

ಪಿಎಂ ಕೌಶಲ ಯೋಜನೆಯಡಿಯಲ್ಲಿ ಇಂಟರ್ನ್ಶಿಪ್ ನೀಡಲು ಈ ಬಾರಿ ಬರೋಬ್ಬರಿ 10,381 ಕೋಟಿ ರೂ.ಗಳನ್ನು ಘೋಷಿಸಲಾಗಿದ್ದು, ಹೊಸ ಉದ್ಯೋಗಾವಕಾಶಗಳ ಸೃಷ್ಟಿಗಾಗಿ 20 ಸಾವಿರ ಕೋಟಿ ರೂ.ಗಳನ್ನು ವಿನಿಯೋಗಿಸಲಾಗುತ್ತಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಇದರ ಜತೆ ಜತೆಗೆ ಈಗ ಪರ್ಯಾಯ ಹೂಡಿಕೆ ನಿಧಿ ಅನ್ವಯ ನವೋದ್ಯಮಗಳಿಗೆ ಮತ್ತೆ 10 ಸಾವಿರ ಕೋಟಿ ರೂ.ಗಳ ಕೊಡುಗೆ ನೀಡುವುದಾಗಿ ಬಜೆಟ್ನಲ್ಲಿ ಘೋಷಿಸಲಾಗಿದೆ.
ಇದಲ್ಲದೆ ಶಾಲೆಗಳಿಗೆ ಇಂಟರ್ನೆಟ್, ಐಐಟಿಗಳ ವಿಸ್ತರಣೆ, ಜ್ಞಾನ ಭಾರತ ಯೋಜನೆ, ವೈದ್ಯಕೀಯ ಸೀಟುಗಳ ಹೆಚ್ಚಳ ಮೊದಲಾದವುಗಳು ಶಿಕ್ಷಣ ಇಲಾಖೆಗೆ ಸಂಬಂಧಿಸಿದ ಕೆಲ ಪ್ರಮುಖ ಘೋಷಣೆಗಳಾಗಿವೆ. ಈ ಬಾರಿ 1.28 ಲಕ್ಷ ಕೋಟಿ ರೂ.ಗಳ ಅನುದಾನವನ್ನು ನೀಡಲಾಗಿದೆ.
ಉನ್ನತ ಶಿಕ್ಷಣದಲ್ಲಿ ಪ್ರತಿಷ್ಠಿತ ಸ್ಥಾನದಲ್ಲಿರುವ ಭಾರತೀಯ ತಂತ್ರಜ್ಞಾನ ಸಂಸ್ಥೆಗಳಲ್ಲಿ (ಐಐಟಿ) ವಿದ್ಯಾರ್ಥಿಗಳ ಪ್ರವೇಶಾತಿ ಶೇ.100 ಹೆಚ್ಚಳವಾಗಿದೆ. ಒಟ್ಟು 23 ಐಐಟಿಗಳಲ್ಲಿ ಕಳೆದ 10 ವರ್ಷಗಳಲ್ಲಿ 65 ಸಾವಿರವಿದ್ದ ಸೀಟುಗಳ ಸಂಖ್ಯೆ 1.35 ಲಕ್ಷಕ್ಕೆ ಹೆಚ್ಚಳವಾಗಿದೆ. 2014ರ ನಂತರ ಆರಂಭವಾದ ಐದು ಐಐಟಿಗಳಲ್ಲಿ ಹೆಚ್ಚುವರಿ ಮೂಲಸೌಕರ್ಯಗಳನ್ನು ಒದಗಿಸಲಾಗುವುದು. ಇದರಿಂದ ಇನ್ನೂ 6,500 ವಿದ್ಯಾರ್ಥಿಗಳಿಗೆ ಅವಕಾಶವಾಗಲಿದೆ. ಐಐಟಿ ಪಟನಾದಲ್ಲಿರುವ ಹಾಸ್ಟೆಲ್ ಇತರ ಮೂಲಸೌಕರ್ಯಗಳನ್ನು ಹೆಚ್ಚಿಸಲಾಗುವುದು.
ಮಕ್ಕಳು ಮತ್ತು ಯುವಕರಲ್ಲಿ ವೈಜ್ಞಾನಿಕ ಮನೋಭಾವ ಸೃಷ್ಟಿಸಲು, ವಿಜ್ಞಾನದ ಬಗ್ಗೆ ಕೌತುಕ ಹುಟ್ಟಿಹಾಕುವುದು, ನಾವೀನ್ಯತೆ ಸೇರಿ ವಿಜ್ಞಾನದ ಹಲವು ಮಜಲುಗಳನ್ನು ಮಕ್ಕಳು ಪ್ರವೇಶಿಸುವಂತೆ ಮಾಡುವುದಕ್ಕಾಗಿ 50 ಸಾವಿರ ಸರ್ಕಾರಿ ಶಾಲೆಗಳಲ್ಲಿ ‘ಅಟಲ್ ಟಿಂಕರಿಂಗ್ ಪ್ರಯೋಗಾಲಯ’ಗಳನ್ನು ಮುಂದಿನ 5 ವರ್ಷದಲ್ಲಿ ಆರಂಭಿಸಲಾಗುತ್ತದೆ.
