

ನಂಜನಗೂಡು: ಶ್ರೀಪತಂಜಲಿ ಯೋಗ ಶಿಕ್ಷಣ ಸಮಿತಿ ವತಿಯಿಂದ ರಥಸಪ್ತಮಿ ಅಂಗವಾಗಿ ಶನಿವಾರ ಮುಂಜಾನೆ ಶ್ರೀಕಂಠೇಶ್ವರಸ್ವಾಮಿ ದೇವಾಲಯದ ಪ್ರಾಂಗಣದಲ್ಲಿ ಯೋಗಾಸಕ್ತರಿಂದ 108 ಸಾಮೂಹಿಕ ಸೂರ್ಯ ನಮಸ್ಕಾರ ಯಜ್ಞ ನಡೆಯಿತು.
ಸಮಿತಿಯ ಪ್ರಧಾನ ಯೋಗ ಶಿಕ್ಷಕ ಪ್ರಕಾಶ್ ಜಿ.ಉಡಿಗಾಲ ಮಾರ್ಗದರ್ಶನದಲ್ಲಿ 300ಕ್ಕೂ ಹೆಚ್ಚು ಯೋಗಪಟುಗಳು ಸಮವಸ್ತ್ರಧಾರಿಗಳಾಗಿ 50 ನಿಮಿಷದ ಅವಧಿಯಲ್ಲಿ 108 ಆಸನ ಪ್ರದರ್ಶಿಸುವ ಮೂಲಕ ಸೂರ್ಯ ದೇವನಿಗೆ ಭಕ್ತಿ ಪೂರ್ವ ನಮನ ಸಲ್ಲಿಸಿದರು. ಮೂರು ಹಂತದಲ್ಲಿ ತಲಾ 36 ಸೂರ್ಯ ನಮಸ್ಕಾರ ಮಾಡಿದರು. 5 ನಿಮಿಷ ವಿರಾಮದಲ್ಲಿ ಯೋಗಪಟುಗಳಿಗೆ ದಣಿವು, ಆಯಾಸ ನೀಗಿಸಲು ಕಲ್ಲು ಸಕ್ಕರೆ, ಬೆಲ್ಲ ವಿತರಣೆ ಮಾಡಲಾಯಿತು.
ಪತಂಜಲಿ ಯೋಗ ಶಿಕ್ಷಣ ಸಮಿತಿಯ ಕಾರ್ಯದರ್ಶಿ ಎನ್.ಆರ್.ಗಣೇಶ್‌ಮೂರ್ತಿ ಮಾತನಾಡಿ, 108 ಸೂರ್ಯ ನಮಸ್ಕಾರ ಮಾಡಲು ಮಾನಸಿಕವಾಗಿ ಹಾಗೂ ದೈಹಿಕವಾಗಿ ಸದೃಢರಾಗಿರಬೇಕು. ಸೂರ್ಯದೇವನ ಕೃಪೆಯಿದ್ದರೆ ಸರಳವಾಗಿ ಸುಸೂತ್ರವಾಗಿ ಮಾಡಬಹುದು ಎಂಬುದಕ್ಕೆ ನಮ್ಮ ಯೋಗಬಂಧುಗಳೇ ಸಾಕ್ಷಿ ಎಂದು ತಿಳಿಸಿದರು.
ಸಮಿತಿಯ ಅಧ್ಯಕ್ಷ ಆರ್.ವಿ.ರೇವಣ್ಣ, ನಂಜನಗೂಡು ಯೋಗ ಫೌಂಡೇಷನ್ ಅಧ್ಯಕ್ಷ ಡಿಗ್ಗೇನಹಳ್ಳಿ ಪ್ರಕಾಶ್ ಇತರರು ಭಾಗವಹಿಸಿದ್ದರು.