

ಬೆಂಗಳೂರು: ರಾಜ್ಯದ 100 ಸ್ಥಳಗಳಲ್ಲಿ ಗ್ರಾಮೀಣ ನ್ಯಾಯಾಲಯ ಸ್ಥಾಪಿಸಲು ಸರ್ಕಾರ ನಿರ್ಧಾರ ಕೈಗೊಂಡಿದೆ.
ಗ್ರಾಮ ನ್ಯಾಯಾಲಯ ಸ್ಥಾಪನೆ ಮಾಡಲು ಕಾನೂನು ಕೇಂದ್ರ ಸರ್ಕಾರ ಕಾನೂನು ಮಾಡಿತ್ತು. ಪ್ರತಿ ನ್ಯಾಯಾಲಯಕ್ಕೆ ಅನುದಾನವನ್ನೂ ನೀಡಲಿದೆ. ರಾಜ್ಯದಲ್ಲಿ ಈಗ ಅನುಷ್ಠಾನಗೊಳಿಸಲಾಗುತ್ತಿದೆ. ಪಂಚಾಯಿತಿಗೆ ಅಥವಾ ಕ್ಲಸ್ಟರ್ ಆಫ್ ಪಂಚಾಯಿತಿ ಮಟ್ಟದಲ್ಲಿ ನ್ಯಾಯಾಲಯ ಸ್ಥಾಪನೆಯಾಗಲಿದ್ದು, ಮನೆ ಬಾಗಿಲಿಗೆ ನ್ಯಾಯದಾನ ಆಗಬೇಕು, ನ್ಯಾಯಕ್ಕಾಗಿ ಜನರು ಅಲೆದಾಡಬಾರದು ಎಂಬ ಹಿನ್ನೆಲೆಯಲ್ಲಿ ಜೆಎಂಎಫ್‌ಸಿ ಮಟ್ಟದ ಕೋರ್ಟ್ ಸ್ಥಾಪನೆಗೆ ಉದ್ದೇಶಿಸಲಾಗಿದೆ.
ರಾಜ್ಯದಲ್ಲಿ ಪ್ರಸ್ತುತ 2 ಗ್ರಾಮ ನ್ಯಾಯಾಲಯಗಳು ಚಿಕ್ಕಬಳ್ಳಾಪುರ ಮತ್ತು ಗೌರಿಬಿದನೂರು ತಾಲೂಕುಗಳಲ್ಲಿ ಸ್ಥಾಪನೆ ಮಾಡಲಾಗಿದೆ.
ಪ್ರತಿ ನ್ಯಾಯಾಲಯ ಸ್ಥಾಪನೆಗೆ ಒಂದು ಬಾರಿಗೆ ಹದಿನೆಂಟು ಲಕ್ಷ ರೂ. ಅನುದಾನ ಸಿಗಲಿದೆ. ನೂರು ಕೋರ್ಟ್ ಸ್ಥಾಪನೆಗೆ ಅಂದಾಜಿನ ಪ್ರಕಾರ 25-30 ಕೋಟಿ ರೂ. ಬಿಡುಗಡೆ ಮಾಡಲು ಒಪ್ಪಿಗೆ ನೀಡಲಾಗಿದೆ. ಹೈಕೋರ್ಟ್ ಜತೆ ಸೇರಿ ವ್ಯವಸ್ಥೆ ರೂಪಿಸಬೇಕಾಗುತ್ತದೆ. ನ್ಯಾಯಾಧೀಶರನ್ನು ಹೈ ಕೋರ್ಟ್ ನೇಮಿಸಲಿದ್ದು, ಮುಖ್ಯ ನ್ಯಾಯಮೂರ್ತಿ ಜತೆ ಈ ಬಗ್ಗೆ ಮಾತನಾಡಲಾಗುತ್ತದೆ ಎಂದು ಸಚಿವ ಎಚ್.ಕೆ ಪಾಟೀಲ್ ವಿವರಿಸಿದರು.
ಆರಂಭಿಕವಾಗಿ 400 ಗ್ರಾಮೀಣ ನ್ಯಾಯಾಲಯ ಸ್ಥಾಪಿಸಲು 100 ಕೋಟಿ ರೂ.ಗೆ ಬೇಡಿಕೆ ಇಡಲಾಗಿತ್ತು. ಆದರೆ, ಅನುದಾನದ ಕೊರತೆಯಿಂದ ಆರಂಭಿಕವಾಗಿ 100 ನ್ಯಾಯಾಲಯ ಸ್ಥಾಪನೆಗೆ ನಿರ್ಧರಿಸಲಾಗಿದೆ.