ಕೃಷಿ, ಆರೋಗ್ಯ ಮತ್ತು ಸುಸ್ಥಿರ ನಗರಗಳ ಕೃತಕ ಬುದ್ಧಿಮತ್ತೆಯ ಶ್ರೇಷ್ಠತಾ ಕೇಂದ್ರಗಳನ್ನು 2023ರಲ್ಲಿ ಘೋಷಿಸಲಾಗಿತ್ತು. ಈ ಬಾರಿಯ ಬಜೆಟ್ನಲ್ಲಿ ಶಿಕ್ಷಣಕ್ಕೆ ಗಮನ ಹರಿಸಲಾಗಿದ್ದು, ‘ಶಿಕ್ಷಣಕ್ಕಾಗಿ ಕೃತಕ ಬುದ್ಧಿಮತ್ತೆಯ ಶ್ರೇಷ್ಠತಾ ಕೇಂದ್ರ’ವನ್ನು ತೆರೆಯಲಾಗುತ್ತಿದೆ. ಇದಕ್ಕಾಗಿ 500 ಕೋಟಿ ರೂ. ವ್ಯಯಿಸುವುದಾಗಿ ತಿಳಿಸಲಾಗಿದೆ.
ಭಾರತ್ ನೆಟ್ ಯೋಜನೆ ಅಡಿಯಲ್ಲಿ ಗ್ರಾಮೀಣ ಭಾಗದಲ್ಲಿರುವ ಸರ್ಕಾರಿ ಪ್ರೌಢಶಾಲೆಗಳು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಬ್ರಾಡ್ ಬ್ಯಾಂಡ್ ಸಂಪರ್ಕವನ್ನು ಕಲ್ಪಿಸಲಾಗುತ್ತಿದೆ. ಇದರಿಂದ ಸರ್ಕಾರಿ ಶಾಲೆಗಳಲ್ಲಿ ಆನ್ಲೈನ್ ಮೂಲಕ ಕೈಗೊಳ್ಳಬಹುದಾದ ಚಟುವಟಿಕೆಗಳನ್ನು ಕೈಗೊಳ್ಳಲು, ಮೊಬೈಲ್ ಕನೆಕ್ಟಿವಿಟಿಗಳಿಗೆ ಸಹಕಾರಿಯಾಗಲಿದೆ.
ಐದು ರಾಷ್ಟ್ರೀಯ ಕೌಶಲ ಶ್ರೇಷ್ಠತಾ ಕೇಂದ್ರಗಳನ್ನು ಜಾಗತಿಕ ಪರಿಣತಿ ಮತ್ತು ಪಾಲುದಾರಿಕೆಯ ಕೌಶಲದೊಂದಿಗೆ ಆರಂಭಿಸಲಾಗುತ್ತದೆ. ಮೇಕ್ ಇನ್ ಇಂಡಿಯಾ, ಮೇಕ್ ಫಾರ್ ದಿ ವರ್ಲ್ಡ್ ಉತ್ಪಾದನೆಗೆ ಅಗತ್ಯವಿರುವ ಕೌಶಲಗಳೊಂದಿಗೆ ಯುವಕರನ್ನು ಸಜ್ಜುಗೊಳಿಸಲಾಗುತ್ತಿದೆ. ಇದಕ್ಕಾಗಿ ಪಾಲುದಾರಿಕೆಯ ಪಠ್ಯಕ್ರಮ ವಿನ್ಯಾಸ, ತರಬೇತುದಾರರಿಂದ ತರಬೇತಿ, ಕೌಶಲ ಪ್ರಮಾಣೀಕರಣ ಚೌಕಟ್ಟು ಮತ್ತು ಆವರ್ತಕ ವಿಮರ್ಶೆಗಳನ್ನು ಒಳಗೊಂಡಿರುತ್ತದೆ.
