ಎನ್‌ಟಿಎಚ್ ಕ್ಷೇತ್ರದಲ್ಲಿ 100 ಕೋಟಿ ವಹಿವಾಟು ಗುರಿ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕರೆ

nth office
Published on

ಬೆಂಗಳೂರು: ಮುಂದಿನ ಮೂರು ವರ್ಷದಲ್ಲಿ ನ್ಯಾಷನಲ್ ಟೆಸ್ಟಿಂಗ್ ಹೌಸ್ (ಎನ್‌ಟಿಎಚ್) ಕೇಂದ್ರದಿಂದ 100 ಕೋಟಿ ರೂ. ಮೊತ್ತದ ವಹಿವಾಟು ನಡೆಸಲು ಉದ್ದೇಶಿಸಲಾಗಿದೆ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಇಲಾಖಾ ಸಚಿವ ಪ್ರಹ್ಲಾದ್ ಜೋಶಿ ಪ್ರಕಟಿಸಿದರು.

ನಗರದ ಜಕ್ಕೂರು ಬಡಾವಣೆಯಲ್ಲಿರುವ ಪ್ರಾದೇಶಿಕ ಪ್ರಮಾಣಿತ ಆಧಾರಿತ ಪ್ರಯೋಗಾಲಯ (ಆರ್‌ಆರ್‌ಎಸ್‌ಎಲ್) ಕ್ಯಾಂಪಸ್‌ನಲ್ಲಿ ಹೊಸದಾಗಿ ಇವಿ ಪರೀಕ್ಷಾ ಸೌಲಭ್ಯ ಒಳಗೊಂಡ ಎನ್‌ಟಿಎಚ್ ಘಟಕ ಸ್ಥಾಪನೆಗೆ ಶಿಲಾನ್ಯಾಸ ನೆರವೇರಿಸಿ ಗುರುವಾರ ಮಾತನಾಡಿದರು.

ಪ್ರಸ್ತುತ ಎನ್‌ಟಿಎಚ್ ವಾರ್ಷಿಕ 30 ಕೋಟಿ ರೂ. ಮೊತ್ತದ ವಹಿವಾಟು ನಡೆಸುತ್ತಿದೆ. ಹೊಸ ತಂತ್ರಜ್ಞಾನ ಹಾಗೂ ಆವಿಷ್ಕಾರಗಳ ಮೂಲಕ 3 ವರ್ಷದಲ್ಲಿ 100 ಕೋಟಿ ರೂ. ವಹಿವಾಟು ಸಾಧಿಸಿ ಖಾಸಗಿ ಕ್ಷೇತ್ರದಲ್ಲಿ ಸರ್ಕಾರಿ ಸಂಸ್ಥೆಯು ಸ್ಪರ್ಧೆ ಒಡ್ಡಿ ಯಶಸ್ವಿಯಾಗಬೇಕು. ಇದಕ್ಕಾಗಿ ತಮ್ಮ ಸರ್ಕಾರ ಅನುದಾನ ಸೇರಿದಂತೆ ಎಲ್ಲ ರೀತಿಯ ಸಹಕಾರ ನೀಡಲು ಸಿದ್ಧವಿದೆ. ಸದ್ಯದಲ್ಲೇ ಮುಂಬೈ ಹಾಗೂ ಕೋಲ್ಕತ್ತಾದ ಎನ್‌ಟಿಎಚ್ ಕೇಂದ್ರಗಳಲ್ಲಿ ಇವಿ ಪರೀಕ್ಷಾ ಸೌಲಭ್ಯಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದರು.

