ಪೊಲೀಸ್ ಇಲಾಖೆಗೆ ಬಲ: 1095 ಎಸ್​ಐ, ಕಾನ್​ಸ್ಟೆಬಲ್​ಗಳ ನೇರ ನೇಮಕಕ್ಕೆ ಅನುಮತಿ

Police (6)
Published on

ಬೆಂಗಳೂರು: ದೇಶದ ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಪೊಲೀಸರ ಸಂಖ್ಯೆ ತೀರಾ ಕಡಿಮೆ ಇದೆ. ಹೀಗಾಗಿ ಪೊಲೀಸ್ ಇಲಾಖೆಗೆ ಬಲ ತುಂಬುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಹೆಜ್ಜೆಯಿಟ್ಟಿದ್ದು, ಕಲ್ಯಾಣ ಕರ್ನಾಟಕ ವೃಂದ ಹಾಗೂ ರಾಜ್ಯ ವೃಂದ ಎರಡಕ್ಕೂ ಅನ್ವಯವಾಗುವಂತೆ 1095 ಸಬ್ ಇನ್​ಸ್ಪೆಕ್ಟರ್​ಗಳು ಹಾಗೂ ಕಾನ್​ಸ್ಟೆಬಲ್​ಗಳ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಿಕೊಳ್ಳಲು ಅನುಮತಿ ಕೊಟ್ಟಿದೆ. ಇದೇ ವೇಳೆ ಸಿಲಿಕಾನ್ ಸಿಟಿ ಬೆಂಗಳೂರಿಗೆ ಸೀಮಿತವಾಗಿ ಹೊಸದಾಗಿ 2454 ಹುದ್ದೆಗಳನ್ನು ಸೃಜಿಸಲು ಕೂಡ ರಾಜ್ಯ ಸರ್ಕಾರ ಹಸಿರು ನಿಶಾನೆ ತೋರಿಸಿದೆ. ಪ್ರಸಕ್ತ 2023-24ರಲ್ಲಿ 100 ಸಬ್ ಇನ್​ಸ್ಪೆಕ್ಟರ್, 450 ಪೊಲೀಸ್ ಕಾನ್​ಸ್ಟೆಬಲ್ ಹುದ್ದೆಗಳು ಹಾಗೂ 2024-25ನೇ ಸಾಲಿನಲ್ಲಿ 95 ಸಬ್ ಇನ್​ಸ್ಪೆಕ್ಟರ್​ಗಳು, 450 ಕಾನ್​ಸ್ಪೆಬಲ್ ಹುದ್ದೆಗಳನ್ನು ನೇರ ನೇಮಕಾತಿಗೆ ಸರ್ಕಾರ ಸಹಮತಿ ನೀಡಿದೆ. ಎರಡು ಹಂತದಲ್ಲಿ ನೇಮಕಾತಿ ಪ್ರಕ್ರಿಯೆಯನ್ನು ನಡೆಸುವಂತೆ ಸರ್ಕಾರ ಸೂಚನೆ ನೀಡಿದೆ. ಇದರೊಂದಿಗೆ ಅಧಿಕಾರಿ ಮತ್ತು ಸಿಬ್ಬಂದಿಗಳ ಕೊರತೆ ಎದುರಿಸುತ್ತಿರುವ ಪೊಲೀಸ್ ಇಲಾಖೆಗೆ ಹೊಸಬರ ಬಲ ಬರುವುದರ ಜತೆಗೆ ಪೊಲೀಸ್ ಆಗಬೇಕೆಂದು ತಯಾರಿ ನಡೆಸುತ್ತಿರುವ ರಾಜ್ಯದ ಲಕ್ಷಾಂತರ ಯುವಕ-ಯುವತಿಯರಲ್ಲಿ ಹೊಸ ಆಶಾಭಾವನೆ ಮೂಡಿಸಿದೆ.

ಹೊಸದಾಗಿ 6 ಮಹಿಳಾ ಠಾಣೆ: ರಾಜಧಾನಿ ಬೆಂಗಳೂರಲ್ಲಿ ಸುಗಮ ಸಂಚಾರ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಹೊಸದಾಗಿ 5 ಸಂಚಾರ ಪೊಲೀಸ್ ಠಾಣೆಗಳು ಹಾಗೂ 6 ಮಹಿಳಾ ಠಾಣೆಗಳನ್ನು ಆರಂಭಿಸಲು ಆದೇಶ ನೀಡಲಾಗಿದೆ. ಹೊಸ ನೇಮಕಾತಿ ಹಾಗೂ ಹೊಸ ಹುದ್ದೆಗಳ ಸೃಜನೆಯಲ್ಲಿ ಕೆಳಹಂತದ ಸಿಬ್ಬಂದಿ ನೇಮಕಕ್ಕೆ ಹೆಚ್ಚಿನ ಒತ್ತು ಕೊಡಲಾಗಿದೆ.

