106ನೇ ವಯಸ್ಸಿಗೆ 6ನೇ ಆಲ್ಬಂ ರಿಲೀಸ್​ ಮಾಡ್ತಿದ್ದಾರೆ ಈ ವೃದ್ಧೆ! ಈಕೆಯ ಬದುಕೇ ಸ್ಫೂರ್ತಿ

collete
Published on

ಪ್ಯಾರಿಸ್​: 30-40 ವರ್ಷಕ್ಕೇ ಜೀವನ ಸಾಕು ಸಾಕೆನಿಸುತ್ತಿದೆ ಎಂದು ಹೇಳುವವರನ್ನು ನೀವು ನೋಡಿರುತ್ತೀರಿ. ಆದರೆ ಈ ವೃದ್ಧೆ ತನ್ನ 106ನೇ ವಯಸ್ಸಿನಲ್ಲಿ ಮಾಡಲೊರಟಿರುವುದು ಲಕ್ಷಾಂತರ ಜನರಿಗೆ ಸ್ಫೂರ್ತಿ ತುಂಬುವಂತ ಕೆಲಸ. ವಯಸ್ಸಾದ ಮೇಲೆ ಕೈ ನಡುಗುತ್ತದೆ ಎಂದು ಸುಮ್ಮನೆ ಕೂರದ ವೃದ್ಧೆ ಇದೀಗ ತನ್ನ 6ನೇ ಪಿಯಾನೋ ಆಲ್ಬಂ ಅನ್ನು ಬಿಡುಗಡೆ ಮಾಡಲು ಸಜ್ಜಾಗಿದ್ದಾರೆ.

ಪ್ಯಾರಿಸ್​ನ ಕೋಲೆಟ್​ ಮೇಜ್​ 1914ರಲ್ಲಿ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದರು. ಮನೆಯೇ ಅವರಿಗೆ ಶಾಲೆಯಾಗಿತ್ತು. ಆಕೆಯ ತಂದೆ ಗೊಬ್ಬರ ಘಟಕವನ್ನು ನಿರ್ವಹಿಸುತ್ತಿದ್ದರು. ಬಾಲ್ಯದಿಂದಲೂ ಸಂಗೀತದ ಬಗ್ಗೆ ಒಲವು ಬೆಳೆಸಿಕೊಂಡ ಕೋಲೆಟ್​, ಪ್ಯಾರಿಸ್​ನ ಸಂಗೀತ ಶಾಲೆಗಳಲ್ಲಿ ಸಹವರ್ತಿಯಾಗಿ ಸುದೀರ್ಘ ವೃತ್ತಿಜೀವನವನ್ನು ಪ್ರಾರಂಭಿಸಿದರು. ಅದಕ್ಕೂ ಮೊದಲು ಪ್ಯಾರಿಸ್ನ ಪ್ಯಾರಿಸ್ ಎಕೋಲ್ ನಾರ್ಮಲ್ ಡಿ ಮ್ಯೂಸಿಕ್, 16 ನೇ ಅರೋಂಡಿಸ್ಮೆಂಟ್ನಲ್ಲಿನ ಸಂರಕ್ಷಣಾ ಕೇಂದ್ರದಲ್ಲಿ ಅಧ್ಯಯನ ಮಾಡಿದರು.

ಕೋಲೆಟ್​ ಯೋಗ ಮತ್ತು ಫಿಂಗರ್ ಜಿಮ್ನಾಸ್ಟಿಕ್ಸ್ ಅನ್ನು ಅಭ್ಯಾಸ ಮಾಡಿದ್ದಾರೆ. ಆದರೆ ಪಿಯಾನೋ ಇಷ್ಟವಾದಷ್ಟು ಬೇರಾವುದೂ ಅವರಿಗೆ ಹಿಡಿಸಲಿಲ್ಲವಂತೆ. ನಿಮೆಗಲ್ಲರಿಗೂ ಚಾಕೊಲೇಟ್​ ಅಂದರೆ ಎಷ್ಟು ಇಷ್ಟವೋ ನನಗೆ ಪಿಯಾನೋ ಎಂದರೆ ಅಷ್ಟೇ ಇಷ್ಟ. ನನ್ನ ಬೆರಳುಗಳ ಯಾವಾಗಳು ಪಿಯಾನೋ ಸ್ಪರ್ಶ ಅನುಭವಿಸುತ್ತಿರಬೇಕು. ಅದು ನನ್ನ ಆಹಾರ. ನನ್ನ ಹೃದಯಕ್ಕೇ ಅದೇ ಚೈತನ್ಯ ಎನ್ನುತ್ತಾರೆ ಕೋಲೆಟ್​.

ನಾಲ್ಕನೇ ವಯಸ್ಸಿನಿಂದಲೇ ಪಿಯಾನೋ ನುಡಿಸಲು ಕಲಿತ ಕೋಲೆಟ್​ ಈವರೆಗೆ ಐದು ಆಲ್ಬಂಗಳನ್ನು ತಯಾರಿಸಿ ಬಿಡುಗಡೆ ಮಾಡಿದ್ದಾರೆ. ಅವರ ಆರನೇ ಆಲ್ಬಂ ಈ ವರ್ಷದ ಏಪ್ರಿಲ್​ನಲ್ಲಿ ಬಿಡುಗಡೆಯಾಗಲಿದೆ.

ನನ್ನ ತಾಯಿ ನಿಜವಾಗಿಯೂ ಸ್ಫೂರ್ತಿಯ ಚಿಲುಮೆ. ಆಕೆಯ ಮನೋಸ್ಥೈರ್ಯ ಎಂತವರೂ ಮೆಚ್ಚಬೇಕಾದದ್ದು. ಅವಳ ಹಾಸ್ಯಪ್ರಜ್ಞೆ, ಅವಳ ಸಂತೋಷ, ಅವಳ ಜೀವನದ ಪ್ರೀತಿ ಹೀಗೆ ಪ್ರತಿಯೊಂದೂ ನಿಮ್ಮ ಮುಖದಲ್ಲಿ ನಗು ತರಿಸುತ್ತದೆ ಎನ್ನುತ್ತಾರೆ ಕೋಲೆಟ್​ ಅವರ ಮಗ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net