

| ಮೃತ್ಯುಂಜಯ ಕಪಗಲ್ ಬೆಂಗಳೂರು
ದೀಪಾವಳಿ ಹಬ್ಬದ ಸಂಭ್ರಮ -ಸಡಗರದ ಜತೆಗೆ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿ ಗುರುವಾರ (ನ.4) ನೂರು ದಿನಗಳನ್ನು ಪೂರೈಸಿದ ಸಂತಸವೂ ಸೇರಲಿದೆ. ಇದೇ ವೇಳೆ ಆಡಳಿತ, ಆರ್ಥಿಕ, ರಾಜಕೀಯವಾಗಿ ಎದುರಾದ ಸಮಸ್ಯೆ-ಸವಾಲುಗಳನ್ನು ನಿರ್ವಹಿಸಿದ ರೀತಿ, ಇತಿಮಿತಿಯೊಳಗೆ ಅಭಿವೃದ್ಧಿಯಲ್ಲಿ ಸಾಧಿಸಿದ ಪ್ರಗತಿ ಕುರಿತು ಸ್ಥೂಲ ಮಾಹಿತಿ ಪ್ರಕಟಿಸಲು ಸರ್ಕಾರ ಸಿದ್ಧತೆ ಮಾಡಿಕೊಂಡಿದೆ. ಆ ಮೂಲಕ ನುಡಿದಂತೆ ನಡೆಯುವ ಸರ್ಕಾರವೆಂದು ಸಾರುವುದು ಬೊಮ್ಮಾಯಿ ಇಚ್ಛೆಯಾಗಿದ್ದು, ಆಡಳಿತ ಯಂತ್ರಾಂಗ ಚುರುಕುಗೊಂಡಿದೆ, ಆರ್ಥಿಕತೆ ಚೇತರಿಕೆಗೆ ಅನುಗುಣವಾಗಿ ಅಭಿವೃದ್ಧಿ ಕೆಲಸಕ್ಕೆ ಬದ್ಧವೆಂಬ ಸಂದೇಶ ನೀಡಲು ಮುಂದಾಗಿದ್ದಾರೆ.
ದೆಹಲಿಗೆ ದೌಡು: ಉಪ ಚುನಾವಣೆ ಫಲಿತಾಂಶದ ವಿಶ್ಲೇಷಣೆ, ಆಡಳಿತ ಹಾಗೂ ಅಭಿವೃದ್ಧಿ ಶೈಲಿ ಕುರಿತು ಕಾವೇರಿದ ಚರ್ಚೆ ನಡೆಯುತ್ತಿದೆ. ಈ ನಡುವೆ, ನ.6ರಂದು ಬೊಮ್ಮಾಯಿ ಮತ್ತೊಮ್ಮೆ ದೆಹಲಿ ಪ್ರವಾಸಕ್ಕೆ ಸಜ್ಜಾಗಿದ್ದಾರೆ. ದೆಹಲಿಯಲ್ಲಿ ನ.7ರಂದು ನಡೆಯಲಿರುವ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಪಾಲ್ಗೊಂಡು ಅದೇ ದಿನ ಬೆಂಗಳೂರಿಗೆ ಮರಳುವರು. ಸಿಎಂ ಮಾತ್ರ ದೆಹಲಿಗೆ ತೆರಳುತ್ತಿದ್ದಾರೆ. ಉಳಿದ ಮುಖಂಡರು ವರ್ಚುವಲ್ ಆಗಿ ಸಭೆಯಲ್ಲಿ ಭಾಗವಹಿಸುವರು. ನ.8ರಂದು ಸಚಿವ ಸಂಪುಟ ಸಭೆ ನಡೆಯಲಿದ್ದರೆ, ನ.9ರಂದು ಪಕ್ಷದ ರಾಜ್ಯ ಕಚೇರಿಯಲ್ಲಿ ಆಯೋಜಿಸಿರುವ ರಾಜ್ಯ ಸಮಿತಿ ಪದಾಧಿಕಾರಿಗಳ ಸಭೆಯಲ್ಲಿ ಭಾಗವಹಿಸುವರು.