2030ರ ವೇಳೆಗೆ ದೇಶದ ಶೇ.30 ವಾಹನಗಳು ಎಲೆಕ್ಟ್ರಿಕ್ ವೆಹಿಕಲ್‌ಗಳಾಗಿ ಮಾರ್ಪಡಿಸಲು ಸರ್ಕಾರ ಗುರಿ ಹೊಂದಿದೆ. ಇದಕ್ಕಾಗಿ ಇವಿ ಕ್ಷೇತ್ರಕ್ಕೆ ಅಗತ್ಯ ಮೂಲಸೌಕರ್ಯ ಕಲ್ಪಿಸಲಾಗುತ್ತಿದೆ. ಇವಿ ಬ್ಯಾಟರಿ ಹಾಗೂ ಚಾರ್ಜಿಂಗ್ ಸಾಧನಗಳ ಪರೀಕ್ಷೆಗೆ ಸರ್ಕಾರಿ ಸ್ವಾಮ್ಯದ ಎನ್‌ಟಿಎಚ್‌ನಲ್ಲೇ ಶೇ.100 ನಿಖರತೆ, ಗುಣಮಟ್ಟ ಕಾಯ್ದುಕೊಳ್ಳುವ ಸೌಲಭ್ಯವನ್ನು ಒದಗಿಸಲಾಗುವುದು. ಬೆಂಗಳೂರಿನ ಘಟಕವು 8 ತಿಂಗಳಲ್ಲಿ ಅಸ್ತಿತ್ವಕ್ಕೆ ಬರಲಿದ್ದು, ಆ ಬಳಿಕ ಸರ್ಕಾರಿ ಸಂಸ್ಥೆಯಿಂದಲೇ ಇವಿ ಪರೀಕ್ಷಾ ಪ್ರಮಾಣಪತ್ರಗಳನ್ನು ವಿತರಿಸಲಾಗುವುದು ಎಂದು ತಿಳಿಸಿದರು.

500 ಗಿಗಾವ್ಯಾಟ್ ಉತ್ಪಾದನೆ ಗುರಿ:

ಪರಿಸರದ ದೃಷ್ಟಿಯಿಂದ ನವೀಕರಿಸಬಹುದಾದ ಇಂಧನ ಉತ್ಪಾದನೆ ಹಾಗೂ ಬಳಕೆಯನ್ನು ಸರ್ಕಾರ ಉತ್ತೇಜಿಸುತ್ತಿದೆ. ಇದಕ್ಕಾಗಿ ಸೌರ, ಪವನ ಹಾಗೂ ಜಲ ಮೂಲದಿಂದ ವಿದ್ಯುತ್ ಉತ್ಪಾದಿಸಲು ಹೆಚ್ಚಿನ ಒತ್ತು ನೀಡಲಾಗಿದೆ. 2030ರ ವೇಳೆಗೆ 500 ಗಿಗಾ ವ್ಯಾಟ್ ಪ್ರಮಾಣದಷ್ಟು ನವೀಕರಿಸಬಹುದಾದ ಇಂಧನ ಉತ್ಪಾದನೆಗೆ ಗುರಿ ಹೊಂದಿದ್ದು, ಅದನ್ನು ಜಗತ್ತಿಗೆ ಸಾಧಿಸಿ ತೋರಿಸಲು ಸಂಕಲ್ಪ ಕೈಗೊಳ್ಳಲಾಗಿದೆ ಎಂದು ಸಚಿವ ಪ್ರಹ್ಲಾದ್ ಜೋಶಿ ವಿವರಿಸಿದರು.

ಇದೇ ವೇಳೆ ಸಚಿವ ಜೋಶಿ ಅವರು ಆರ್​​ಆರ್​​ಎಸ್​​ಎಲ್​ ಹಾಗೂ ಎನ್​​ಟಿಎಚ್​​ ಜಂಟಿಯಾಗಿ ಆಯೋಜಿಸಿದ್ದ ವಿವಿಧ ಸಾಧನಗಳ ತಪಾಸಣೆ, ಪರೀಕ್ಷೆ ಹಾಗೂ ಪ್ರಯೋಗಾಲಯದ ಉಪಕರಣಗಳ ಪ್ರದರ್ಶನವನ್ನು ವೀಕ್ಷಿಸಿ ಸಂಸ್ಥೆಯ ಕಾರ್ಯಕ್ಕೆ ಬೆನ್ನುತಟ್ಟಿದರು.