10 ಸಾವಿರ ವೈದ್ಯ ಸೀಟು
ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಕಳೆದ 10 ವರ್ಷಗಳಲ್ಲಿ 73,111 ಸ್ನಾತಕೋತ್ತರ ವೈದ್ಯಕೀಯ ಮತ್ತು 39,460 ಸ್ನಾತಕ ವೈದ್ಯಕೀಯ ಸೀಟು ಸೇರಿ ಕಳೆದ 10 ವರ್ಷದಲ್ಲಿ 1.1 ಲಕ್ಷ ಸೀಟುಗಳನ್ನು ಹೆಚ್ಚಳ ಆಗಿದ್ದು, ಶೇ.130 ಪ್ರಗತಿಯಾಗಿದೆ. ಅದೇ ರೀತಿಯಲ್ಲಿ ಮುಂದಿನ ವರ್ಷ 10 ಸಾವಿರ ಸೇರಿ ಒಟ್ಟು ಐದು ವರ್ಷದಲ್ಲಿ 75 ಸಾವಿರ ವೈದ್ಯಕೀಯ ಸೀಟುಗಳನ್ನು ಹೆಚ್ಚಳ ಮಾಡುವುದಾಗಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಪ್ರಕಟಿಸಿದ್ದಾರೆ.
ಆಟಿಕೆಗಳಿಗಾಗಿ ರಾಷ್ಟ್ರೀಯ ಕ್ರಿಯಾ ಯೋಜನೆಯನ್ನು ನಿರ್ವಿುಸಿ ಭಾರತವನ್ನು ಆಟಿಕೆಗಳ ‘ಜಾಗತಿಕ ಕೇಂದ್ರವನ್ನಾಗಿಸುವ ಯೋಜನೆ’ಯನ್ನು ರೂಪಿಸಲಾಗುತ್ತದೆ. ಈ ಯೋಜನೆಯು ಕ್ಲಸ್ಟರ್ಗಳು, ಕೌಶಲ ಮತ್ತು ಉತ್ಪಾದನಾ ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವುದರ ಮೇಲೆ ಕೇಂದ್ರೀಕರಿಸಲಾಗುತ್ತದೆ. ಮೇಕ್ ಇನ್ ಇಂಡಿಯಾ ಬ್ರಾಂಡ್ ಅನ್ನು ಪ್ರತಿನಿಧಿಸುವ ಉತ್ತಮ ಗುಣಮಟ್ಟದ, ವಿಶೇಷ, ನವೀನ ಮತ್ತು ಸುಸ್ಥಿರ ಆಟಿಕೆಗಳನ್ನು ರಚಿಸಲಾಗುತ್ತದೆ.
ಭಾರತದ ಉತ್ಪಾದಕತೆ, ಗುಣಮಟ್ಟ ಮತ್ತು ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಲು ಪಾದರಕ್ಷೆ ಮತ್ತು ಚರ್ಮದ ವಲಯದಲ್ಲಿ ಉತ್ಪನ್ನಗಳ ಯೋಜನೆಯನ್ನು ಜಾರಿಗೊಳಿಸುವುದಾಗಿ ಘೋಷಿಸಿದೆ. ಇದರಿಂದ ಚರ್ಮದ ಪಾದರಕ್ಷೆಗಳು ಮತ್ತು ಉತ್ಪನ್ನಗಳಿಗೆ ಬೆಂಬಲ ನೀಡುವ ಜತೆಗೆ ಚರ್ಮವನ್ನು ಹೊರತುಪಡಿಸಿದ ಗುಣಮಟ್ಟದ ಪಾದರಕ್ಷೆಗಳ ಉತ್ಪಾದನೆಗೆ ಅಗತ್ಯವಿರುವ ವಿನ್ಯಾಸ ಸಾಮರ್ಥ್ಯ, ಘಟಕಗಳ ತಯಾರಿಕೆ ಮತ್ತು ಯಂತ್ರೋಪಕರಣಗಳನ್ನು ಬೆಂಬಲಿಸುತ್ತದೆ. ಈ ಯೋಜನೆಯು 22 ಲಕ್ಷ ಜನರಿಗೆ ಉದ್ಯೋಗವನ್ನು ಒದಗಿಸುವ ನಿರೀಕ್ಷೆ ಹೊಂದಿದೆ. 4 ಲಕ್ಷ ಕೋಟಿ ರೂ. ವಹಿವಾಟು ಮತ್ತು 1.1 ಲಕ್ಷ ಕೋಟಿ ರೂ. ಗಳಿಗಿಂತ ಹೆಚ್ಚಿನ ರಫ್ತು ವಹಿವಾಟು ನಡೆಸುವ ಗುರಿ ಹೊಂದಿದೆ.
