

ರಾಮನಗರ: ಜಿಲ್ಲೆಯಲ್ಲಿ 8,23,000 ಜನರಿಗೆ ಮೊದಲ ಡೋಸ್ ಕರೊನಾ ಲಸಿಕೆ ನೀಡಲು ಗುರಿ ನಿಗದಿಯಾಗಿದ್ದು, ಶೇ.91ರಷ್ಟು ಸಾಧನೆಯಾಗಿದೆ. ಬಾಕಿ ಇರುವ 75,175 ಜನರಿಗೆ ಲಸಿಕೆ ನೀಡಿ ಶೇ.100 ಸಾಧನೆ ಮಾಡಲು ಯೋಜನೆ ರೂಪಿಸುವಂತೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ತುಷಾರ್ ಗಿರಿನಾಥ್ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿ, ಉಳಿದಿರುವ ಶೇ.9ರಷ್ಟು ಮಂದಿಯನ್ನು ಗ್ರಾಮವಾರು ಪತ್ತೆ ಹಚ್ಚಿ ಲಸಿಕೆ ನೀಡುವ ಕೆಲಸವಾಗಬೇಕು. ಇವರಲ್ಲಿ ಕೆಲವರಿಗೆ ಲಸಿಕೆಯಿಂದ ತೊಂದರೆಯಾಗುತ್ತದೆ ಎಂಬ ಮನೋಭಾವ ಇರಬಹುದು. ಅವರ ಮನವೊಲಿಸಿ ಲಸಿಕೆ ಪಡೆಯುವಂತೆ ಮಾಡಲು ಹಾಗೂ ಉಳಿದಿರುವವರನ್ನು ಪತ್ತೆ ಹಚ್ಚಿ ಲಸಿಕೆ ನೀಡಲು ಎಲ್ಲ ಇಲಾಖೆಗಳು ಸಮನ್ವಯದಿಂದ ಕೆಲಸ ನಿರ್ವಹಿಸಬೇಕು ಎಂದು ಸೂಚಿಸಿದರು.
ಮೊದಲ ಡೋಸ್ ಲಸಿಕೆ ಪಡೆಯಬೇಕಿರುವ 75,175 ಪೈಕಿ 51,667 ಜನರು ಹೊರ ಜಿಲ್ಲೆಯಲ್ಲಿದ್ದು, ಅಲ್ಲಿಯೇ ಲಸಿಕೆ ಪಡೆದಿದ್ದಾರೆ ಎಂದು ಅಶಾ ಕಾರ್ಯಕರ್ತೆಯರು ನಡೆಸಿದ ಮನೆ ಮನೆ ಭೇಟಿ ಮೂಲಕ ತಿಳಿದುಬಂದಿದೆ ಎಂದು ಆರ್‌ಸಿಎಚ್ ಅಧಿಕಾರಿ ಡಾ. ಪದ್ಮಾ ಮಾಹಿತಿ ನೀಡಿದರು. ಈ ವೇಳೆ ಮಾತನಾಡಿದ ತುಷಾರ್ ಗಿರಿನಾಥ್, ಹೊರ ಜಿಲ್ಲೆಯಲ್ಲಿ ಲಸಿಕೆ ಪಡೆದಿರುವವರ ಪಡಿತರ ಚೀಟಿ, ಮೊಬೈಲ್ ಹಾಗೂ ಆಧಾರ್ ಸಂಖ್ಯೆ ವಿವರವನ್ನು ಸಂಗ್ರಹಿಸಿ ನೀಡಿದರೆ ಲಸಿಕೆ ಪಡೆದಿರುವುದನ್ನು ಆರೋಗ್ಯ ಇಲಾಖೆ ಕೋವಿಡ್ ಪೋರ್ಟಲ್‌ನಲ್ಲಿ ಖಾತ್ರಿ ಪಡಿಸಿಕೊಳ್ಳಬಹುದು ಎಂದರು.
