

ಲೂದಿಯಾನಾ: ಮನೆಯಲ್ಲಿ ಆರ್ಥಿಕ ಸಮಸ್ಯೆ ಇದ್ದಿದ್ದರಿಂದ ಶಾಲೆಗೆ ಹೋಗಲಾಗದೇ ಎರಡನೇ ತರಗತಿಯಲ್ಲಿ ಮದ್ಯಂತರಕ್ಕೆ ಶಾಲೆ ಬಿಟ್ಟಿದ್ದ 10 ವರ್ಷದ ಪಂಜಾಬ್ ಬಾಲಕನ ನೆರವಿಗೆ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಧಾವಿಸಿದ್ದಾರೆ.
ಲೂದಿಯಾನಾದ ಬಾಲಕ ವಂಶ್ ಸಿಂಗ್ ಎನ್ನುವ ಬಾಲಕ ಶಾಲೆ ಬಿಟ್ಟು ಟ್ರಾಫಿಕ್ ಸಿಗ್ನಲ್ಗಳಲ್ಲಿ ಸಾಕ್ಸ್ಗಳನ್ನು ಮಾರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದನ್ನು ಗಮನಿಸಿದ್ದ ಸಿಎಂ ಅಮರಿಂದರ್ ಸಿಂಗ್ ಅಧಿಕಾರಿಗಳ ಮೂಲಕ ಬಾಲಕನಿಗೆ ವಿಡಿಯೋ ಕಾಲ್ ಮಾಡಿ ಮಾತನಾಡಿದ್ದಾರೆ.
ಕೂಡಲೇ ಬಾಲಕನನ್ನು ಶಾಲೆಗೆ ದಾಖಲಿಸಿ, ಸದ್ಯ ಈ ಕರೊನಾದ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಆನ್ಲೈನ್ ತರಗತಿಗಳನ್ನು ಕಲಿಯಲು ಮಾಡಿ ಕೊಟ್ಟಿರುವ ಅನುಕೂಲಗಳನ್ನೂ ಈ ವಿದ್ಯಾರ್ಥಿಗೆ ನೀಡಬೇಕು ಎಂದು ಆದೇಶಿಸಿದ್ದಾರೆ. ಅಲ್ಲದೇ ಸಿಎಂ ಅವರು ತಮ್ಮ ವೈಯಕ್ತಿಕವಾಗಿ ಬಾಲಕನ ಕುಟುಂಬಕ್ಕೆ 2 ಲಕ್ಷ ರೂಪಾಯಿ ನೆರವು ನೀಡಿದ್ದಾರೆ.
ಈ ಕುರಿತು ಟ್ವಿಟ್ಟರ್ನಲ್ಲಿ ಮಾಹಿತಿ ಹಂಚಿಕೊಂಡಿರುವ ಅಮರಿಂದರ್ ಸಿಂಗ್ ಅವರು, ಆರ್ಥಿಕ ಸಮಸ್ಯೆಯಿಂದ ಶಾಲೆ ಬಿಟ್ಟು ಬೀದಿಯಲ್ಲಿ ಸಾಕ್ಸ್ ಮಾರುವ ಬಾಲಕನ ವಿಡಿಯೋ ಗಮನಿಸಿದ್ದು, ಇದೊಂದು ಬೇಸರದ ಸಂಗತಿಯಾಗಿದೆ. ಆ ಬಾಲಕನನ್ನು ಶಾಲೆಗೆ ಸೇರಿಸುವಂತೆ ಲೂದಿಯಾನಾ ಜಿಲ್ಲಾಧಿಕಾರಿಗೆ ಮಾತನಾಡಿದ್ದೇನೆ. ಆತನ ಕುಟುಂಬಕ್ಕೆ 2 ಲಕ್ಷ ರೂ ನೆರವು ನೀಡುತ್ತಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ.