ ಈ ಆದೇಶ ಮಾಡಿದೆ. ಬಿ.ಎಸ್. ಶೇಖರ್ ಎಂಬುವರು ಸಲ್ಲಿಸಿದ್ದ ತಕರಾರು ಅರ್ಜಿ ಸಂಬಂಧ ಏಕಸದಸ್ಯ ಪೀಠ ನೀಡಿದ್ದ ಆದೇಶ ಎತ್ತಿಹಿಡಿದಿರುವ ವಿಭಾಗೀಯ ಪೀಠ, ಮೇಲ್ಮನವಿದಾರ ಬ್ಯಾಂಕ್ 2010ರಲ್ಲಿ ಯಾವ ದಿನಾಂಕದಿಂದ ಬಡ್ಡಿ ದರ ಕಡಿತವಾಗುತ್ತದೆಂದು ಸುತ್ತೋಲೆ ಹೊರಡಿಸಿತ್ತೋ ಆ ದಿನಾಂಕದಿಂದಲೇ ಅನ್ವಯವಾಗುವಂತೆ ಶೇಖರ್ ಅವರ ಗೃಹಸಾಲದ ಮೇಲಿನ ಬಡ್ಡಿ ಕಡಿತಗೊಳಿಸಿ ಅದರ ಪ್ರಯೋಜನವನ್ನು ಅವರಿಗೆ ವರ್ಗಾಯಿಸಬೇಕು ಎಂದು ಆದೇಶಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net