ಬೆಂಗಳೂರಲ್ಲಿ ಮಹಿಳೆಯರ ಮೇಲಿನ ಅಪರಾಧ ಪ್ರಕರಣಗಳು ದಿನೇ ದಿನೆ ಹೆಚ್ಚುತ್ತಿವೆ. ಸದ್ಯ 2 ಮಹಿಳಾ ಪೊಲೀಸ್ ಠಾಣೆಗಳು ಮಾತ್ರವೇ ಕಾರ್ಯನಿರ್ವಹಿಸುತ್ತಿವೆ. ಹೀಗಾಗಿ ಮಹಿಳೆಯರಿಗೆ ಸಂಬಂಧಿಸಿದ ಅಪರಾಧ ಪ್ರಕರಣ ಗಳನ್ನು ಕಾನೂನು ಸುವ್ಯವಸ್ಥೆ ವಿಭಾಗದ ಠಾಣೆಗಳಲ್ಲೇ ದಾಖಲಿಸುವ ಪರಿಸ್ಥಿತಿ ಇದೆ. ಪುರುಷ ಸಿಬ್ಬಂದಿ ಬಳಿ ಮಹಿಳೆ ಯರು ದೂರು ಹೇಳಿಕೊಳ್ಳಲು ಹಿಂದೇಟು ಹಾಕುತ್ತಾರೆಂಬ ಕಾರಣಕ್ಕೆ ಹೊಸದಾಗಿ 6 ಮಹಿಳಾ ಠಾಣೆಗಳನ್ನು ಸ್ಥಾಪಿಸಲು ಸರ್ಕಾರ ಅನುಮತಿ ನೀಡಿದೆ.

ಇದರಿಂದ ಹೊಸದಾಗಿ 246 ಹುದ್ದೆಗಳು ಸೃಷ್ಟಿಯಾಗಲಿವೆ. 2023-24 ಮತ್ತು 2024-25ನೇ ಸಾಲಿನಲ್ಲಿ ಎರಡು ಹಂತದಲ್ಲಿ ನೇರ ನೇಮಕಾತಿ ಹಾಗೂ ಹೊಸ ಹುದ್ದೆಗಳ ಸೃಜನೆಗೆ ಸರ್ಕಾರ ಸೂಚನೆ ಕೊಟ್ಟಿದೆ. 2023-24ನೇ ಸಾಲಿನಲ್ಲಿ 4 ತಿಂಗಳ ಉಳಿದಿರುವುದರಿಂದ ಶೀಘ್ರದಲ್ಲೇ 550 ಪಿಎಸ್​ಐ ಹಾಗೂ ಕಾನ್​ಸ್ಟೆಬಲ್​ಗಳ ಹುದ್ದೆಗಳ ನೇರ ನೇಮಕಾತಿ ಪ್ರಕ್ರಿಯೆ ಆರಂಭವಾಗಲಿದೆ. ಜತೆಗೆ ಬೆಂಗಳೂರಿಗೆ ಅನ್ವಯವಾಗುವಂತೆ 1226 ಹೊಸ ಹುದ್ದೆಗಳ ಸೃಜನೆ ಪ್ರಕ್ರಿಯೆಗೆ ಚಾಲನೆ ಸಿಗಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಪೊಲೀಸ್ ವ್ಯವಸ್ಥೆ ಬಲಪಡಿಸಲು ಸರ್ಕಾರ ಬದ್ಧವಾಗಿದೆ. ಬೆಂಗಳೂರಿನ ಪೊಲೀಸ್ ವ್ಯವಸ್ಥೆಯನ್ನು ಗಟ್ಟಿಗೊಳಿಸುವ ಸಲುವಾಗಿ ಹೊಸದಾಗಿ 2454 ಹುದ್ದೆಗಳನ್ನು ಸೃಜಿಸಲು ಒಪ್ಪಿಗೆ ನೀಡಲಾಗಿದೆ. ಈ ನಿಟ್ಟಿನಲ್ಲಿ ಹೊಸ ಹುದ್ದೆಗಳನ್ನು ಸೃಜಿಸಲು, 5 ಸಂಚಾರ ಠಾಣೆ ಮತ್ತು 6 ಮಹಿಳಾ ಠಾಣೆಗಳನ್ನು ಸ್ಥಾಪಿಸಲು ಆದೇಶ ನೀಡಲಾಗಿದೆ. | ಸಿದ್ದರಾಮಯ್ಯ, ಮುಖ್ಯಮಂತ್ರಿ

ಪಾರಂಪರಿಕ ಕಟ್ಟಡ: ಬೆಂಗಳೂರಿನ ಇನ್​ಫ್ಯಾಂಟ್ರಿ ರಸ್ತೆಯಲ್ಲಿರುವ 148 ವರ್ಷಗಳ ಹಳೆಯ ಪೊಲೀಸ್ ಆಯುಕ್ತರ ಕಚೇರಿಯನ್ನು ಪಾರಂಪರಿಕ ಕಟ್ಟಡವನ್ನಾಗಿಸಿ ಸಂರಕ್ಷಿಸಲು ನಿರ್ಧರಿಸಲಾಗಿದೆ. ಕಟ್ಟಡದ ನವೀಕರಣ ಮಾಡಲು 3 ಕೋಟಿ ರೂ. ಅನ್ನು ಸರ್ಕಾರ ಒದಗಿಸಿದೆ.