ಕಾರ್ಯಕ್ರಮದಲ್ಲಿ ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವಾಲಯದ ಜಂಟಿ ಕಾರ್ಯದರ್ಶಿ ಅನುಪಮ್ ಮಿಶ್ರಾ, ಹೆಚ್ಚುವರಿ ಕಾರ್ಯದರ್ಶಿ ಭರತ್ ಖೇರಾ, ಎನ್‌ಟಿಎಚ್ ಡಿಜಿ ಡಾ. ಅಲೋಕ್‌ಕುಮಾರ್ ಶ್ರೀವಾಸ್ತವ, ನಿರ್ದೇಶಕ ಅಶುತೋಷ್ ಅಗರ್‌ವಾಲ್ ಹಾಜರಿದ್ದರು.

ಎನ್‌ಟಿಸಿ ಕಾರ್ಯಕ್ಕೆ ಶ್ಲಾಘನೆ:

ನ್ಯಾಷನಲ್ ಟೆಸ್ಟಿಂಗ್ ಹೌಸ್ (ಎನ್‌ಟಿಎಚ್) ತನ್ನ ಅತ್ಯುತ್ತಮ ಕಾರ್ಯದಿಂದಾಗಿ ದೇಶದೆಲ್ಲೆಡೆ ಖ್ಯಾತಿ ಪಡೆದಿದೆ. ಸಂಸತ್ ಭವನ ಸೆಂಟ್ರಲ್ ವಿಸ್ತಾ ನಿರ್ಮಾಣದ ವೇಳೆ ಗುಣಮಟ್ಟ ಪರೀಕ್ಷೆ ಸೇರಿ ಮೆಟ್ರೋ-ಬುಲೆಟ್ ರೈಲು, ಜಲ್‌ಜೀವನ್ ಮಿಷನ್, ಡ್ರೋನ್ ಉಪಕರಣಗಳು ಒಳಗೊಂಡ ಬಹುತೇಕ ಸಾಧನಗಳ ಪರೀಕ್ಷೆಯನ್ನು ಸಂಸ್ಥೆಯು ನಿಖರವಾಗಿ ನಡೆಸಿ ಪ್ರಮಾಣೀಕರಿಸಿದೆ. ಜಾಗತಿಕ ಮಟ್ಟದ ಲಿತಾಂಶದಿಂದಾಗಿ ಎನ್‌ಟಿಎಚ್ ತಯಾರಕರು, ಉತ್ಪಾದಕರು ಹಾಗೂ ವಿತರಕರಲ್ಲಿ ಹೆಚ್ಚು ವಿಶ್ವಾಸ ಮೂಡಿಸಿದೆ ಎಂದು ಸಚಿವ ಜೋಶಿ ಶ್ಲಾಘಿಸಿದರು.

ದೇಶದಲ್ಲಿ ಉತ್ತಮ ಗುಣಮಟ್ಟದ ಪರೀಕ್ಷಾ ಸೌಲಭ್ಯದ ಲಭ್ಯತೆಯು ಜಾಗತಿಕ ಮಾರುಕಟ್ಟೆಯಲ್ಲಿ ಭಾರತೀಯ ತಯಾರಕರಿಗೆ ಹೆಚ್ಚಿನ ಸ್ಪರ್ಧಾತ್ಮಕತೆಯನ್ನು ಎದುರಿಸಲು ಖಾತ್ರಿ ನೀಡಿದೆ. ಎನ್‌ಟಿಎಚ್ ಕೂಡ ತಮ್ಮ ಸಾಮರ್ಥ್ಯ ಮೀರಿ ಉತ್ತಮ ಕೆಲಸ ಮಾಡುತ್ತಿದೆ. ಭವಿಷ್ಯದಲ್ಲಿ ಇವಿ ಟೆಸ್ಟಿಂಗ್ ಸೌಲಭ್ಯದಿಂದ ಸರ್ಕಾರಿ ಸಂಸ್ಥೆಯೇ ಪ್ರಮಾಣಿಕರಿಸಿದ ಪತ್ರಗಳನ್ನು ಒದಗಿಸಲಿದೆ.

- ಪ್ರಹ್ಲಾದ್ ಜೋಶಿ, ಕೇಂದ್ರ ಗ್ರಾಹಕ ವ್ಯವಹಾರಗಳ ಇಲಾಖಾ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net