ಲಸಿಕೆ ಪಡೆಯದಿರುವವರನ್ನು ಪತ್ತೆ ಹಚ್ಚಿ ಕೃಷಿ, ಕಾರ್ಮಿಕ, ಮನೆಕೆಲಸ, ಅಕುಶಲ ಕಾರ್ಮಿಕರು, ಬೀದಿ ಬದಿ ವ್ಯಾಪಾರಿಗಳು ಯಾವ ವರ್ಗಕ್ಕೆ ಸೇರಿರುತ್ತಾರೆ ಎಂದು ತಿಳಿದುಕೊಳ್ಳಿ. ಅವರೊಂದಿಗೆ ಆಯಾ ಇಲಾಖೆ ಅಧಿಕಾರಿಗಳು ಮಾತನಾಡಿ ಮನ ಒಲಿಸಿ ಲಸಿಕೆ ಪಡೆಯುವಂತೆ ಮಾಡಿ. ಈ ಕೆಲಸದಲ್ಲಿ ಚುನಾಯಿತ ಪ್ರತಿನಿಧಿಗಳು ಹಾಗೂ ಧಾರ್ಮಿಕ ಮುಖಂಡರನ್ನು ಸೇರಿಸಿಕೊಂಡು ಕೆಲಸ ನಿರ್ವಹಿಸಿ ಎಂದರು. ಶೇ.100 ಸಾಧನೆ ಮಾಡಿರುವ ಗ್ರಾಪಂಗಳ ಅಧ್ಯಕ್ಷರಿಗೆ ಪ್ರಶಂಸನಾ ಪತ್ರ ನೀಡಲಾಯಿತು. ಜಿಪಂ ಸಿಇಒ ಇಕ್ರಂ, ಎಡಿಸಿ ಟಿ. ಜವರೇಗೌಡ, ಡಿಎಚ್‌ಒ ಡಾ. ನಿರಂಜನ್ ಹಾಗೂ ಅಧಿಕಾರಿಗಳು ಇದ್ದರು.
ಅಧಿಕಾರಿಗಳಿಗೆ ಡಿಸಿ ಖಡಕ್ ಎಚ್ಚರಿಕೆ:
ಜಿಲ್ಲಾಧಿಕಾರಿ ಡಾ. ರಾಕೇಶ್ ಕುಮಾರ್ ಮಾತನಾಡಿ, ಇಲಾಖೆ ಅಧಿಕಾರಿಗಳು, ಎಲ್ಲ ಸಿಬ್ಬಂದಿಗಳು ಲಸಿಕೆ ಪಡೆದುಕೊಂಡಿರುವ ಬಗ್ಗೆ ಖಾತ್ರಿ ಪಡಿಸಿಕೊಳ್ಳಿ. ನಂತರ ತಮ್ಮ ವ್ಯಾಪ್ತಿಗೆ ಬರುವ ಫಲಾನುಭವಿಗಳು ಲಸಿಕೆ ಪಡೆದಿರುವ ಬಗ್ಗೆ ತಿಳಿದುಕೊಳ್ಳಿ. ಲಸಿಕೆ ಪಡೆಯದಿದ್ದಲ್ಲಿ ಅದರ ಉಪಯುಕ್ತತೆ ಬಗ್ಗೆ ತಿಳಿಸಿ. ಜಿಲ್ಲೆಯಲ್ಲಿ ಮುಂದಿನ ದಿನಗಳಲ್ಲಿ ಕರೊನಾದಿಂದ ಸಾವು ಸಂಭವಿಸಿದ ಪ್ರಕರಣಗಳು ಕಂಡುಬಂದಲ್ಲಿ ಹಾಗೂ ಅವರು ಕರೊನಾ ಲಸಿಕೆ ಪಡೆದಿಲ್ಲ ಎಂದು ತಿಳಿದು ಬಂದರೆ ತಮ್ಮ ವ್ಯಾಪ್ತಿಯಲ್ಲಿ ಉತ್ತಮವಾಗಿ ಕೆಲಸ ನಿರ್ವಹಣೆಯಾಗಿಲ್ಲ ಎಂದು ಪರಿಗಣಿಸಬೇಕಾಗುತ್ತದೆ. ಇಲಾಖೆ ಅಧಿಕಾರಿಗಳು ಸಮನ್ವಯದೊಂದಿಗೆ ಕಾರ್ಯನಿರ್ವಹಿಸಿ ಎಂದು ಖಡಕ್ ಎಚ್ಚರಿಕೆ ನೀಡಿದರು.
