

ತೆಲಂಗಾಣ: ( Heart Attack ) ಹತ್ತನೇ ತರಗತಿ ವಿದ್ಯಾರ್ಥಿಯೊಬ್ಬ ವಾಲಿಬಾಲ್ ಆಡುತ್ತಿದ್ದ ವೇಳೆ ನೆಲಕ್ಕೆ ಕುಸಿದು ಬಿದ್ದಿದ್ದಾನೆ. ಕೂಡಲೇ ವಿದ್ಯಾರ್ಥಿಯನ್ನು ಆಸ್ಪತ್ರೆಗೆ ಸಾಗಿಸಿದ ವೈದ್ಯರು ಮೃತಪಟ್ಟಿರುವುದನ್ನು ದೃಢಪಡಿಸಿದ್ದಾರೆ. ವನಪರ್ತಿಯಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ.
ಪೆದ್ದಮಂದಡಿ ಮಂಡಲದ ಬಲಿಜಪಲ್ಲಿ ಗ್ರಾಮದ ZPHS ಶಾಲೆಯ ಆವರಣದಲ್ಲಿ ಆಯೋಜಿಸಿದ್ದ ಸಿಎಂ ಕಪ್ ಸ್ಪರ್ಧೆಯಲ್ಲಿ ಪಾಮಿರೆಡ್ಡಿಪಲ್ಲಿ ಮುಂದಿರತಾಂಡದ ಸಾಯಿ ಪುನೀತ್ (15) ಭಾಗವಹಿಸಿದ್ದರು. ಪುನೀತ್ ಬಲಿಜಪ್ಪಳ್ಳಿ ಝೆಡ್‌ಪಿ ಪ್ರೌಢಶಾಲೆಯಲ್ಲಿ 10ನೇ ತರಗತಿ ಓದುತ್ತಿದ್ದಾನೆ. ಶನಿವಾರ ಬೆಳಗ್ಗೆಯಿಂದಲೇ ಸಹ ವಿದ್ಯಾರ್ಥಿಗಳೊಂದಿಗೆ ಭಾಗವಹಿಸಿದ್ದ. ಏನಾಯಿತೋ ಗೊತ್ತಿಲ್ಲ ಸಂಜೆ 4 ಗಂಟೆ ಸುಮಾರಿಗೆ ಏಕಾಏಕಿ ಕುಸಿದು ಬಿದ್ದಿದ್ದಾನೆ.
ಇದನ್ನು ಗಮನಿಸಿದ ಶಾಲಾ ಸಿಬ್ಬಂದಿ ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಪುನೀತ್ನನ್ನು ಪರೀಕ್ಷಿಸಿದ ವೈದ್ಯರು ಬಾಲಕ ಪುನೀತ್ ಹೃದಯಾಘಾತದಿಂದ ಅದಾಗಲೇ ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ. ಸಿಎಂ ಕಪ್ ಸ್ಪರ್ಧೆಯಲ್ಲಿ ವಿದ್ಯಾರ್ಥಿಯೊಬ್ಬ ಮೃತಪಟ್ಟಿರುವುದು ಗ್ರಾಮದಲ್ಲಿ ದುಃಖದ ಛಾಯೆ ಮೂಡಿಸಿದೆ.
ಮೃತರ ಕುಟುಂಬಕ್ಕೆ ಬೆಂಬಲ ನೀಡುವಂತೆ ವಿದ್ಯಾರ್ಥಿ ಸಂಘಟನೆಗಳು ಜಿಲ್ಲಾ ಕೇಂದ್ರ ಹಾಗೂ ಬಲಿಜಪಲ್ಲಿ ಗ್ರಾಮದಲ್ಲಿ ರಸ್ತೆಗಿಳಿದು ಪ್ರತಿಭಟನೆ ನಡೆಸಿದರು. ಪ್ರತಿಕ್ರಿಯಿಸಿದ ಶಾಸಕ ಮೇಘಾ ರೆಡ್ಡಿ, ಸರ್ಕಾರದ ವತಿಯಿಂದ ನೆರವು ನೀಡುವುದಾಗಿ ಭರವಸೆ ನೀಡಿದರು.