ಶಾಲಾ ಹಂತ ಹಾಗೂ ಉನ್ನತ ಶಿಕ್ಷಣಕ್ಕೆ ಬೇಕಾಗುವ ಪುಸ್ತಕಗಳನ್ನು ಡಿಜಿಟಲ್ ರೂಪದಲ್ಲಿ ಒದಗಿಸಲು ಭಾರತೀಯ ಭಾಷೆಗಳ ಪುಸ್ತಕಗಳ ಯೋಜನೆಯನ್ನು ಕೇಂದ್ರ ಸರ್ಕಾರ ಘೋಷಿಸಿದೆ. ಇದರಿಂದಾಗಿ ವಿದ್ಯಾರ್ಥಿಗಳು ಆಯಾ ವಿಷಯಗಳನ್ನು ಉತ್ತಮವಾಗಿ ತಿಳಿದುಕೊಳ್ಳಲು ಅವಕಾಶವಾಗುತ್ತದೆ ಎಂಬುದು ಸರ್ಕಾರದ ಆಶಯವಾಗಿದೆ.
ಆತಿಥ್ಯ ನಿರ್ವಹಣೆ ಸಂಬಂಧ ಕೌಶಲ ತರಬೇತಿ ಕಾರ್ಯಕ್ರಮಗಳನ್ನು ಯುವಕರಿಗೆ ನೀಡಲಾಗುತ್ತದೆ. ಕೈಗಾರಿಕೆ 4.0 ಭಾಗವಾಗಿ ಯುವಕರಿಗೆ ಅವಕಾಶ ಹೆಚ್ಚಿಸುವ ದೃಷ್ಟಿಯಿಂದ ದೇಶೀಯ ಎಲೆಕ್ಟ್ರಾನಿಕ್ ಉಪಕರಣಗಳ ಉದ್ಯಮಕ್ಕೆ ಸರ್ಕಾರದಿಂದ ಬೆಂಬಲ ನೀಡಲಾಗುತ್ತದೆ. ‘ಗ್ರಾಮೀಣ ಸಮೃದ್ಧಿ ಹಾಗೂ ಸ್ಥಿತಿಸ್ಥಾಪಕತ್ವ’ (ರೂರಲ್ ಪ್ರಾಸ್ಪರಿಟಿ ಆಂಡ್ ರೆಸಿಲೆನ್ಸ್) ಎಂಬ ಸಮಗ್ರ ಬಹು ವಲಯ ಕಾರ್ಯಕ್ರಮವನ್ನು ರಾಜ್ಯಗಳ ಸಹಯೋಗದೊಂದಿಗೆ ಜಾರಿಗೆ ತರಲಾಗುತ್ತದೆ. ಈ ಮೂಲಕ ಕೃಷಿ ಕ್ರೇತ್ರದಲ್ಲಿ ಕೌಶಲ, ಹೂಡಿಕೆ, ತಂತ್ರಜ್ಞಾನ ಹಾಗೂ ಗ್ರಾಮೀಣ ಆರ್ಥಿಕತೆಯನ್ನು ವೃದ್ಧಿಸುವಲ್ಲಿ ಸಹಕಾರಿಯಾಗಲಿದೆ. ಗ್ರಾಮೀಣ ಮಹಿಳೆಯರು, ಯುವ ಕೃಷಿಕರು, ಯುವಕರು ಹಾಗೂ ಭೂರಹಿತ ಕುಟುಂಬಗಳಿಗೆ ಅನುಕೂಲವಾಗಲಿದೆ.
ಆನ್ಲೈನ್ ವೇದಿಕೆಯಲ್ಲಿ ಯುವ ತಲೆಮಾರಿನ ಆರ್ಥಿಕ ಸೇವೆಯಲ್ಲಿ ಗಿಗ್ ಕಾರ್ವಿುಕರ ಕೊಡುಗೆಯು ಅನನ್ಯವಾಗಿದೆ. ಅವರ ಸೇವೆಯನ್ನು ಪರಿಗಣಿಸಿರುವ ಕೇಂದ್ರ ಸರ್ಕಾರವು ಕರ್ನಾಟಕದ ಮಾದರಿಯಲ್ಲೇ ಸಾಮಾಜಿಕ ಭದ್ರತಾ ಯೋಜನೆ ರೂಪಿಸಿದೆ. ಇ-ಶ್ರಮ್ ಪೋರ್ಟಲ್ ಮೂಲಕ ಗುರುತಿನ ಚೀಟಿ ಮತ್ತು ನೋಂದಣಿ ಮಾಡಿಕೊಳ್ಳಲಾಗುತ್ತಿದೆ. ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ ಅನ್ವಯ ಆರೋಗ್ಯ ಸೇವೆಯನ್ನು ಒದಗಿಸಲಾಗುತ್ತದೆ. ಈ ಯೋಜನೆಯ ಸೌಲಭ್ಯವು ಒಂದು ಕೋಟಿ ಗಿಗ್ ಕೆಲಸಗಾರರಿಗೆ ದೊರೆಯುವ ಸಾಧ್ಯತೆ ಇದೆ.