ಸೇತುವೆಯಿಂದ ಕೆಳಗೆ ಬಿದ್ದ ಟ್ರ್ಯಾಕ್ಟರ್​ ಟ್ರಾಲಿ: 8 ಅಪ್ರಾಪ್ತರು ಸೇರಿ 11 ಮಂದಿ ದುರ್ಮರಣ

Tractor trolley (1)
Published on

ಲಖನೌ: ಟ್ರ್ಯಾಕ್ಟರ್​ ಟ್ರಾಲಿ ಸೇತುವೆ ಕೆಳಗೆ ಬಿದ್ದ ಪರಿಣಾಮ 11 ಮಂದಿ ಮೃತಪಟ್ಟು, ಅನೇಕ ಮಂದಿ ಗಾಯಗೊಂಡಿರುವ ದಾರುಣ ಘಟನೆ ಉತ್ತರ ಪ್ರದೇಶದ ಶಹಜಹಾನ್​ಪುರದಲ್ಲಿ ನಿನ್ನೆ (ಏಪ್ರಿಲ್​ 15) ನಡೆದಿದೆ.

ಗಾಯಾಳುಗಳನ್ನು ರಕ್ಷಣೆ ಮಾಡಿ ಸ್ಥಳೀಯರ ಸಹಾಯದಿಂದ ಹತ್ತಿರದ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಮೃತ 11 ಮಂದಿಯಲ್ಲಿ ಇಬ್ಬರು ಮಹಿಳೆಯರು, ಓರ್ವ ವ್ಯಕ್ತಿ ಮತ್ತು 8 ಮಂದಿ ಅಪ್ರಾಪ್ತರು ಸೇರಿದ್ದಾರೆ. ಸುಮಾರು 29 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಶಹಜಹಾನ್​ಪುರದ ಬಿರ್ಸಿಂಗ್​ಪುರ್​ ಗ್ರಾಮದಲ್ಲಿರುವ ಗರ್ರಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದ್ದ ಸೇತುವೆ ಮೇಲಿಂದ ಟ್ರ್ಯಾಕ್ಟರ್​ ಟ್ರಾಲಿ ನದಿಗೆ ಬಿದ್ದು ಅವಘಡ ಸಂಭವಿಸಿದೆ. ಪೊಲೀಸರು ಮಾಹಿತಿ ತಿಳಿದ ತಕ್ಷಣ ಘಟನಾ ಸ್ಥಳಕ್ಕೆ ತೆರಳಿ ರಕ್ಷಣಾ ಕಾರ್ಯಾಚರಣೆ ನಡೆಸಿದರು.

ಉತ್ತರ ಪ್ರದೇಶd ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಘಟನೆಯ ಬಗ್ಗೆ ಅತೀವ ದುಃಖ ವ್ಯಕ್ತಪಡಿಸಿದ್ದಾರೆ ಮತ್ತು ಮೃತರ ಸಂಬಂಧಿಕರಿಗೆ ತಲಾ 2 ಲಕ್ಷ ರೂಪಾಯಿ ಮತ್ತು ಗಾಯಗೊಂಡವರಿಗೆ ತಲಾ 50,000 ರೂಪಾಯಿಗಳನ್ನು ಘೋಷಿಸಿದ್ದಾರೆ. ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಮುಖ್ಯಮಂತ್ರಿಗಳು ಆಡಳಿತಾಧಿಕಾರಿಗಳಿಗೆ ಸೂಚಿಸಿದ್ದಾರೆ.

ಜನರು ಗರ್ರಾ ನದಿಯಿಂದ ಭಗವತ್ ಕಥೆಗಾಗಿ ನೀರು ತರಲು ನದಿಗೆ ಹೋಗುತ್ತಿದ್ದರು. ಈ ವೇಳೆ ಅಪಘಾತ ಸಂಭವಿಸಿದೆ ಎಂದು ಶಹಜಹಾನ್‌ಪುರ ಪೊಲೀಸರು ತಿಳಿಸಿದ್ದಾರೆ. ವಾಹನದಲ್ಲಿ ಸುಮಾರು 40 ಕ್ಕೂ ಹೆಚ್ಚು ಜನರಿದ್ದರು ಎಂದು ತಿಳಿದುಬಂದಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net