ದೆಹಲಿ ಪ್ರವಾಸದ ವೇಳೆ ರಾಜ್ಯ ರಾಜಕೀಯ ವಿದ್ಯಮಾನ, ಸರ್ಕಾರ ಮತ್ತು ಪಕ್ಷದ ವರ್ಚಸ್ಸು ವೃದ್ಧಿಗೆ ಕೈಗೊಳ್ಳಬೇಕಾದ ಕ್ರಮಗಳು ಚರ್ಚೆಯಾಗಲಿವೆ. ಅಲ್ಲದೆ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಜತೆ ಮಾತುಕತೆಗೆ ಅವಕಾಶ ಸಿಕ್ಕರೆ ಸಚಿವ ಸಂಪುಟ ವಿಸ್ತರಣೆ ಕುರಿತು ರ್ಚಚಿಸುವ ಸಾಧ್ಯತೆಗಳಿವೆ.
ಸವಾಲುಗಳ ಸರಣಿ: ಉಪ ಚುನಾವಣೆ ಬಳಿಕ ಸಚಿವ ಸಂಪುಟ ವಿಸ್ತರಣೆ, ನಿಗಮ-ಮಂಡಳಿಗಳ ಪುನರ್ ರಚನೆಗೆ ಕ್ರಮವೆಂದು ಪಕ್ಷದ ನಾಯಕರು ಭರವಸೆ ನೀಡಿರುವ ಹಿನ್ನೆಲೆಯಲ್ಲಿ ಈ ಬೇಡಿಕೆ ಮತ್ತೆ ಮುನ್ನೆಲೆಗೆ ಬರುವ ನಿರೀಕ್ಷೆಯಿದೆ. ಖಾಲಿಯಿರುವ ನಾಲ್ಕು ಸ್ಥಾನಗಳಿಗೆ ಹಿರಿತನ, ಪ್ರದೇಶ, ಜಿಲ್ಲೆ-ಸಮುದಾಯ ಹಾಗೂ ಪಕ್ಷಕ್ಕೆ ಲಾಭದ ಲೆಕ್ಕಾಚಾರದಲ್ಲಿ ಡಜನ್ಗೂ ಹೆಚ್ಚು ಆಕಾಂಕ್ಷಿಗಳಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರ ನೇಮಕ ಹಾಗೂ ನಿಗಮ-ಮಂಡಳಿಗಳ ಮರು ರಚನೆಯು ಬೊಮ್ಮಾಯಿ ಪಾಲಿಗೆ ಕಗ್ಗಂಟಾಗಿದ್ದು, ವರಿಷ್ಠರ ಮಧ್ಯೆ ಪ್ರವೇಶ ಅನಿವಾರ್ಯವಾಗಿದೆ ಎಂದು ಪಕ್ಷದ ಮೂಲಗಳು ಹೇಳುತ್ತವೆ.
ಅಗತ್ಯ ತಯಾರಿ: ವಿಧಾನಪರಿಷತ್ನ ಸ್ಥಳೀಯ ಸಂಸ್ಥೆಗಳ 25 ಕ್ಷೇತ್ರಗಳು, ಜಿಲ್ಲಾ, ತಾಲೂಕು ಪಂಚಾಯಿತಿ ಚುನಾವಣೆಗೆ ಪೂರಕವಾಗಿ ಸರ್ಕಾರ ಮತ್ತು ಪಕ್ಷದ ವರ್ಚಸ್ಸು ವೃದ್ಧಿಗೂ ಬೊಮ್ಮಾಯಿ ಅಗತ್ಯ ತಯಾರಿ ಮಾಡಿಕೊಳ್ಳಬೇಕಾಗಿದೆ. 2023ರ ಸಾರ್ವತ್ರಿಕ ಚುನಾವಣೆ ದೃಷ್ಟಿಯಿಂದ ಬಿಬಿಎಂಪಿ ಚುನಾವಣೆಯೂ ಅಷ್ಟೇ ಮಹತ್ವದ್ದಾಗಿದ್ದು, ಆಂತರಿಕ ಒತ್ತಡ ದಿನಗಳೆದಂತೆ ಹೆಚ್ಚಾಗುತ್ತಿದೆ. ತಮಿಳುನಾಡು ಮಾದರಿಯಲ್ಲಿ ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆ ಕಡಿತ ಮಾಡಿದರೆ ಮುಂದಿನ ಚುನಾವಣೆಗೆ ಪಕ್ಷಕ್ಕೆ ಪ್ಲಸ್ ಪಾಯಿಂಟ್ ಆಗಲಿದೆ ಎಂದು ಕೆಲವರು ಸಲಹೆ ನೀಡಿದ್ದಾರೆ.
