ಮಹಾತ್ಮಾ ಗಾಂಧಿ ಕಾಂಗ್ರೆಸ್ ಅಧ್ಯಕ್ಷರಾಗಿ 100 ವರ್ಷ; ವಿಶೇಷ ಕಾರ್ಯಕ್ರಮ ರೂಪಿಸಲು ಸಮಿತಿ ರಚನೆ

Mahatma Gandhi
Published on

ಬೆಂಗಳೂರು: ಮಹಾತ್ಮಾ ಗಾಂಧಿ ಅವರು ಕಾಂಗ್ರೆಸ್ ನಾಯಕತ್ವ ವಹಿಸಿ 100 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ವಿಶೇಷ ಕಾರ್ಯಕ್ರಮ ರೂಪಿಸಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ನಾಯಕತ್ವ ವಹಿಸಿಕೊಂಡ ಗಾಂಧಿಜೀ ಅವರು ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದಾರೆ. ಕಾಂಗ್ರೆಸ್ ಹಾಗೂ ಸರ್ಕಾರ ಈ ಸುಸಂದರ್ಭವನ್ನು ಉಪಯೋಗಿಸಿಕೊಂಡು ಸಂಭ್ರಮಾಚರಣೆ ಮಾಡಲು ಕಾರ್ಯಕ್ರಮ ರೂಪಿಸಲು ತೀರ್ಮಾನಿಸಿದ್ದೇವೆ. ಈ ದೃಷ್ಟಿಯಿಂದ ಸರ್ಕಾರಕ್ಕೆ ಹಾಗೂ ಪಕ್ಷಕ್ಕೆ ಕಾರ್ಯಕ್ರಮದ ರೂಪುರೇಷೆ ಮಾಡಲು ಎಚ್.ಕೆ ಪಾಟೀಲ ಅವರ ಅಧ್ಯಕ್ಷತೆಯಲ್ಲಿ ವೀರಪ್ಪ ಮೊಯಿಲಿ ಅವರು ಮಾರ್ಗದರ್ಶಕರಾಗಿ, ಸಲಹಾ ಸಮಿತಿ ರಚಿಸಲಾಗುವುದು. ಬಿ.ಎಲ್.ಶಂಕರ್ ಅವರು ಈ ಸಮಿತಿಯ ಸಂಯೋಜಕರಾಗಿರಲಿದ್ದು, 15 ಜನ ವಿವಿಧ ಘಟಕಗಳ ಅಧ್ಯಕ್ಷರು ಸೇರಿದಂತೆ 60 ಸದಸ್ಯರುಗಳ ಸಮಿತಿ ಇದಾಗಿದೆ. ಅವರು ಚರ್ಚೆ ಮಾಡಿ ಸರ್ಕಾರದಿಂದ ಹಾಗೂ ಪಕ್ಷದಿಂದ ಯಾವ ಕಾರ್ಯಕ್ರಮ ಮಾಡಬಹುದು ಎಂದು ಸಲಹೆ ನೀಡಲಿದ್ದಾರೆ.

ಈ ಕಾರ್ಯಕ್ರಮಗಳ ಮೂಲಕ ಯುವ ಪೀಳಿಗೆಗೆ ಸ್ವಾತಂತ್ರ್ಯ ಸಂಗ್ರಾಮ, ತ್ಯಾಗ ಬಲಿದಾನಗಳ ಬಗ್ಗೆ ಮಾಹಿತಿ ನೀಡಲಾಗುವುದು ಎಂದು ಹೇಳಿದರು.

ಕಾಂಗ್ರೆಸ್ ಸದಸ್ಯತ್ವ ಪಡೆಯಲು ಒಂದು ತಿಂಗಳ ಅವಕಾಶವಿದೆ. ಬೇರೆ ಯಾವುದೇ ಪಕ್ಷದಲ್ಲಿ ಆಂತರಿಕ ಚುನಾವಣೆ ನಡೆಯುತ್ತಿಲ್ಲ. ಪಕ್ಷದ ಐವೈಸಿ ಆಪ್‌ನಲ್ಲಿ ಈ ಸದಸ್ಯತ್ವ ಹಾಗೂ ಮತದಾನದ ಮಾಹಿತಿ ಇರಲಿದೆ. ಯಾರು ಹೆಚ್ಚು ಮತ ಪಡೆಯುತ್ತಾರೆ ಅವರು ಅಧ್ಯಕ್ಷರಾಗಿರುತ್ತಾರೆ. ಎರಡನೇ ಸ್ಥಾನ ಪಡೆದವರು ಉಪಾಧ್ಯಕ್ಷರಾಗುತ್ತಾರೆ. ಒಟ್ಟು ಏಳು ಮಂದಿ ಉಪಾಧ್ಯಕ್ಷರಾಗಿರುತ್ತಾರೆ. ಇಲ್ಲಿ ಗುಂಪುಗಾರಿಕೆ ಇರುವುದಿಲ್ಲ. ನೇಮಕಾತಿ ಮೂಲಕ ಆಯ್ಕೆ ಮಾಡಿದರೆ ಆಗ ಗುಂಪುಗಾರಿಕೆಗೆ ಹೆಚ್ಚು ಅವಕಾಶವಿರುತ್ತದೆ. ಶಿಷ್ಯರನ್ನು ಅಧ್ಯಕ್ಷರನ್ನಾಗಿ ಮಾಡಿಕೊಂಡಿದ್ದಾರೆ ಎಂದು ಹೇಳುತ್ತಾರೆ. ಚುನಾವಣೆ ಎಲ್ಲರಿಗೂ ಮುಕ್ತ ಅವಕಾಶವಿದ್ದು, ಸಾಮರ್ಥ್ಯ ಇರುವವರು ತಕ್ಕ ಸ್ಥಾನಮಾನ ಪಡೆಯಲಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net