ಮುಂದಿನ ಸಭೆಯಲ್ಲಿ ಸಾಧನೆಯನ್ನು ತಿಳಿಸಿ :
ಸಾರ್ವಜನಿಕ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಮಾಜ ಕಲ್ಯಾಣ, ಹಿಂದುಳಿದ ವರ್ಗದ ಹಾಸ್ಟೆಲ್ ಮಕ್ಕಳ ಪಾಲಕರು, ಜಿಪಂನವರು ನರೇಗಾ ಫಲಾನುಭವಿಗಳು, ಇಂಜಿನಿಯರಿಂಗ್ ಇಲಾಖೆಗಳು ತಮ್ಮ ವ್ಯಾಪ್ತಿಯಲ್ಲಿ ಕಾಮಗಾರಿಗಳಲ್ಲಿ ಕೆಲಸ ನಿರ್ವಹಿಸುವ ಕಾರ್ಮಿಕರು, ಕೈಗಾರಿಕೆ ಇಲಾಖೆ ಅವರು ಕೈಗಾರಿಕೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಕಾರ್ಮಿಕರು, ಹೀಗೆ ಪ್ರತಿಯೊಂದು ಇಲಾಖೆಯು ತಮ್ಮ ವ್ಯಾಪ್ತಿಯಲ್ಲಿ ಲಸಿಕೆ ಪಡೆದಿರುವ ಬಗ್ಗೆ ಖಾತ್ರಿ ಮಾಡಿಕೊಳ್ಳಿ. ಮುಂದಿನ ಸಭೆಯಲ್ಲಿ ಪ್ರತಿಯೊಬ್ಬ ಇಲಾಖೆ ಅಧಿಕಾರಿಗಳು ತಮ್ಮ ಸಾಧನೆಯನ್ನು ತಿಳಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ತುಷಾರ್ ಗಿರಿನಾಥ್ ಸೂಚಿಸಿದರು.
ನೇತನಹಳ್ಳಿ ಗ್ರಾಪಂ ರಾಜ್ಯಕ್ಕೆ ಮಾದರಿ : ಕರೊನಾಮುಕ್ತಗೊಳಿಸುವ ಮೂಲಕ ನೇತನಹಳ್ಳಿ ಗ್ರಾಮ ಪಂಚಾಯಿತಿ ಇಡೀ ರಾಜ್ಯಕ್ಕೆ ಮಾದರಿಯಾಗಿದೆ ಎಂದು ಗ್ರಾಪಂ ಅಧ್ಯಕ್ಷ ಪುರುಷೋತ್ತಮ್ ಸಂತಸ ವ್ಯಕ್ತಪಡಿಸಿದರು.
ಜಿಲ್ಲಾ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ತಾಲೂಕಿನ ನೇತೇನಹಳ್ಳಿ ಪಂಚಾಯಿತಿ ವ್ಯಾಪ್ತಿಯ ವಿಶ್ವನಾಥಪುರ ಗ್ರಾಮದ 18 ವರ್ಷ ಮೇಲ್ಪಟ್ಟವರು ಎಲ್ಲರೂ ಲಸಿಕೆ ಪಡೆದಿದ್ದು, ಇದಕ್ಕೆ ಪಂಚಾಯಿತಿ ಅಧಿಕಾರಿ, ಸಿಬ್ಬಂದಿ, ಆಶಾ, ಅಂಗನವಾಡಿ, ಆರೋಗ್ಯ ಕಾರ್ಯಕರ್ತರ ಶ್ರಮ ಕಾರಣ. ಇವರೆಲ್ಲರ ಕಾರ್ಯ ಶ್ಲಾಘನೀಯ ಎಂದರು.
ಲಸಿಕಾ ಅಭಿಯಾನ ಯಶಸ್ವಿಯಾದ ಹಿನ್ನೆಲೆಯಲ್ಲಿ ಪಂಚಾಯಿತಿ ಸಾಧನೆ ಮೆಚ್ಚಿ ಜಿಲ್ಲಾಡಳಿತ ಪ್ರಶಂಸೆ ವ್ಯಕ್ತಪಡಿಸಿರುವುದು ಹೆಮ್ಮೆಯ ಸಂಗತಿ ಎಂದರು. ನೇತೇನಹಳ್ಳಿ ಗ್ರಾಪಂ ಅಧ್ಯಕ್ಷ ಪುರುಷೋತ್ತಮ್ ಅವರಿಗೆ ಪ್ರಶಂಸನಾ ಪತ್ರ ವಿತರಿಸಿ ಸನ್ಮಾನಿಸಲಾಯಿತು. ಜಿಪಂ ಸಿಇಒ ಇಕ್ರಂ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ತುಷಾರ್ ಗಿರಿನಾಥ್, ಜಿಲ್ಲಾಧಿಕಾರಿ ಡಾ. ಕೆ. ರಾಕೇಶ್ ಕುಮಾರ್ ಉಪಸ್ಥಿತರಿದ್ದರು.