೧೧ ಮಂದಿ ಡ್ರಗ್ ಪೆಡ್ಲರ್‌ಗಳ ಬಂಧನ: ೧.೨೧ ಕೋಟಿ ರೂ.ಬೆಲೆಬಾಳುವ ೧೯೦ ಕೆ.ಜಿ. ಗಾಂಜಾ ಜಪ್ತಿ

arrested
Published on

ಬೆಂಗಳೂರು: ನಗರ ಪೊಲೀಸರು ವಿಶೇಷ ಕಾರ್ಯಾಚರಣೆ ಕೈಗೊಂಡು ಒಟ್ಟು ೧೧ ಮಂದಿಯನ್ನು ಬಂಧಿಸಿ ೧.೨೧ ಕೋಟಿ ರೂ.ಬೆಲೆಬಾಳುವ ೧೯೦ ಕೆ.ಜಿ. ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.

ಶ್ರೀಕಾಂತ್, ಮುನಿರಾಜು, ಚಂದ್ರಕಾಂತ್, ಬಾಲಕೃಷ್ಣ ಸೇರಿದಂತೆ ಒಟ್ಟು ೧೧ ಮಂದಿಯನ್ನು ಬಂಧಿಸಲಾಗಿದೆ. ಆರೋಪಿಗಳು ಯಲಹಂಕ, ಅಶೋಕ್ ನಗರ, ಬಾಣಸವಾಡಿ, ಅಮೃತಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗಾಂಜಾ ಮಾರುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಯಲಹಂಕ :

ಆಂಧ್ರಪ್ರದೇಶದಿಂದ ಕಡಿಮ ಬೆಲೆಗೆ ಮಾದಕ ವಸ್ತು ಗಾಂಜಾವನ್ನು ಖರೀದಿಸಿಕೊಂಡು ಬಂದು ನಗರದಲ್ಲಿ ಮಾರಾಟ ಮಾಡುತ್ತಿದ್ದ ನಾಲ್ವರನ್ನು ಯಲಹಂಕ ಠಾಣೆ ಪೊಲೀಸರು ಬಂಧಿಸಿ ೭೪.೫೩ ಲಕ್ಷರೂ. ಮೌಲ್ಯದ ೯೩ ಕೆ.ಜಿ.ಗಾಂಜಾ, ಟ್ರಕ್, ಕಾರು ಮತ್ತು ನಾಲ್ಕು ಮೊಬೈಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ನಿಟ್ಟೆ ಮೀನಾಕ್ಷಿ ಕಾಲೇಜು ಕಡೆಗೆ ಹೋಗುವ ರಸ್ತೆಯ ಪಕ್ಕದಲ್ಲಿ ಟ್ರಕ್ ನಿಲ್ಲಿಸಿಕೊಂಡು ಗಾಂಜಾ ಮಾರಾಟ ಮಾಡಲಾಗುತ್ತಿದೆ ಎಂಬ ಮಾಹಿತಿ ಮೇರೆಗೆ ಇನ್‌ಸ್ಪೆಕ್ಟರ್ ಕೃಷ್ಣಮೂರ್ತಿ ಮತ್ತು ಸಿಬ್ಬಂದಿ ತಂಡ ಸ್ಥಳದ ಮೇಲೆ ದಾಳಿ ಮಾಡಿ ನಾಲ್ವರನ್ನು ಬಂಧಿಸಿ ಗಾಂಜಾ ವಶಪಡಿಸಿಕೊಂಡಿದೆ.

ಅಶೋಕ್ ನಗರ:

ಗಾಂಜಾ ಮಾರಾಟ ಮಾಡುತ್ತಿದ್ದ ನಾಲ್ವರನ್ನು ಅಶೋಕನಗರ ಠಾಣೆ ಪೊಲೀಸರು ಬಂಧಿಸಿ ೩೦.೬೮ ಲಕ್ಷ ರೂ. ಮೌಲ್ಯದ ೭೬ ಕೆ.ಜಿ ೭೦೦ ಗ್ರಾಂ ಗಾಂಜಾ, ೧ ಬೊಲೇರೋ ವಾಹನ, ೩ ಮೊಬೈಲ್ ಫೋನ್ ವಶಪಡಿಸಿಕೊಂಡಿದ್ದಾರೆ. ಬನ್ನೇರುಘಟ್ಟದಿಂದ ಹೊಸೂರು ಕಡೆಗೆ ಹೋಗುವ ರಸ್ತೆಯಲ್ಲಿರುವ ಕ್ರಿಶ್ಚಿಯನ್ ಸ್ಮಶಾನದ ಮುಂಭಾಗವಿರುವ ಸಾರ್ವಜನಿಕ ರಸ್ತೆಯಲ್ಲಿ ಮೂವರು ಅಪರಿಚಿತ ವ್ಯಕ್ತಿಗಳು ಬೊಲೇರೋ ಪಿಕ್‌ಅಪ್ ವಾಹನಲ್ಲಿ ಗಾಂಜಾವನ್ನು ಮಾರಾಟ ಮಾಡುತ್ತಿರುವ ಮಾಹಿತಿ ಲಭಿಸಿದೆ. ಈ ಮಾಹಿತಿಯನ್ನು ಆಧರಿಸಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಎನ್.ಡಿ.ಪಿ.ಎಸ್ ಕಾಯ್ದೆಯಡಿ ಪ್ರಕರಣವನ್ನು ದಾಖಲಿಸಿ, ಮೂವರನ್ನು ಬಂಧಿಸುವಲ್ಲಿ ಇನ್‌ಸ್ಪೆಕ್ಟರ್ ರವಿ ಮತ್ತು ಸಿಬ್ಬಂದಿ ತಂಡ ಯಶಸ್ವಿಯಾಗಿದೆ.

ಬಾಣಸವಾಡಿ:

ಗಾಂಜಾ ಮಾರಾಟ ಮತ್ತು ಖರೀದಿಸಲು ಯತ್ನಿಸಿದ ಮೂವರನ್ನು ಬಾಣಸವಾಡಿ ಠಾಣೆ ಪೊಲೀಸರು ಬಂಧಿಸಿ ೧೫ ಲಕ್ಷ ಮೌಲ್ಯದ ೧೫ ಕೆ.ಜಿ ೧೨೦ ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ.

ಕನಕದಾಸ ಲೇಔಟ್ ಕೆ.ಎಚ್.ಬಿ ಕ್ವಾಟ್ರಸ್, ಆರ್.ಎಸ್ ಪಾಳ್ಯದ ಮನೆಯೊಂದರಲ್ಲಿ ಇಬ್ಬರು ವ್ಯಕ್ತಿಗಳು ಗಾಂಜಾವನ್ನು ಮಾರಾಟ ಮಾಡುವ ಸಲುವಾಗಿ ಇಟ್ಟುಕೊಂಡಿದ್ದು, ಅದನ್ನು ಖರೀದಿಸಲು ವ್ಯಕ್ತಿಯೊಬ್ಬ ಹೋಗುತ್ತಿರುವ ಬಗ್ಗೆ ಮಾಹಿತಿ ಆಧರಿಸಿ ಪೊಲೀಸರು ಸ್ಥಳಕ್ಕೆ ಧಾವಿಸಿ, ಮೂವರನ್ನು ಗಾಂಜಾ ಸಮೇತ ವಶಕ್ಕೆ ಪಡೆದಿದ್ದಾರೆ. ಆಂದ್ರ ಪ್ರದೇಶದ ರಾಜಾಮಂಡ್ರಿಯಿಂದ ಕಡಿಮೆ ಬೆಲೆಗೆ ಗಾಂಜಾವನ್ನು ಖರೀದಿ ಮಾಡಿಕೊಂಡು ಬಂದು, ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವುದಾಗಿ ವಿಚಾರಣ ವೇಳೆ ಆರೋಪಿಗಳು ತಿಳಿಸಿದ್ದಾರೆ.ಇನ್‌ಸ್ಪೆಕ್ಟರ್ ಅರುಣ್ ಸಾಳುಂಕೆ ಮತ್ತು ಸಿಬ್ಬಂದಿ ತಂಡ ಈ ಕಾರ್ಯಾಚರಣೆ ನಡೆಸಿದೆ.

ಅಮೃತಹಳ್ಳಿ :

ಚಿರಂಜೀವಿ ಲೇಔಟ್‌ನ ವಿಕ್ಟೋರಿಯ ಚರ್ಚ್ ಬಳಿ ಇರುವ ಖಾಲಿ ಜಾಗದಲ್ಲಿ ನಿಷೇದಿತ ಮಾದಕ ವಸ್ತು ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿ ೧.೫ ಲಕ್ಷ ರೂ.ಮೌಲ್ಯದ ೫ ಕೆ.ಜಿ ೧೭೦ ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net