ಸಿಸಿಬಿ ಬಲವರ್ಧನೆ: ಬೆಂಗಳೂರು ಅಪರಾಧ ಘಟಕ (ಸಿಸಿಬಿ)ಕ್ಕೆ 231 ಹೊಸ ಹುದ್ದೆಗಳನ್ನು ಸೃಜಿಸಲಾಗಿದೆ. ಇದರಿಂದ ನಗರದಲ್ಲಿ ನಡೆಯುವ ಗಂಭೀರ ಅಪರಾಧ ಪ್ರಕರಣಗಳನ್ನು ಪತ್ತೆ ಮತ್ತು ನಿಯಂತ್ರಣ ಮಾಡಲು ಸಿಸಿಬಿಗೆ ಮತ್ತಷ್ಟು ಬಲ ನೀಡಲು ಒತ್ತು ಕೊಡಲಾಗಿದೆ. ಇದೇ ವೇಳೆ 2016-17ನೇ ಸಾಲಿನ ಬಜೆಟ್​ನಲ್ಲಿ ಸಿಎಆರ್ ಪಶ್ಚಿಮ ಹಾಗೂ ಪೂರ್ವ ಘಟಕಗಳ ಸ್ಥಾಪನೆ ಬಗ್ಗೆ ಘೋಷಣೆ ಮಾಡಲಾಗಿತ್ತು. ಈಗಾಗಲೇ ಪಶ್ಚಿಮ ಘಟಕ ಸ್ಥಾಪನೆ ಆಗಿದ್ದು, ಉಳಿದಂತೆ ಸಿಎಆರ್ ಪೂರ್ವ ವಿಭಾಗ ಸೃಜಿಸಲು ಸರ್ಕಾರ ಅನುಮೋದನೆ ನೀಡಿ 60.64 ಕೋಟಿ ರೂ. ಒದಗಿಸಿದೆ.

ಬೆಂಗಳೂರಿಗೆ ಹೊಸ ಹುದ್ದೆ ಯಾವಾಗ, ಎಷ್ಟು?

2023-24ನೇ ಸಾಲಿನಲ್ಲಿ ಚಿಕ್ಕಬಾಣಾವರ ಉತ್ತರ ಸಂಚಾರ ಠಾಣೆ ಮತ್ತು ಜ್ಞಾನಭಾರತಿ ಸಂಚಾರ ಠಾಣೆ ಹಾಗೂ ಉತ್ತರ, ಕೇಂದ್ರ, ಪಶ್ಚಿಮ, ಈಶಾನ್ಯ, ಆಗ್ನೇಯ ಮತ್ತು ವೈಟ್​ಫೀಲ್ಡ್​ನಲ್ಲಿ ಮಹಿಳಾ ಠಾಣೆ ಸ್ಥಾಪಿಸಲಾಗುತ್ತದೆ. ಇದೇ ಸಾಲಿನಲ್ಲಿ 3 ಎಸಿಪಿ, 23 ಪಿಐ, 116 ಪಿಎಸ್​ಐ, 234 ಎಎಸ್​ಐ, 272 ಎಚ್​ಸಿ, 578 ಪಿಸಿ ಸೇರಿ 1226 ಹುದ್ದೆಗಳ ಸೃಜನೆಗೆ ಅನುಮತಿ ನೀಡಲಾಗಿದೆ.

2024-25ನೇ ಸಾಲಿನಲ್ಲಿ ಜೆ.ಪಿ.ನಗರ ಸಂಚಾರ ಠಾಣೆ, ಶೇಷಾದ್ರಿಪುರ ಸಂಚಾರ ಠಾಣೆ, ಸಂಜಯನಗರ ಸಂಚಾರ ಠಾಣೆ ಸ್ಥಾಪನೆ ಮಾಡಲಾಗುತ್ತದೆ. ಇದಕ್ಕೆ ಬೇಕಾದ 1 ಎಸಿಪಿ, 6 ಪಿಐ, 162 ಪಿಎಸ್​ಐ, 318 ಎಎಸ್​ಐ, 236 ಎಚ್​ಸಿ, 505 ಕಾನ್​ಸ್ಟೆಬಲ್ ಸೇರಿ 1228 ಹುದ್ದೆಗಳನ್ನು ಸೃಜಿಸಲು ಆಡಳಿತಾತ್ಮಕ ಅನುಮೋದನೆ ಸಿಕ್ಕಿದೆ. ಎರಡು ಹಂತದಲ್ಲಿ ನೇಮಕಾತಿ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net