ಯಾವುದೇ ಒಂದು ಸರ್ಕಾರಕ್ಕೆ 100 ದಿನಗಳು ದೊಡ್ಡದಲ್ಲ, ವಿಶೇಷವಲ್ಲ. ಈ ಅವಧಿಯಲ್ಲಿ ಏನು ಮಾಡಿದ್ದೇವೆ ಎನ್ನುವುದು ಮುಖ್ಯ. ಹೀಗಾಗಿ ನೂರು ದಿನಗಳಲ್ಲಿ ಸರ್ಕಾರದ ದಿಕ್ಸೂಚಿ, ನಡೆದು ಬಂದ ದಾರಿ, ಈಡೇರಿಸಿದ ಭರವಸೆಗಳ ಕುರಿತು ಸ್ಥೂಲ ಮಾಹಿತಿ ಜನರ ಮುಂದಿಡುವೆ.
| ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ
ಶ್ರೇಯಾಂಕದಲ್ಲಿ ಕುಸಿತ
ರಾಜ್ಯದ ಆಡಳಿತಗಳ ಕಾರ್ಯಕ್ಷಮತೆಗೆ ಸಂಬಂಧಿಸಿದ ವರದಿಯನ್ನು ಕೇಂದ್ರದ ಸಾರ್ವಜನಿಕ ವ್ಯವಹಾರಗಳ ಸಂಸ್ಥೆ (ಪಿಎಐ) ಬಿಡುಗಡೆ ಮಾಡಿದೆ. ಆಡಳಿತ ಕಾರ್ಯಕ್ಷಮತೆ ಶ್ರೇಯಾಂಕದಲ್ಲಿ ಕರ್ನಾಟಕ ಕಳೆದ ವರ್ಷ ನಾಲ್ಕನೇ ಸ್ಥಾನದಲ್ಲಿತ್ತು. ಈ ಬಾರಿ 0.121 ಸೂಚ್ಯಂಕದೊಂದಿಗೆ ಏಳನೇ ಸ್ಥಾನಕ್ಕೆ ಕುಸಿದಿದೆ. ದಕ್ಷಿಣ ಭಾರತದ ಕೇರಳ, ತಮಿಳುನಾಡು ಮತ್ತು ತೆಲಂಗಾಣ ರಾಜ್ಯಗಳು ಮೊದಲ ಮೂರು ಸ್ಥಾನ ಗಳಿಸಿರುವುದು ಗಮನಾರ್ಹ ಬೆಳವಣಿಗೆಯಾಗಿದೆ. ಸುಸ್ಥಿರ ಅಭಿವೃದ್ಧಿಗೆ ನಿಗದಿತ 14 ಗುರಿಗಳಲ್ಲಿ ಸಾಧನೆ, 43 ಸೂಚಕಗಳ ಪರಿಗಣನೆ, ಕೇಂದ್ರ ಪುರಸ್ಕೃತ ಯೋಜನೆಗಳ ಪರಿಣಾಮಕಾರಿ ಅನುಷ್ಠಾನ ಹಾಗೂ ಕರೊನಾ ಸೋಂಕು ನಿಯಂತ್ರಣದಲ್ಲಿ ಯಶಸ್ಸು ಆಧರಿಸಿ ಈ ರ್ಯಾಂಕ್ ನೀಡಲಾಗುತ್ತದೆ. ಅಧಿಕೃತವಾಗಿ ಲಭ್ಯ ದತ್ತಾಂಶಗಳನ್ನು ವಿಶ್ಲೇಷಿಸಿ, ಸಮರ್ಪಕ ಆಡಳಿತ ಹಾಗೂ ಗುಣಮಟ್ಟದ ವಾರ್ಷಿಕ ಮೌಲ್ಯಮಾಪನ ನಡೆಸಿದ ಬಳಿಕ ಶ್ರೇಯಾಂಕ ನೀಡಲಾಗುತ್ತಿದ್ದು, ರಾಜ್ಯದ ಶ್ರೇಯಾಂಕ ಕುಸಿತ ಕಳವಳಕ್ಕೆ ಎಡೆಮಾಡಿಕೊಟ್ಟಿದೆ ಎಂದು ಮೂಲಗಳು ತಿಳಿಸಿವೆ. ಸಿಎಂ ಆಗಿ ಬೊಮ್ಮಾಯಿ ಅಧಿಕಾರ ಸ್ವೀಕರಿಸಿದ ದಿನವೇ ಅಧಿಕಾರಿಗಳಿಗೆ ಚಾಟಿ ಬೀಸಿದ್ದರು. ಆದರೆ ಆಡಳಿತ ಯಂತ್ರಾಂಗದ ಜಡತ್ವ ಅಭಿವೃದ್ಧಿ ಯೋಜನೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ ಎಂದು ದೂರುಗಳಿವೆ.